ಕೆ.ಆರ್.ಪೇಟೆ: ಸರ್ಕಾರ ದಲಿತರು ಮತ್ತು ಹಿಂದುಳಿದವರು ವಾಸಿಸುವ ಸ್ಥಳಗಳನ್ನು ಅಭಿವೃದ್ಧಿ ಪಡಿಸಲು ವಾರ್ಷಿಕ ಕೋಟ್ಯಂತರ ರೂ. ಬಿಡುಗಡೆ ಮಾಡುತ್ರಿದೆ. ಜೊತೆಗೆ ಬಹುತೇಕ ಅನುದಾನದಲ್ಲಿ ಶೇ.22ರಷ್ಟು ಹಣ ಹಿಂದುಳಿದವರ ಅಭಿವೃದ್ಧಿಗಾಗಿ ಮೀಸಲಿಡುತ್ತದೆ. ಆದರೆ ಹೊಸಹೊಳಲು ಗ್ರಾಮದಲ್ಲಿ ದಲಿತರು ವಾಸಿಸುವ ಕಾಲೋನಿ ಮಾತ್ರ ಅಭಿವೃದ್ಧಿಯಾಗದೆ ಅಲ್ಲಿನ ನಿವಾಸಿಗಳು ಇಂದಿಗೂ ಕತ್ತಲು, ಕೊಳಚೆ ಮತ್ತು ದುರ್ವಾಸನೆಯಲ್ಲೇ ಬದುಕುತ್ತಿರುವುದು ವಿಪರ್ಯಾಸವೇ ಸರಿ.
ಕೆ.ಆರ್.ಪೇಟೆ ಪುರಸಭಾ ವ್ಯಾಪ್ತಿಗೆ ಸೇರುವ ಈ ಕಾಲೋನಿಯಲ್ಲಿ ಸುಮಾರು ಒಂದು ಸಾವಿರ ದಲಿತರ ಜನಸಂಖ್ಯೆ ಇದೆ. ಕಾಲೋನಿಗೆ ಕನಿಷ್ಠ ಮೂಲ ಸೌಲಭ್ಯ ಒದಗಿಸಿಕೊಡುವಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಶೇ.20ರಷ್ಟು ಮನೆಗಳಲ್ಲಿ ಶೌಚಾಲಯಗಳಿಲ್ಲದೆ ಬಹುತೇಕ ಮಹಿಳೆಯರು ಇಂದಿಗೂ ಬಯಲು ಶೌಚಾಲಯವೇ ಆಶ್ರಯಿಸಿದ್ದಾರೆ.
ಕಳಪೆ ಕಾಮಗಾರಿ ಕಿರಿಕಿರಿ: ಕಾಲೋನಿಯ ರಸ್ತೆಯಲ್ಲಿ 20 ವರ್ಷಗಳ ಹಿಂದೆ ಅಭಿವೃದ್ಧಿ ಪಡಿಸಿ ಚಪ್ಪಡಿ ಬಳಸಿ ಚರಂಡಿ ನಿರ್ಮಾಣ ಮಾಡಿದ್ದರು. ಆ ಸಮಯದಲ್ಲಿ ನೀರು ಸರಾಗವಾಗಿ ಹರಿದು ಹೋರ ಹೋಗುತ್ತಿತ್ತು. ಆದರೆ ಕಳೆದ ಐದು ವರ್ಷಗಳ ಹಿಂದೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿ ನೂತನ ಚರಂಡಿ ನಿರ್ಮಾಣ ಮಾಡಲಾಗಿತ್ತು. ಆದರೆ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದ್ದರಿಂದ ರಸ್ತೆ ಗುಂಡಿ ಬಿದ್ದಿದೆ. ಜನರು ಬರಿಕಾಲಿನಲ್ಲಿ ಓಡಾಡದಂತಾಗಿದೆ. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯಲಾಗಿದೆ ನಿಂತು ಕೊಳೆಯುತ್ತಿದೆ. ಮತ್ತೆ ಕೆಲ ರಸ್ತೆಗೆ ಅಡ್ಡಲಾಗಿ ಚರಂಡಿ ನಿರ್ಮಾಣ ಮಾಡಿದ್ದಾರೆ. ಆದರೆ ಅದಕ್ಕೆ ಕಿರು ಸೇತುವೆ ನಿರ್ಮಾಣ ಮಾಡಿಲ್ಲ. ಆ ರಸ್ತೆಗಳಲ್ಲಿ ವಾಹನಗಳು ಓಡಾಡಲಾಗದೆ ಪಕ್ಕದ ರಸ್ತೆಯನ್ನು ಬಳಸಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಸ ಎತ್ತಲ್ಲ, ಬೀದಿ ದೀಪ ಉರಿಯಲ್ಲ: ದಲಿತಕೇರಿ ಎಂದೆ ಕರೆಯುವ ಹೊಸಹೊಳಲು ಕಾಲೋನಿಯನ್ನು ಪೌರಕಾರ್ಮಿಕರು ಸ್ವಚ್ಛ ಮಾಡುವುದಿಲ್ಲ. ಬದಲಿಗೆ ಅಲ್ಲಿನ ನಿವಾಸಿಗಳೇ ರಸ್ತೆಯನ್ನು ಸ್ವಚ್ಛ ಮಾಡಿ ಕೊಡಬೇಕು. ತಿಂಗಳಿಗೆ ಒಮ್ಮೆ ಅಥವಾ ಎರಡು ಬಾರಿ ಪೌರಕಾರ್ಮಿಕರು ಬಂದು ಕಸವನ್ನು ವಾಹನದಲ್ಲಿ ತುಂಬಿಕೊಂಡು ಹೋಗುತ್ತಾರೆ. ಆದರೆ ಕಸ ಗುಡಿಸಿ ಸ್ವಚ್ಛತೆ ಮಾಡುವುದಿಲ್ಲ ಎಂಬುದು ಸ್ಥಳೀಯ ನಿವಾಸಿಗಳು ಆರೋಪವಾಗಿದೆ. ಇದರ ಜೊತೆಗೆ ಬೀದಿ ದೀಪಗಳ ಬೆಳಕು ಕಂಡು ಆರು ತಿಂಗಳು ಕಳೆದಿದ್ದರೂ ಅಧಿಕಾರಿಗಳು ಇತ್ತ ಮುಖ ಹಾಕಿಲ್ಲ ದುರಸ್ತಿಯೂ ಮಾಡಿಸಿಲ್ಲ. ಮತ್ತೆ ಕೆಲ ದೀಪಗಳು ಗಾಳಿಯಿಂದಾಗಿ ಮೇಲೆಕ್ಕೆ ತಿರುಗಿ ಆಕಾಶಕ್ಕೆ ಬೆಳಕನ್ನು ನೀಡುತ್ತಿವೆ.
ಬಯಲೇ ಶೌಚಾಲಯ: ಕಾಲೋನಿಯಲ್ಲಿ ಬಹುತೇಕ ಬಡ ಕುಟುಂಬಗಳೆ ವಾಸ ಮಾಡುತ್ತಿವೆ. ಕೆಲ ಮನೆಗಳಲ್ಲಿ ಇಂದಿಗೂ ಶೌಚಾಲಯ ನಿರ್ಮಾಣ ಮಾಡಿಕೊಂಡಿಲ್ಲ. ಕೇಂದ್ರ ಸರ್ಕಾರ ಸ್ವಚ್ಛ ಭಾರತ್ ಯೋಜನೆಯಡಿ ಉಚಿತ ಶೌಚಾಲಯ ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರೂ ಮಾಹಿತಿ ಕೊರತೆ ಅಥವಾ ಅಸಹಾಯಕತೆಯಿಂದಾಗಿ ಶೌಚಾಲಯ ಸೌಲಭ್ಯ ಸರ್ಕಾರದಿಂದ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಈಗ ಮಹಿಳೆಯರು ಮಕ್ಕಳು ಬಯಲು ಶೌಚಾಲಯವನ್ನೇ ಆಶ್ರಯಿಸಿದ್ದಾರೆ. ಕೆಲವರು ಮನೆಯ ಮುಂಭಾಗದಲ್ಲಿಯೇ ತೆಂಗಿನ ಗರಿಗಳಿಂದ ತಾತ್ಕಾಲಿಕ ಶೌಚಾಲಯ ನಿರ್ಮಾಣ ಮಾಡಿಕೊಂಡು ಬಳಸುತ್ತಿದ್ದಾರೆ ಎಂದರೆ ಇಲ್ಲಿನ ನಿವಾಸಿಗಳ ಸಮಸ್ಯೆ ಬಿಡಿಸಿ ಹೇಳಬೇಕಾಗಿಲ್ಲ.
● ಎಚ್.ಬಿ.ಮಂಜುನಾಥ್