ಬೆಂಗಳೂರು: ರಾತ್ರೋ ರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನೆಯವರ ಮುಖಕ್ಕೆ ಸ್ಪ್ರೆ ಸಿಂಪಡಿಸಿ ಪಾನೀಪುರಿ ವ್ಯಾಪಾರಿಯನ್ನು ಬರ್ಬರವಾಗಿ ಹತ್ಯೆಗೈದು, ಶವವನ್ನು ಟಾರ್ಪಲಿನ್‌ನಲ್ಲಿ ಸುತ್ತಿ ಮಂಚದ ಕೆಳಗೆ ತಳ್ಳಿ ಪರಾರಿಯಾದ ಘಟನೆ ಕುರುಬರಹಬಳ್ಳಿಯ ಜೆ.ಸಿ.ನಗರದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ನರಸಿಂಹಮೂರ್ತಿ (35) ಕೊಲೆಯಾದ ವ್ಯಕ್ತಿ. ಘಟನೆ ಸಂಬಂಧ ಮೃತನ ತಾಯಿ ಹನುಮಮ್ಮ , ಸೊಸೆ ಅನಿತಾ ಹಾಗೂ ಆಟೋ ಚಾಲಕ ಪ್ರವೀಣ್ ಎಂಬುವರ ವಿರುದ್ಧ ದೂರು ನೀಡಿದ್ದು, ಸದ್ಯ ಮೃತನ ಪತ್ನಿ ಅನಿತಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ತಲೆಮರೆಸಿಕೊಂಡಿರುವ ಆರೋಪಿ ಪ್ರವೀಣ್‌ಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮನಗರದ ನರಸಿಂಹಮೂರ್ತಿ ಏಳು ವರ್ಷಗಳ ಹಿಂದೆ ಅನಿತಾಳನ್ನು ವಿವಾಹವಾಗಿದ್ದು, ದಂಪತಿಗೆ ಐದು ವರ್ಷದ ಪುತ್ರನಿದ್ದಾನೆ. ದಂಪತಿ ಹೊರಗಡೆ ಕೆಲಸಕ್ಕೆ ಹೋಗುತ್ತಿದ್ದರಿಂದ ಮೊಮ್ಮಗನನ್ನು ಅಜ್ಜಿ ಹನುಮಮ್ಮ ಊರಿನಲ್ಲಿಯೇ ಪಾಲನೆ ಮಾಡುತ್ತಿದ್ದಾರೆ. ಐದು ವರ್ಷಗಳ ಹಿಂದೆ ನಗರಕ್ಕೆ ಬಂದು ಕುರುಬರಹಳ್ಳಿಯ ಬಾಡಿಗೆ ಮನೆಯಲ್ಲಿ ನೆಲೆಸಿರುವ ದಂಪತಿ, ಮನೆ ಬಳಿಯೇ ತಳ್ಳುಗಾಡಿಯಲ್ಲಿ ಪಾನೀಪುರಿ ವ್ಯಾಪಾರ ಮಾಡುತ್ತಿದ್ದರು.
ಕೊಂದು ಮೂಟ್ಟೆ ಕಟ್ಟಿದ್ದರು: ಗುರುವಾರ ರಾತ್ರಿ ವ್ಯಾಪಾರ ಮುಗಿಸಿ 11 ಗಂಟೆ ಸುಮಾರಿಗೆ ಮನೆಗೆ ಬಂದ ನರಸಿಂಹಮೂರ್ತಿ, ಊಟ ಮುಗಿಸಿ ಪತ್ನಿ ಅನಿತಾ ಜತೆ ಮಾತನಾಡುತ್ತಿದ್ದರು. ಈ ವೇಳೆ ಮಾರಕಾಸ್ತ್ರ ಹಿಡಿದು ಮನೆಗೆ ನುಗ್ಗಿದ ದುಷ್ಕರ್ಮಿಗಳು, ಮೊದಲಿಗೆ ದಂಪತಿ ಮುಖಕ್ಕೆ ದ್ರವ್ಯವೊಂದನ್ನು ಸ್ಪ್ರೆà ಮಾಡಿದ್ದಾರೆ.
ಪರಿಣಾಮ ದಂಪತಿ ಪ್ರಜ್ಞೆ ಕಳೆದುಕೊಂಡಿದ್ದು, ಈ ವೇಳೆ ನರಸಿಂಹಮೂರ್ತಿಯನ್ನು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು ಪ್ಲಾಸ್ಟಿಕ್ ಟಾರ್ಪಲ್‌ನಲ್ಲಿ ಸುತ್ತಿ ಶವವನ್ನು ಮಂಚದ ಕೆಳಗೆ ತಳ್ಳಿ ಪರಾರಿಯಾಗಿದ್ದಾರೆ. ಶುಕ್ರವಾರ ನಸುಕಿನಲ್ಲಿ ಎಚ್ಚರಗೊಂಡ ಅನಿತಾ, ಪತಿ ಕಾಣದ್ದರಿಂದ ಮನೆ ತುಂಬ ಹುಡುಕಾಡಿದ್ದಾಋಎ. ಬಳಿಕ ರಕ್ತದ ಕಲೆ ಗಮನಿಸಿ ಮಂಚದ ಕೆಳಗೆ ನೋಡಿದಾಗ ಪತಿಯ ಶವ ಪತ್ತೆಯಾಗಿದೆ. ಕೂಡಲೇ ತಮ್ಮ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನೈತಿಕ ಸಂಬಂಧ: ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಮಹಾಲಕ್ಷಿ ಲೇಔಟ್ ಪೊಲೀಸರು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ನರಸಿಂಹಮೂರ್ತಿಯನ್ನು ಕುತ್ತು ಹಿಸುಕಿ, ನಂತರ ಹೊಟ್ಟೆ ಭಾಗಕ್ಕೆ ಇರಿದು ಕೊಲ್ಲಲಾಗಿದೆ. ಘಟನೆ ಸಂಬಂಧ ನರಸಿಂಹಮೂರ್ತಿಯ ತಾಯಿ ಹನುಮಮ್ಮ ದೂರು ನೀಡಿದ್ದು, “ಸೊಸೆ ಅನಿತಾ ಹಾಗೂ ಆಟೋ ಚಾಲಕ ಪ್ರವೀಣ್ ನಡುವೆ ಅನೈತಿಕ ಸಂಬಂಧವಿತ್ತು.
ಈ ವಿಚಾರ ತಿಳಿದ ನರಸಿಂಹ ಹಲವು ಬಾರಿ ಇಬ್ಬರಿಗೂ ಎಚ್ಚರಿಕೆ ನೀಡಿದ್ದ. ಕೆಲ ದಿನಗಳ ಹಿಂದೆ ದಂಪತಿ ನಡುವೆ ಇದೇ ವಿಚಾರವಾಗಿ ದೊಡ್ಡ ಗಲಾಟೆಯಾಗಿತ್ತು. ಈ ನಡುವೆ ನರಸಿಂಹ, ಪ್ರವೀಣ್ ಮೇಲೆ ಹಲ್ಲೆಗೆ ಮುಂದಾಗಿದ್ದ. ಈ ಹಿನ್ನೆಲೆಯಲ್ಲಿ ನಿತಾ ಹಾಗೂ ಪ್ರವೀಣ್ ಸೇರಿಕೊಂಡು ನನ್ನ ಮಗನನ್ನು ಕೊಲೆಗೈದಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ಮಹಾಲಕ್ಷಿ ಲೇಔಟ್ ಠಾಣೆಯಲ್ಲಿ ದಾಖಲಾಗಿದೆ.