Advertisement

ಸೇನೆ, ಪೊಲೀಸ್‌ ಇಲಾಖೆಗೆ ಸೇರಿ ದೇಶ ಸೇವೆ ಮಾಡಿ; ಹರಿರಾಮ್‌ ಶಂಕರ್‌

06:13 PM Aug 26, 2022 | Team Udayavani |

ಚನ್ನರಾಯಪಟ್ಟಣ: ವಿದ್ಯಾವಂತ ಯುವ ಸಮುದಾಯ ಅಗ್ನಿಪಥ್‌ ಅಥವಾ ಪೊಲೀಸ್‌ ಇಲಾಖೆಗೆ ಸೇರುವ ಮೂಲಕ ದೇಶ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌ ತಿಳಿಸಿದರು.

Advertisement

ಪಟ್ಟಣದ ನವೋದಯ ಶಾಲಾ ಆವರಣದಲ್ಲಿ ಭಾರತ ಸೇವಾ ದಳ ಹಾಗೂ ಕಸಾಪ ಕಸಬಾ ಹೋಬಳಿ ಘಟಕದಿಂದ ನಡೆದ ನಿವೃತ್ತ ಯೋಧರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ದೇಶ ಪ್ರೇಮ ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಗ್ನಿಪಥ್‌ ಯೋಜನೆ ಸಾಕಷ್ಟು ಮಂದಿಗೆ ಉಪಯೋಗವಾಗುತ್ತಿದೆ. ಇಲ್ಲಿ ಉದ್ಯೋಗ ಪಡೆದು ಹೊರ ಬಂದವರು ಶಿಸ್ತು ಹಾಗೂ ದೇಶ ಪ್ರೇಮ ಮೈಗೂಡಿಸಿಕೊಳ್ಳುತ್ತಾರೆ ಎಂದು ಹೇಳಿದರು.

ಸೇನೆ, ಪೊಲೀಸ್‌ ಸೇವೆಗೆ ಸೇರಿ: ಉನ್ನತ ಶಿಕ್ಷಣ ಕಲಿತು ಉದ್ಯೋಗದ ಬಗ್ಗೆ ಆಲೋಚನೆ ಮಾಡುವ ವೇಳೆ ಸಮವಸ್ತ್ರ ಧರಿಸಿ ಉದ್ಯೋಗ ಮಾಡುವುದನ್ನು ಆರಿಸಿಕೊಳ್ಳಿ. ಪೊಲೀಸ್‌ ಅಥವಾ ಸೇನೆಗೆ ಸೇರುವುದು ಒಳಿತು. ಈ ಎರಡೂ ಹುದ್ದೆಯಲ್ಲಿ  ನೀವು ಧರಿಸುವ ಸಮವಸ್ತ್ರ ನಿಮಗೆ ಆತ್ಮಸ್ಥೆರ್ಯ ಹೆಚ್ಚಿಸುತ್ತದೆ. ದೇಶ ಪ್ರೇಮ, ಸೇವಾ ಮನೋಭಾವ ಮೂಡಿಸುತ್ತದೆ ಎಂದರು.

ಯೋಧ, ರೈತನನ್ನು ಸ್ಮರಿಸಿ: ಕಸಾಪ ಜಿಲ್ಲಾಧ್ಯಕ್ಷ ಪ್ರೋ.ಮಲ್ಲೇಶಗೌಡ ಮಾತನಾಡಿ, ಕನ್ನಡಿಗರಿಗೆ ಹೃದಯ ವಿಶಾಲವಾಗಿದ್ದು ಎಲ್ಲಾ ಭಾಷಿಕರೊಂದಿಗೆ ಉತ್ತಮ ಸ್ನೇಹ ಹೊಂದಿರುತ್ತಾರೆ. ಸೈನಿಕರು ಚಳಿಮಳೆ ಎನ್ನದೆ ಗಡಿಯಲ್ಲಿ ದೇಶ ಕಾಯುತ್ತಿರುವುದರಿಂದ ದೇಶ ಒಳಗಿರುವ ನಾವು ಸಕಾಲಕ್ಕೆ ಊಟ ನಿದ್ರೆ ಮಾಡುತ್ತಿದ್ದೇವೆ. ನಿತ್ಯವೂ ರೈತ, ಸೈನಿಕರ ಸೇವೆ ಯನ್ನು ಸ್ಮರಿಸಬೇಕು ಎಂದರು.

12 ಲಕ್ಷ ಕೋಟಿ ರೂ.ವೆಚ್ಚ: ದೇಶದ ರಕ್ಷಣಾ ವಲಯಕ್ಕೆ 12 ಲಕ್ಷ ಕೋಟಿ ರೂ.ವೆಚ್ಚ ಮಾಡಲಾಗುತ್ತಿದೆ. ವಿಶ್ವ ಮಾನವ ಸಂದೇಶವನ್ನು ಎಲ್ಲ ದೇಶದವರು ಅರಿತರೆ ಪ್ರತಿ ದೇಶಗಳು ಸೇನೆಗೆ ವೆಚ್ಚ ಮಾಡುವುದು ಕಡಿಮೆಯಾಗಲಿದೆ. ಇಡಿ ವಿಶ್ವದಲ್ಲಿ ಶೇ.25 ರಷ್ಟು ಹಣ ಸೇನೆ ವೆಚ್ಚ ಮಾಡಲಾಗುತ್ತಿದೆ. ಈ ಹಣದಿಂದ ಅಭಿವೃದ್ಧಿ ಕೆಲಸ ಮಾಡುವ ಮೂಲಕ ಎಲ್ಲರೂ ಸಹೋದರತ್ವದಿಂದ ಬದುಕು ನಡೆಸುವುದನ್ನು ರೂಢಿಸಿಕೊಳ್ಳಬೇಕು ಎಂದರು.

Advertisement

ಚುನಾವಣೆ ಪಾರದರ್ಶಕತ್ವಕ್ಕೆ ಖಾಕಿ, ಸೇನೆ ಕಾರಣ: ಶಾಸಕ ಸಿ.ಎನ್‌.ಬಾಲಕೃಷ್ಣ ಮಾತನಾಡಿ, ದೇಶದಲ್ಲಿ ಚುನಾವಣೆಗಳು ಪಾರದರ್ಶಕವಾಗಿ ನಡೆಯುತ್ತಿರುವುದು ಪೊಲೀಸ್‌ ಹಾಗೂ ಸೇನೆಯವರು ಮಾಡುವ ಕರ್ತವ್ಯದಿಂದ. ಇಲ್ಲದೆ ಹೋದರೆ ಚುನಾವಣೆಯಲ್ಲಿ ಸಾಕಷ್ಟು ಭ್ರಷ್ಟಾಚಾರಗಳು ನಡೆದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕುತ್ತು ಬರುತ್ತಿತ್ತು ಎಂದರು. ಭಾರತ ಉತ್ತಮವಾದ ಭೌಗೋಳಿಕ ಪ್ರದೇಶ ಹೊಂದಿದೆ. ಕಣಿವೆ ಪ್ರದೇಶಗಳು ಈ ದೇಶದ ಶೇ.50ರಷ್ಟು ರಕ್ಷಣೆಯನ್ನು ನೀಡುತ್ತಿವೆ. ಉಳಿದ 50ರಷ್ಟು ರಕ್ಷಣೆ ಸೇನೆಯಿಂದ ದೊರೆಯುತ್ತಿದೆ. ಇಂತಹ ನೆಲದಲ್ಲಿ ಜನ್ಮ ಪಡೆದ ನಾವು ಪುಣ್ಯವಂತರು. ದೇಶಕ್ಕಾಗಿ ನಾವು ಏನು ಮಾಡುತ್ತಿದ್ದೇವೆ ಎನ್ನುವುದನ್ನು ಮನಗಂಡು ಇಂದಿನಿಂದ ದೇಶ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಒಳಿತು ಎಂದರು.

ನಿವೃತ್ತ ಸೈನಿಕರಾದ ಪುಟ್ಟರಾಜು, ದೇವೆಂದ್ರಪ್ಪ, ಆಗಸ್ಟೀನ್‌ ಅವರನ್ನು ಕಸಾಪ ಹಾಗೂ ಭಾರತ ಸೇವಾ ದಳದಿಂದ ಸನ್ಮಾನಿಸಲಾಯಿತು. 75ನೇ ಅಮೃತ ಮಹೋ ತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಭಾರತ ಸೇವಾ ದಳದಿಂದ ಬಹುಮಾನ ವಿತರಣೆ ಮಾಡಲಾಯಿತು.

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರಸನ್ನ, ಬೊಮ್ಮೇಗೌಡ, ನವೋದಯ ಸಂಸ್ಥೆ ಅಧ್ಯಕ್ಷ ಆದಿಶೇಷಕುಮಾರ್‌, ಭಾರತ ಸೇವಾ ದಳದ ತಾ.ಅಧ್ಯಕ್ಷ ನವೀನ್‌, ವಲಯ ಸಂಘಟನಾಧಿಕಾರಿ ರಾಣಿ, ಕಸಾಪ ತಾ.ಅಧ್ಯಕ್ಷ ಲೋಕೇಶ್‌, ಕಸಬಾ ಹೋಬಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next