Advertisement

ಶಾಸಕ ರಾಜು ಕಾಗೆ ಸೇರಿ 6 ಜನರ ಸೆರೆ

03:45 AM Jan 20, 2017 | Team Udayavani |

ಬೆಳಗಾವಿ/ಅಥಣಿ: ಕಾಂಗ್ರೆಸ್‌ ಕಾರ್ಯಕರ್ತ ಹಾಗೂ ಉದ್ಯಮಿ ವಿವೇಕ್‌ ಶೆಟ್ಟಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ತಲೆಮರೆಸಿಕೊಂಡಿದ್ದ ಕಾಗವಾಡ ಶಾಸಕ ರಾಜು ಕಾಗೆ ಸೇರಿದಂತೆ ಕುಟುಂಬದ 6 ಜನರನ್ನು ಪೊಲೀಸರು ಮಹಾರಾಷ್ಟ್ರದ ಪುಣೆಯಿಂದ 120 ಕಿ.ಮೀ. ದೂರದ ಖಾಸಗಿ ರೆಸಾರ್ಟ್‌ನಲ್ಲಿ ಗುರುವಾರ ಬಂಧಿಸಿದ್ದು, ಈ ಪೈಕಿ ಕಾಗೆ ಸೇರಿ ಮೂವರನ್ನು ಫೆ.1ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

Advertisement

ಶಾಸಕ ರಾಜು ಅಲಗೌಡ ಕಾಗೆ, ಸಿದ್ದಗೌಡ ಅಲಗೌಡ ಕಾಗೆ, ಶೋಭಾ ಸಿದ್ದಗೌಡ ಕಾಗೆ, ತೃಪ್ತಿ ರಾಜು ಕಾಗೆ, ಪ್ರಸಾದ ಸಿದ್ದಗೌಡ ಕಾಗೆ, ಕಾರು ಚಾಲಕ ಬಾಹುಬಲಿ ರಾಜೇಂದ್ರ ಚೌಗಲಾ (ಖೋತ) ಎಂಬುವರನ್ನು ಬಂಧಿಸಿ ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಅಥಣಿ ನಾಲ್ಕನೇ ಹೆಚ್ಚುವರಿ ಜೆಎಂಎಫ್‌ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ಪೈಕಿ ಶಾಸಕ ರಾಜು ಕಾಗೆ, ತೃಪ್ತಿ ಕಾಗೆ ಹಾಗೂ ಶೋಭಾ ಕಾಗೆ ಅವರನ್ನು ಫೆ.1ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಸಿದ್ದಗೌಡ ಕಾಗೆ, ಪ್ರಸಾದ ಕಾಗೆ ಹಾಗೂ
ಬಾಹುಬಲಿ ಚೌಗಲಾ(ಖೋತ) ಅವರನ್ನು ಮೂರು ದಿನಗಳ ಕಾಲ ಕಾಗವಾಡ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ವಿವೇಕ್‌ ಶೆಟ್ಟಿ ಮೇಲೆ ಹಲ್ಲೆ ನಡೆಸಿದ ನಂತರ ಪರಾರಿಯಾಗಿದ್ದ ಶಾಸಕ ರಾಜು ಕಾಗೆ ಕುಟುಂಬ ಬುಧವಾರ ರಾತ್ರಿ ಮಹಾರಾಷ್ಟ್ರದ ಪುಣೆಯಿಂದ 120 ಕಿ.ಮೀ. ದೂರದಲ್ಲಿರುವ ರಾಯಗಡ ಜಿಲ್ಲೆಯ ಭೀಮಾಶಂಕರ ಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ತಂಗಿದ್ದಾರೆಂಬ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಆರು ಜನರನ್ನು ಬಂಧಿಸಿದ್ದಾರೆ. ಶಾಸಕರನ್ನು
ವಾಹನದಲ್ಲಿ ಕೋರ್ಟ್‌ ಆವರಣಕ್ಕೆ ಕರೆ ತರುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಜಯ ಘೋಷ ಕೂಗಿದರು. ಅಥಣಿ ನ್ಯಾಯಾಲಯದ ಬಹುತೇಕ ವಕೀಲರು ಕೋರ್ಟ್‌ ಸಭಾಂಗಣದಲ್ಲಿಯೇ ಇದ್ದರು.

ಗೋಕಾಕದಲ್ಲಿ ಶಾಸಕ ಕಾಗೆ ವಿಚಾರಣೆ: ಕಾಗವಾಡ ಬಿಜೆಪಿ ಶಾಸಕ ರಾಜು ಕಾಗೆ ಅವರನ್ನು ಬಂಧಿಸಿ ಮಹಾರಾಷ್ಟ್ರದಿಂದ ಗುರುವಾರ ಬೆಳಗ್ಗೆ ನೇರವಾಗಿ ಗೋಕಾಕಕ್ಕೆ ಕರೆ ತರಲಾಯಿತು. ರಹಸ್ಯ ಸ್ಥಳದಲ್ಲಿ ಗೋಕಾಕ ಡಿವೈಎಸ್‌ಪಿ ಇ.ಎಸ್‌. ವೀರಭದ್ರಯ್ಯ ನೇತೃತ್ವದ ತಂಡ ವಿಚಾರಣೆ ನಡೆಸಿತು. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಅಥಣಿಗೆ ಕರೆದೊಯ್ದು ಸಂಜೆ 6 ಗಂಟೆಗೆ ಕೋಟ್‌ ìಗೆ ಹಾಜರುಪಡಿಸಲಾಯಿತು. 

ಮೂರು ವಾಹನಗಳ ಬಳಕೆ: ಗೋಕಾಕದಿಂದ ಅಥಣಿ ನ್ಯಾಯಾಲಯಕ್ಕೆ ಆರೋಪಿಗಳನ್ನು ಕರೆದುಕೊಂಡು ಬರಲು ಪೊಲೀಸರು ಮೂರು ಪ್ರತ್ಯೇಕ ವಾಹನಗಳನ್ನು ಬಳಸಿದ್ದರು. ಆರೋಪಿಗಳನ್ನು ಕರೆತರುವ ವೇಳೆ ಪೊಲೀಸ್‌ ವಾಹನ ಕಲ್ಲೋಳ್ಳಿ ಗ್ರಾಮದ ಹತ್ತಿರ ಕೆಟ್ಟು ನಿಂತಿತು. ಪೊಲೀಸರು ಬೇರೊಂದು ಪೊಲೀಸ್‌ ವಾಹನ ತರಿಸಿಕೊಂಡು ಮಧ್ಯಾಹ್ನ 3 ಗಂಟೆಗೆ ಹಾಜರು ಪಡಿಸಬೇಕಾಗಿದ್ದ ಆರೋಪಿಗಳನ್ನು ಸಂಜೆ 6 ಗಂಟೆಗೆ ಹಾಜರುಪಡಿಸಿದರು. 

ಪ್ರಕರಣ ಏನು?: ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಕಾಮೆಂಟ್‌  ಮಾಡಿದ್ದಾರೆಂಬ ಆರೋಪದ ಮೇಲೆ ಜ.1ರಂದು ಕಾಂಗ್ರೆಸ್‌ ಕಾರ್ಯಕರ್ತ ಹಾಗೂ ಉದ್ಯಮಿ ವಿವೇಕ್‌ಶೆಟ್ಟಿ ಅವರ ಮನೆಗೆ ನುಗ್ಗಿ ಶಾಸಕ ರಾಜು ಕಾಗೆ ಕುಟುಂಬ ಮತ್ತು ಬೆಂಬಲಿಗರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಜ.9ರಂದು ಪ್ರಕರಣ ದಾಖಲಾಗಿತ್ತು. ಹಲ್ಲೆ ನಡೆಸಿದ ಸಿಸಿಟಿವಿ ದೃಶ್ಯಾವಳಿಗಳು 
ಪೊಲೀಸರಿಗೆ ದೊರೆತ್ತಿದ್ದವು. ಈ ದೃಶ್ಯಾವಳಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಶಾಸಕ ಕಾಗೆ ಹಾಗೂ ಕುಟುಂಬಸ್ಥರು ಪರಾರಿಯಾಗಿದ್ದರು. ಒಂದು ವಾರದಿಂದ ಕರ್ನಾಟಕದಿಂದ ತಲೆಮರೆಸಿಕೊಂಡಿದ್ದ ಇವರನ್ನು ಬಂಧಿಸಲು ಅಥಣಿ, ಗೋಕಾಕ ಡಿವೈಎಸ್‌ಪಿ ಹಾಗೂ ಹುಕ್ಕೇರಿ, ಅಥಣಿ ಸಿಪಿಐ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಮೂರು ದಿನಗಳ ಹಿಂದೆ
14ರಿಂದ 17ನೇ ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next