Advertisement

ರೈನ್‌ಬೋ ಕಾಲೋನಿಯಲ್ಲಿ ಜಾನಿಯ ಜಾಲಿ ರೈಡ್‌

06:28 PM Mar 30, 2018 | |

ಜಾನಿ.ಕಾಮ್‌, ಹಾರ್ಟ್‌ಲೀ ವೆಲ್‌ಕಮ್‌ …. ಹೀಗೆ ಹೇಳುತ್ತಲೇ ಜಾನಿ ಇಡೀ ಕಾಲೋನಿಯ ಜನರಿಗೆ ಹತ್ತಿರವಾಗುತ್ತಾನೆ. ರೈನ್‌ಬೋ ಕಾಲೋನಿಯಲ್ಲಿ ಜಾನಿ ಇದ್ದಾನೆಂದರೆ ಯಾವುದೇ ಭಯವಿಲ್ಲ ಎಂಬಂತಾಗಿರುತ್ತದೆ. ಸಿಕ್ಕಾಪಟ್ಟೆ ಜಾಲಿಯಾಗಿರುವ ಜಾನಿ ನಗು ನಗುತ್ತಲೇ ಏರಿಯಾದ ಸಮಸ್ಯೆಗಳನ್ನೆಲ್ಲಾ ಪರಿಹರಿಸುತ್ತಾನೆ. ಜೊತೆಗೆ ಸಣ್ಣಪುಟ್ಟ ಡೀಲ್‌ಗ‌ಳನ್ನು ಕೂಡಾ ಜಾನಿ ವಹಿಸಿಕೊಳ್ಳುತ್ತಾನೆ. ಇಷ್ಟು ಹೇಳಿದ ಮೇಲೆ ನಿಮಗೆ “ಜಾನಿ ಮೇರಾ ನಾಮ್‌’ ಸಿನಿಮಾ ನೆನಪಾಗಿಯೇ ಆಗುತ್ತದೆ.

Advertisement

ಆ ಸಿನಿಮಾದಲ್ಲೂ ಕಾಲೋನಿಯೊಂದರಲ್ಲಿ ಜಾಲಿಯಾಗಿರುವ ಹುಡುಗನಾಗಿ ವಿಜಯ್‌ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲೂ ಅದು ಮುಂದುವರಿದಿದೆ. ಕಾಲೋನಿ, ಜಾನಿ ಅಡ್ಡ, ಸಮಸ್ಯೆಗಳು, ಸೆಂಟಿಮೆಂಟ್‌, ಲವ್‌ … ಈ ಅಂಶಗಳೊಂದಿಗೆ ಇಡೀ ಸಿನಿಮಾವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ವಿಜಯ್‌ ತಮ್ಮ ಆ್ಯಕ್ಷನ್‌ ಇಮೇಜ್‌ನಿಂದ ಸಂಪೂರ್ಣವಾಗಿ ಹೊರಬಂದು ಪಕ್ಕಾ ಕಾಮಿಡಿ ಮೂಡ್‌ನ‌ಲ್ಲಿ ಮಾಡಿರುವ ಸಿನಿಮಾವಿದು.

ಹಾಗಾಗಿ, ನಿಮಗೆ ವಿಜಯ್‌ ಒಬ್ಬ ಆ್ಯಕ್ಷನ್‌ ಹೀರೋ ಎಂದು ಗೊತ್ತಾಗೋದು ಹೊಡೆದಾಟದ ದೃಶ್ಯಗಳಲ್ಲಷ್ಟೇ. ಸಿನಿಮಾದುದ್ದಕ್ಕೂ ಸಾಗಿಬರುವ ವಿಜಯ್‌ ಅವರ ವಿವಿಧ ಗೆಟಪ್‌ಗ್ಳನ್ನು ನೋಡಿದಾಗ ವಿಜಯ್‌ ಸಂಪೂರ್ಣವಾಗಿ ತಮ್ಮ ಇಮೇಜ್‌ನಿಂದ ಹೊರಬಂದು ನಟಿಸಿರೋದು ಎದ್ದು ಕಾಣುತ್ತದೆ. ಉಳಿದಂತೆ ಈ ಚಿತ್ರ ಕಾಮಿಡಿ ಡ್ರಾಮಾ. ನೀವು ಲಾಜಿಕ್‌ನ ಹಂಗಿಲ್ಲದೇ ಈ ಸಿನಿಮಾ ನೋಡಿದರೆ ನಿಮಗೆ ಚಿತ್ರ ಇಷ್ಟವಾಗುತ್ತದೆ. ಮೊದಲೇ ಹೇಳಿದಂತೆ ಇಡೀ ಸಿನಿಮಾ ರೈನ್‌ಬೋ ಕಾಲೋನಿಯಲ್ಲೇ ನಡೆಯುತ್ತದೆ.

ಕಲರ್‌ಫ‌ುಲ್‌ ಸೆಟ್‌ನಲ್ಲಿ ವಿಜಯ್‌ ಹಾಗೂ ರಂಗಾಯಣ ರಘು ಅವರ ಮಾತು ಒಂದೇ ಸಮ ಸಾಗಿ ಬರುತ್ತದೆ. “ಜಾನಿ ಜಾನಿ ಯೆಸ್‌ ಪಪ್ಪಾ’ ಚಿತ್ರವನ್ನು ಒಂದೇ ವಾಕ್ಯದಲ್ಲಿ ಕಟ್ಟಿಕೊಡೋದು ಕಷ್ಟ. ಏಕೆಂದರೆ ಇಲ್ಲಿ ಕಥೆ ಅನ್ನೋದಕ್ಕಿಂತ ಇಡೀ ಸಿನಿಮಾವನ್ನು ಬಿಡಿ ಬಿಡಿ ಘಟನೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ ಪ್ರೀತಂ ಗುಬ್ಬಿ. ಜಾನಿ ಇಲ್ಲಿ ಯಾರಧ್ದೋ ಒಂದು ಪ್ರೀತಿಯನ್ನು ಉಳಿಸುತ್ತಾನೆ, ಇನ್ಯಾರೋ ಹುಡುಗಿಯನ್ನು ಗಾಂಜಾ ಚಟದಿಂದ ಪಾರು ಮಾಡುತ್ತಾನೆ, ಬಡ ಮಕ್ಕಳ ಶಾಲಾ ಜಾಗ ಕಬಳಿಸುವವರನ್ನು ಸರಿಯಾಗಿ ತದುಕುತ್ತಾನೆ …

ಹೀಗೆ ಸಾಗುವ ಜಾನಿಯ ದಿನಚರಿಯಲ್ಲಿ ಆತನ ಪ್ರೇಮ “ಪ್ರಕರಣ’ ಪ್ರಮುಖ ಪಾತ್ರ ವಹಿಸುತ್ತದೆ. ತನ್ನ ಪ್ರೀತಿಯನ್ನು ಉಳಿಸಲು ಜಾನಿ ಹೇಗೆಲ್ಲಾ ಒದ್ದಾಡುತ್ತಾನೆ ಎಂಬ ಅಂಶ ಚಿತ್ರದ ಹೈಲೈಟ್‌. ಸಿನಿಮಾ ನೋಡಿದಾಗ ನಿರ್ದೇಶಕರ ಉದ್ದೇಶ ಕೇವಲ ಜನರನ್ನು ನಗಿಸೋದಷ್ಟೇ ಎಂಬುದು ಎದ್ದು ಕಾಣುತ್ತದೆ. ಅದೇ ಕಾರಣಕ್ಕೆ ಈ ಸಿನಿಮಾವನ್ನು ಲಾಜಿಕ್‌ ಬಿಟ್ಟು ನೋಡಬೇಕು. ಚಿತ್ರದ ಸಂಭಾಷಣೆ ಕೂಡಾ ಚುರುಕಾಗಿದೆ. ಇನ್ನು, ಚಿತ್ರದಲ್ಲಿ ಮಾತಿಗೇನು ಕೊರತೆಯಿಲ್ಲ.

Advertisement

ಆರಂಭದಿಂದ ಸಿನಿಮಾ ಮುಗಿಯುವವರೆಗೆ ವಿಜಯ್‌ ಹಾಗೂ ರಂಗಾಯಣ ರಘು ಇನ್ನೆರಡು ಸಿನಿಮಾಗಳಿಗೆ ಆಗುವಷ್ಟು ಮಾತನಾಡಿದ್ದಾರೆ. ಫ‌ನ್ನಿ ಸಂಭಾಷಣೆಯ ಜೊತೆಗೆ ಆಗಾಗ ಡಬಲ್‌ ಮೀನಿಂಗ್‌ ಮಾತುಗಳು ಕೂಡಾ ಇಣುಕುತ್ತವೆ. ಮೊದಲೇ ಹೇಳಿದಂತೆ ಇಲ್ಲಿ ಜಾನಿಯ ಜಾಲಿ ರೈಡ್‌ ಜೊತೆಗೆ ತಂದೆ-ಮಗಳ ಬಾಂಧವ್ಯ, ತಂದೆ-ತಾಯಂದಿರನ್ನು ಬಿಟ್ಟು ಕಾಸಿನ ಬೆನ್ನತ್ತುವ ಮಕ್ಕಳು … ಇಂತಹ ಹಲವು ಸೂಕ್ಷ್ಮ ಅಂಶಗಳನ್ನು ಹೇಳಿದ್ದಾರೆ. ಆದರೆ, ಯಾವುದನ್ನು ಅತಿಯಾಗಿ ಎಳೆದಿಲ್ಲ.

ಕಾಮಿಡಿಯ ಮಧ್ಯೆ ಹಾಗೆ ಬಂದು ಹೀಗೆ ಹೋಗುವ ಸಂದೇಶಗಳು ಆಗಾಗ ಚಿತ್ರಮಂದಿರದಲ್ಲಿನ ಮೌನಕ್ಕೆ ಕಾರಣವಾಗುತ್ತವೆ. “ಜಾನಿ ಮೇರಾ ನಾಮ್‌’ ಶೈಲಿಯಲ್ಲಿ ಸಾಗುವ ಸಿನಿಮಾ, ತನ್ನ ಲವ್‌ಸ್ಟೋರಿಯ ವಿಚಾರದಲ್ಲಿ ಭಿನ್ನತೆ ಮೆರೆದಿದೆ. ಲವ್‌ಸ್ಟೋರಿ ಎಂದಾಕ್ಷಣ ಸಿಕ್ಕಾಪಟ್ಟೆ ಸೆಂಟಿಮೆಂಟ್‌, ಫ್ಯಾಮಿಲಿ ವಾರ್‌ ಇದೆ ಎಂದು ನೀವು ಭಾವಿಸುವಂತಿಲ್ಲ. ಇದೊಂಥರ ಕಡ್ಡಿಮುರಿದಂತಹ ಲವ್‌ಸ್ಟೋರಿ. ಚಿತ್ರದ ಬಹುತೇಕ ಚಿತ್ರೀಕರಣ ಸೆಟ್‌ನಲ್ಲೇ ಮುಗಿದು ಹೋಗಿದೆ. ಹಾಡಿನಲ್ಲಿ ನೀವು ಗೋವಾ ಬೀಚನ್ನು ನೋಡಬಹುದು. 

ಚಿತ್ರದಲ್ಲಿ ನಾಯಕ ವಿಜಯ್‌ ಅವರನ್ನು ವಿವಿಧ ಗೆಟಪ್‌ನಲ್ಲಿ ನೋಡಬಹುದು. ಜಾನಿಯಾಗಿ, ಅಮೆರಿಕಾ ರಿಪೋರ್ಟರ್‌, ಶ್ರೀರಾಮನಾಗಿ, ಅಜ್ಜಿಯಾಗಿ … ಹೀಗೆ ನಾನಾ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲೇ ಹೇಳಿದಂತೆ ಇಮೇಜ್‌ ಹಂಗಿಲ್ಲದೇ ಕಾಣಿಸಿಕೊಂಡು, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿ ರಚಿತಾ ರಾಮ್‌ ಇಲ್ಲಿ ಸಿಡುಕಿನ ಸಿಂಗಾರಿ. ಉಳಿದಂತೆ ರಂಗಾಯಣ ರಘು, ಅಚ್ಯುತ್‌ ಕುಮಾರ್‌ ತಮ್ಮ ತಮ್ಮ ಪಾತ್ರದಲ್ಲಿ ಚೆನ್ನಾಗಿ ನಟಿಸಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತದ ಎರಡು ಹಾಡುಗಳು ಇಷ್ಟವಾಗುತ್ತವೆ. 

ಚಿತ್ರ: ಜಾನಿ ಜಾನಿ ಯೆಸ್‌ ಪಪ್ಪಾ
ನಿರ್ಮಾಣ: ದುನಿಯಾ ಟಾಕೀಸ್‌
ನಿರ್ದೇಶನ: ಪ್ರೀತಂ ಗುಬ್ಬಿ
ತಾರಾಗಣ: ವಿಜಯ್‌, ರಚಿತಾ ರಾಮ್‌, ರಂಗಾಯಣ ರಘು, ಅಚ್ಯುತ್‌ ಕುಮಾರ್‌ ಮತ್ತಿತರರು. 

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next