Advertisement

ಜೋಗದ ದಾರಿಯಲ್ಲಿ ಅಘೋರೇಶ್ವರ ದರ್ಶನ…

11:22 AM Oct 11, 2019 | Sriram |

ನಮ್ಮ ನಿಯೋಜಿತ ತಾಣ ಜೋಗ ಜಲಪಾತ. ದಾರಿ ಯುದ್ದಕ್ಕೂ ಮಾತು,ಅಂತ್ಯಾಕ್ಷರೀ ಹಾಗೂ ತಮಾ ಷೆಯೊಂದಿಗೆ ಪಯಣವು ಇನ್ನೂ ಮಜವಾಗಿತ್ತು.ಜತೆಗೆ ಮಕ್ಕಳೂ ಇದ್ದುದರಿಂದ ಅವರ ತುಂಟಾಟ, ಆಟ, ಮುದ್ದು ಮಾತುಗಳಲ್ಲಿ ನಾವೂ ನಮ್ಮ ಬಾಲ್ಯದ ನೆನಪುಗಳಿಗೆ ಜಾರಿದೆವು. ಪಯಣದ ಹಾದಿಯಲ್ಲಿ ಮೊದಲಿಗೆ ತಲುಪಿದ್ದು ಸೂರ್ಯಾಸ್ತಮಾನ ವೀಕ್ಷಣೆಗೆ ಪ್ರಸಿದ್ಧವಾದ ಆಗುಂಬೆ.ಆದರೆ ನಾವಲ್ಲಿ ಬೆಳಗ್ಗಿನ ವಿಹಂಗಮ ನೋಟ,ಅಲ್ಲಿನ ಪ್ರಕೃತಿಯ ಸೊಬಗನ್ನು ಆನಂದಿಸಿ ಮುಂದುವರಿದೆವು.

Advertisement

ನವರಾತ್ರಿ ಮುಗಿಯುವ ಹೊತ್ತು. ಮಹಾನವಮಿ, ಆಯುಧಪೂಜೆ ಅಂಗವಾಗಿ ಕಚೇರಿಗೆ ರಜೆ. ಎಲ್ಲಾದರೂ ಪ್ರವಾಸ ಹೋಗೋಣ ಎಂದುಕೊಂಡಾಗ ಥಟ್ಟನೆ ನೆನಪಾಗಿದ್ದು ಜೋಗದ ಗುಂಡಿ. ಸಹೋದ್ಯೋಗಿಗಳು, ಅವರ ಕುಟುಂಬಸ್ಥರು, ಮಕ್ಕಳನ್ನು ಸೇರಿಕೊಂಡು 26 ಜನರಿದ್ದ ನಮ್ಮ ತಂಡ ಮಿನಿ ಬಸ್ಸನ್ನೇರಿ ಮುಂಜಾನೆ ಜೋಗದತ್ತ ನಮ್ಮ ಪ್ರಯಾಣ ಆರಂಭಿಸಿದೆವು. ದಾರಿ ಯುದ್ದಕ್ಕೂ ಛಾಯಾಚಿತ್ರಗ್ರಹಣ, ಮಾತು, ಅಂತ್ಯಾಕ್ಷರೀ ಹಾಗೂ ತಮಾಷೆಯೊಂದಿಗೆ ಪಯಣವು ಇನ್ನೂ ಮಜವಾಗಿತ್ತು. ನಮ್ಮ ಮೊದಲ ನಿಲ್ದಾಣ ಆಗುಂಬೆ. ಸೂರ್ಯಾಸ್ತಮಾನ ವೀಕ್ಷಣೆಗೆ ಹೆಚ್ಚು ಪ್ರಸಿದ್ಧವಾದ ತಾಣವದು. ಆದರೆ ನಾವಲ್ಲಿ ಬೆಳಗ್ಗಿನ ವಿಹಂಗಮ ನೋಟ, ಪ್ರಕೃತಿಯ ಸೊಬಗನ್ನು ಆನಂದಿಸಿ ಮತ್ತೆ ಬಸ್ಸನ್ನೇರಿದೆವು. ನಮ್ಮ ಜತೆಗೆ ಚಿಕ್ಕ ಮಕ್ಕಳು ಇದ್ದರು. ಅವರ ಆಟ, ತೊದಲು ಮಾತುಗಳು, ನೃತ್ಯ ಮುಂತಾದವು ಸುಂದರ ಕ್ಷಣಗಳನ್ನು ಸೃಷ್ಟಿಸಿದವು. ಅವರ ಮುಗ್ಧ ತುಂಟಾಟಗಳು ನಮಗೆ ಬಾಲ್ಯವನ್ನು ನೆನಪಿಸಿದವು.

ತೀರ್ಥಹಳ್ಳಿಯಲ್ಲಿ ತಿಂಡಿ ತಿಂದಾದ ಮೇಲೆ ಎರಡು ತಾಸಿನ ದಾರಿಯಲ್ಲಿ ಸಿಕ್ಕಿದ್ದು ಕೆಳದಿ ರಾಮೇಶ್ವರ ದೇವಾಲಯ. ಸಾಗರ ಪಟ್ಟಣದಿಂದ ಸೊರಬ ರಸ್ತೆಯಲ್ಲಿ ಮುಂದೆ ಸಾಗಿದರೆ ಶಿಲ್ಪಕಲಾ ಸೌಂದರ್ಯದ ದೇಗುಲ ಕಾಣಸಿಗುತ್ತದೆ. ಹೆಚ್ಚು ಜನರಿಲ್ಲದ ಕಾರಣ ಆವರಣದಲ್ಲಿ ಸಾಕೆನಿಸುವಷ್ಟು ವಿಹರಿಸಿದೆವು. ಮುಂದೆ ಇಕ್ಕೇರಿ ಅಘೋರೇಶ್ವರನ ಸನ್ನಿಧಾನ ಹೊಕ್ಕಾಗ ಮಧ್ಯಾಹ್ನ 12 ಗಂಟೆ ದಾಟಿತ್ತು. ಬಿಸಿಲಿನಿಂದ ದಣಿದಿದ್ದ ದೇಹಕ್ಕೆ ದೇವಸ್ಥಾನದ ಆವರಣ, ಅದರ ಸೌಂದರ್ಯ, ಶಿಲ್ಪಕಲೆಯ ಶ್ರೀಮಂತಿಕೆ ತಂಪು ನೀಡಿತು.

ವಿಜಯನಗರ ಅರಸರ ಕಾಲದ ದೇವಾಲಯವಿದು. ಕೆಳದಿಯನ್ನು ರಾಜಧಾನಿಯಾಗಿಸಿಕೊಂಡು, ಇಕ್ಕೇರಿ ಸ್ವತಂತ್ರ ರಾಜ್ಯವಾಗಿ ಹೊರ ಹೊಮ್ಮಿತು. ಅಘೋರೇಶ್ವರ ದೇವಾಲಯ ಈ ಕಾಲದ ಒಂದು ಸುಂದರ ಸೃಷ್ಟಿ. ಕಣ ಶಿಲೆ ಯಲ್ಲಿ ದಕ್ಷಿಣಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ. ತಲ ವಿನ್ಯಾಸದಲ್ಲಿ ಗರ್ಭಗೃಹ, ಅರ್ಧ ಮಂಟಪ ಮತ್ತು ಹಿರಿ ದಾದ ಮುಖಮಂಟ ಪ ವನ್ನು ಹೊಂದಿರುವ ದೇಗುಲದಲ್ಲಿ ನಂದಿ ಮಂಟಪವೂ ಇದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತದೆ.

ನಂದಿ ಮಂಟಪದ ಬಲ ಬದಿಯಲ್ಲಿ ಗಣೇಶ, ಕಾರ್ತಿ ಕೇಯ, ಎಡ ಬದಿಯಲ್ಲಿ ಮಹಿಷಮರ್ದಿನಿ ಮತ್ತು ಭೈರವೇಶ್ವರ ದೇವರ ಮೂರ್ತಿಗಳಿಗೆ ಪೂಜೆಯೂ ನಡೆಯುತ್ತದೆ. ಇನ್ನು ಗುಡಿಯ ಮುಂಭಾಗದ ನೆಲಹಾಸಿನ ಮೇಲೆ ಮೂವರು ಕೆಳದಿ ಅರಸರ ಚಿತ್ರವಿದೆ. ವಿಶಾಲ ಗರ್ಭಗೃಹದ ವೇದಿಕೆಯ ಮುಕ್ಕಾಲು ಭಾಗದಲ್ಲಿ 35 ದೇವಿಯರ ಸುಂದರ ಕೆತ್ತನೆಗಳಿವೆ. ಇವೆಲ್ಲದರ ನಡುವೆ ಮೃಣ್ಮಯ 32 ಬಾಹುಗಳುಳ್ಳ ಲೋಹದ ಅಘೋರೇಶ್ವರನ ಮೂರ್ತಿ ಮನಸ್ಸಿಗೆ ಆನಂದವನ್ನು ನೀಡುತ್ತ ದೆ. ಮುಖ ಮಂಟಪದ ಸುತ್ತಲೂ ಕೆತ್ತನೆಗಳಿಂದ ಕೂಡಿದ ಸ್ತಂಭಗಳನ್ನು ಹೊಂದಿದೆ. ಗರ್ಭಗೃಹವು ದ್ರಾವಿಡ ಶೈಲಿಯ ಬೃಹತ್‌ ಶಿಖರವನ್ನು ಹೊಂದಿದ್ದು, ಅದರ ಭಿತ್ತಿಗೂಢ ಸ್ತಂಭಗಳಿಂದ ಆಧರಿಸಲ್ಪಟ್ಟ ಕೂಟಗಳಿಂದ ಅಲಂಕೃತವಾಗಿದೆ.

Advertisement

ಮುಖ ಮಂಟಪಕ್ಕೆ ಮೂರು ಕಟಾಂಜನ ಸಹಿತ ಪಾವಟಿ ಕೆಗಳ ಪ್ರವೇಶ ದ್ವಾರವಿದೆ. ಅದರಲ್ಲಿ ಉತ್ತರ ಭಾಗದ ಪ್ರವೆಶ ದ್ವಾರದ ಇಕ್ಕೆಲಗಳಲ್ಲಿ ಅಲಂಕೃತ ಆನೆಗಳ ಕೆತ್ತನೆಗಳೂ ಇವೆ. ಗೋಡೆಗಳಲ್ಲಿ ಸುಮಾರು 20 ಜಾಲಂದ್ರಗಳಿದ್ದು, ಅವುಗಳನ್ನು ಕೆತ್ತನೆಯ ತೋರಣಗಳಿಂದ ಸಿಂಗರಿಸಲಾಗಿದೆ. ಇಂತಹ ಹಲವು ಶಿಲ್ಪಗಳಿಂದ ದೇಗುಲವು ಕಂಗೊಳಿಸುತ್ತಿದ್ದು, ಮುದ ನೀಡುತ್ತದೆ.

ನಂದಿ ಮಂಟಪದಲ್ಲಿ ಕುಳಿತ ಭಂಗಿಯಲ್ಲಿ ನಂದಿಯ ಬೃಹತ್‌ ವಿಗ್ರಹವಿದ್ದು, ಅದಕ್ಕೆ ದಕ್ಷಿಣ ದಿಕ್ಕಿನಲ್ಲಿ ಯಾಳಿ ಕಟಾಂಜನಗಳ ಪಾವಟಿಕೆಗಳಿವೆ. ಈ ಮಂಟಪದಲ್ಲಿ ಸಿಂಹಾಧಾರಿತ ಸ್ತಂಭ ಗಳಿವೆ. ದೇವಾಲಯದ ಪಶ್ಚಿಮಕ್ಕೆ ಪಾರ್ವತಿ ಗುಡಿ ಇದ್ದು, ಮೂಲ ಗುಡಿಯ ಮಾದರಿಯಲ್ಲೇ, ಆದರೆ ಚಿಕ್ಕ ಗಾತ್ರದಲ್ಲಿ ನಿರ್ಮಾಣಗೊಂಡಿದೆ.

ದೇವಸ್ಥಾನದ ಒಳಗಡೆ ಮೊಬೈಲ್‌ ಹಾಗೂ ಕೆಮರಾ ಬಳಕೆಗೆ ಅವಕಾಶವಿಲ್ಲ. ಆದರೆ ಹೊರಭಾಗದಲ್ಲಿ ಛಾಯಾಚಿತ್ರಗ್ರಹಣ ಹವ್ಯಾಸದವರಿಗೆ ಪುಷ್ಕಳವೆನಿಸುವ ದೃಶ್ಯವೈಭವವಿದೆ. ಶಿಲ್ಪಕಲೆಗಳ ವೈಭವ ಕಣ್ತುಂಬಿಕೊಳ್ಳುತ್ತ ತಿರುಗಾಡುವಾಗ ಹೊತ್ತು ಕಳೆದದ್ದೇ ಗೊತ್ತಾಗಲಿಲ್ಲ. ಹೊಟ್ಟೆ ಚುರುಗುಟ್ಟಿದಾಗ ಜೋಗ ನೋಡಲು ಬಾಕಿ ಇರುವುದೂ ನೆನಪಾಗಿ ಒಲ್ಲದ ಮನಸ್ಸಿನಿಂದಲೇ ಅಘೋರೇಶ್ವರನಿಗೆ ವಿದಾಯ ಹೇಳಿದೆವು.

ರೂಟ್‌ ಮ್ಯಾಪ್‌
· ಶಿವಮೊಗ್ಗ ಜಿಲ್ಲೆಯ ಸಾಗರದಿಂದ 6 ಕಿ.ಮೀ, ದೂರದಲ್ಲಿ ಇಕ್ಕೇರಿ ಇದೆ.
·ಮಂಗಳೂರಿನಿಂದ ಈ ದೇವಾಲಯಕ್ಕೆ 213.5 ಕಿ.ಮೀ.
·ಜೋಗ ಪ್ರವಾಸ ಕೈಗೊಂಡಾಗ ಇಕ್ಕೇರಿಯೊಂದಿಗೆ ಹಲವು ಪ್ರೇಕ್ಷಣೀಯ ಸ್ಥಳಗಳು ವೀಕ್ಷಿಸುವ ಅವಕಾಶವಿದೆ. ಅದರಲ್ಲಿ ಒಂದು ಇಕ್ಕೇರಿಯ ಅಘೋರೇಶ್ವರ ದೇವಾಲಯ.
· ಸೆಪ್ಟಂಬರ್‌ನಿಂದ ಜನವರಿ ಈ ಸ್ಥಳಕ್ಕೆ ಬೇಟಿ ನೀಡಲು ಸೂಕ್ತ ಸಮಯ
· ಇಕ್ಕೇರಿಗೆ ಬಸ್‌ ವ್ಯವಸ್ಥೆ ಕೂಡ ಇದೆ.

-ವಿಶು,ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next