Advertisement

ಜೋ ರೂಟ್‌ ಅಮೋಘ ದ್ವಿಶತಕ

11:38 PM Dec 02, 2019 | Sriram |

ಹ್ಯಾಮಿಲ್ಟನ್‌: ನಾಯಕ ಜೋ ರೂಟ್‌ ಬಾರಿಸಿದ ಅಮೋಘ ದ್ವಿಶತಕ ಪರಾಕ್ರಮದಿಂದ ನ್ಯೂಜಿ ಲ್ಯಾಂಡ್‌ ಎದುರಿನ ಹ್ಯಾಮಿಲ್ಟನ್‌ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ 101 ರನ್ನುಗಳ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಗಿದೆ.

Advertisement

ನ್ಯೂಜಿಲ್ಯಾಂಡಿನ 375ಕ್ಕೆ ಉತ್ತರ ವಾಗಿ ಇಂಗ್ಲೆಂಡ್‌ 476 ರನ್‌ ಪೇರಿಸಿತು. ಇದರಲ್ಲಿ ಜೋ ರೂಟ್‌ ಪಾಲು 226 ರನ್‌. ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಕಿವೀಸ್‌ 4ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 96 ರನ್‌ ಮಾಡಿದೆ. ಪವಾಡವೇನೂ ಸಂಭವಿಸದೆ ಹೋದರೆ ಪಂದ್ಯ ಡ್ರಾಗೊಳ್ಳುವುದು ಖಚಿತ.

636 ನಿಮಿಷ ಬ್ಯಾಟಿಂಗ್‌
ಇಂಗ್ಲೆಂಡ್‌ 5ಕ್ಕೆ 269 ರನ್‌ ಮಾಡಿದಲ್ಲಿಂದ ಸೋಮವಾರದ ಆಟ ಮುಂದುವರಿಸಿತ್ತು. ಆಗ ರೂಟ್‌ 114 ರನ್‌ ಮಾಡಿ ಕ್ರೀಸ್‌ ಆಕ್ರಮಿಸಿಕೊಂಡಿದ್ದರು. 4ನೇ ದಿನವೂ ಕಿವೀಸ್‌ ಬೌಲರ್‌ಗಳನ್ನು ದಂಡಿಸುತ್ತ ಸಾಗಿದರು. 412 ಎಸೆತಗಳಿಂದ ದ್ವಿಶತಕ ಪೂರೈಸಿದರು. ಒಟ್ಟು 636 ನಿಮಿಷಗಳ ಕಾಲ ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ ಕಪ್ತಾನ, 441 ಎಸೆತಗಳಿಂದ ಈ ಸ್ಮರಣೀಯ ಇನ್ನಿಂಗ್ಸ್‌ ಕಟ್ಟಿದರು. ಬೀಸಿದ್ದು 22 ಬೌಂಡರಿ ಹಾಗೂ ಒಂದು ಸಿಕ್ಸರ್‌.

ಈ ಸಾಧನೆಯೊಂದಿಗೆ ಜೋ ರೂಟ್‌ ನ್ಯೂಜಿಲ್ಯಾಂಡ್‌ನ‌ಲ್ಲಿ ದ್ವಿಶತಕ ಬಾರಿಸಿದ ಪ್ರಥಮ ವಿದೇಶಿ ನಾಯಕನೆಂಬ ದಾಖಲೆ ಬರೆದರು. ಕ್ರಿಸ್‌ ಗೇಲ್‌ 197 ರನ್‌ ಗಳಿಸಿದ್ದು ಹಿಂದಿನ ಅತ್ಯುತ್ತಮ ಸಾಧನೆಯಾಗಿತ್ತು.

ರೂಟ್‌ ಜತೆಗೆ 4 ರನ್‌ ಮಾಡಿ ಆಡುತ್ತಿದ್ದ ಓಲೀ ಪೋಪ್‌ 75 ರನ್ನುಗಳ ಕೊಡುಗೆ ಸಲ್ಲಿಸಿದರು (202 ಎಸೆತ, 6 ಬೌಂಡರಿ). ರೂಟ್‌-ಪೋಪ್‌ 7ನೇ ವಿಕೆಟಿಗೆ 193 ರನ್‌ ಒಟ್ಟುಗೂಡಿಸುವ ಮೂಲಕ ತಂಡಕ್ಕೆ ರಕ್ಷಣೆ ಒದಗಿಸಿದರು.ನ್ಯೂಜಿಲ್ಯಾಂಡ್‌ ದ್ವಿತೀಯ ಸರದಿ ಯಲ್ಲಿ ಆರಂಭಿಕರಾದ ಟಾಮ್‌ ಲ್ಯಾಥಂ (18) ಮತ್ತು ಜೀತ್‌ ರಾವಲ್‌ (0) ವಿಕೆಟ್‌ ಕಳೆದುಕೊಂಡಿದೆ. ನಾಯಕ ಕೇನ್‌ ವಿಲಿಯಮ್ಸನ್‌ (37), ರಾಸ್‌ ಟೇಲರ್‌ (31) ಕ್ರೀಸಿನಲ್ಲಿದ್ದಾರೆ.

Advertisement

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲ್ಯಾಂಡ್‌-375 ಮತ್ತು 96ಕ್ಕೆ 2 (ವಿಲಿಯಮ್ಸನ್‌ ಬ್ಯಾಟಿಂಗ್‌ 37, ಟೇಲರ್‌ ಬ್ಯಾಟಿಂಗ್‌ 31, ವೋಕ್ಸ್‌ 8ಕ್ಕೆ 1, ಕರನ್‌ 26ಕ್ಕೆ 1). ಇಂಗ್ಲೆಂಡ್‌-476 (ರೂಟ್‌ 226, ಬರ್ನ್ಸ್ 101, ಪೋಪ್‌ 75, ವ್ಯಾಗ್ನರ್‌ 124ಕ್ಕೆ 5, ಸೌಥಿ 90ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next