Advertisement

ನರೇಗಾದಡಿ ವಿಕಲಚೇತನರಿಗೂ ಕಾಯಕ

03:41 PM May 23, 2022 | Team Udayavani |

ಹಾವೇರಿ: ಮಹತ್ವಾಕಾಂಕ್ಷಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಅರಸಿ ಬರುವ ವಿಕಲಚೇತನರಿಗೆ ಜಿಲ್ಲೆಯ ಗ್ರಾಪಂಗಳು ಉದ್ಯೋಗ ಚೀಟಿ ವಿತರಿಸಿದ್ದು, ಈ ಮೂಲಕ ದುಡಿಯುವ ಕೈಗಳಿಗೆ ಉದ್ಯೋಗ ನೀಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗಿದೆ.

Advertisement

ಹೌದು, ಜಿಲ್ಲೆಯಲ್ಲಿ ನರೇಗಾ ಉದ್ಯೋಗ ಚೀಟಿ ವಿತರಿಸುವ ಅಭಿಯಾನದಲ್ಲಿ 18 ವರ್ಷ ಮೇಲ್ಪಟ್ಟ ಅರ್ಹ ವಿಕಲಚೇತನರಿಗೆ ಉದ್ಯೋಗ ಚೀಟಿ ನೀಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ವಿಕಲಚೇತನರಿಗೂ ಉದ್ಯೋಗ ನೀಡಿ ಪ್ರೋತ್ಸಾಹಿಸುವ ಕೆಲಸಕ್ಕೆ ಗ್ರಾಪಂಗಳು ಮುಂದಾಗಿವೆ.

1,717 ಉದ್ಯೋಗ ಚೀಟಿ ವಿತರಣೆ: 18 ವರ್ಷ ಮೇಲ್ಪಟ್ಟ ವಿಕಲಚೇತನರಿಗೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಲು ಸರ್ಕಾರ ಅವಕಾಶ ಕಲ್ಪಿಸಿ ಆದೇಶಿಸಿದ ಹಿನ್ನೆಲೆಯಲ್ಲಿ, 2021-22ನೇ ಸಾಲಿನಲ್ಲಿ ಜಿಲ್ಲೆಯಲ್ಲಿರುವ ಅರ್ಹ ವಿಕಲಚೇತನರಿಗೆ ಉದ್ಯೋಗ ಚೀಟಿ ವಿತರಿಸುವ ಅಭಿಯಾನ ಕೈಗೊಂಡಿದ್ದ ಗ್ರಾಪಂಗಳು ಇಲ್ಲಿಯವರೆಗೂ ದೈಹಿಕವಾಗಿ ಸಮರ್ಥರಿರುವ ಒಟ್ಟು 1,717 ಮಂದಿಗೆ ಉದ್ಯೋಗ ಚೀಟಿ ವಿತರಿಸಿ, ದುಡಿಯುವ ಕೈಗಳಿಗೆ ಕೆಲಸ ನೀಡಿ ಆರ್ಥಿಕವಾಗಿ ಸದೃಢರನ್ನಾಗಿ ಮಾಡಲಾಗುತ್ತಿದೆ. ಈ ಪೈಕಿ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ 173, ಹಾನಗಲ್ಲ 245, ಹಾವೇರಿ 351, ಹಿರೇಕೆರೂರು 227, ರಾಣಿಬೆನ್ನೂರ 283, ರಟ್ಟಿಹಳ್ಳಿ 124, ಸವಣೂರು 180 ಹಾಗೂ ಶಿಗ್ಗಾವಿ 184 ಮಂದಿ ಸೇರಿ ಒಟ್ಟು 1,717 ಮಂದಿ ಉದ್ಯೋಗ ಚೀಟಿಯನ್ನು ವಿಕಲಚೇತನರು ಪಡೆದುಕೊಂಡಿದ್ದಾರೆ.

623 ಮಂದಿಗೆ ಕೆಲಸ: ಜಿಲ್ಲೆಯಲ್ಲಿ ಉದ್ಯೋಗ ಚೀಟಿ ಪಡೆದ 1,717 ವಿಕಲಚೇತನರ ಪೈಕಿ ಬ್ಯಾಡಗಿ ತಾಲೂಕಿನಲ್ಲಿ 65, ಹಾನಗಲ್ಲ 78, ಹಾವೇರಿ 86, ಹಿರೇಕೆರೂರು 159, ರಾಣೆಬೆನ್ನೂರ 91, ರಟ್ಟಿಹಳ್ಳಿ 48, ಸವಣೂರು 57 ಹಾಗೂ ಶಿಗ್ಗಾವಿ 39 ಮಂದಿ ಸೇರಿ ಒಟ್ಟು 623 ವಿಕಲಚೇತನರು ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಉದ್ಯೋಗ ಅವಕಾಶ ಪಡೆದುಕೊಂಡಿದ್ದು, ವಿಕಲಚೇತನರಿಂದ ಒಟ್ಟು 15,963 ಮಾನವ ದಿನಗಳ ಸೃಜನೆ ಮಾಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ವಿಕಲಚೇತನರ ಪಾಲ್ಗೊಳ್ಳುವಿಕೆ ಜಿಲ್ಲೆಯ ಶಿಗ್ಗಾವಿ ತಾಲೂಕಿನಲ್ಲಿ ಕಡಿಮೆ ಇದ್ದರೆ, ಹಿರೇಕೆರೂರು ತಾಲೂಕಿನಲ್ಲಿ ಅತಿ ಹೆಚ್ಚು ಮಂದಿ ಇದ್ದಾರೆ. ನಂತರದ ಸ್ಥಾನದಲ್ಲಿ ರಾಣಿಬೆನ್ನೂರು, ಹಾವೇರಿ ಹಾಗೂ ಹಾನಗಲ್ಲ ತಾಲೂಕುಗಳಿವೆ.

ಜಿಲ್ಲೆಯಲ್ಲಿ 2021-22ನೇ ಸಾಲಿನಲ್ಲಿ 1,717 ವಿಕಲಚೇತನರಿಗೆ ಅಭಿಯಾನದ ಮೂಲಕ ನರೇಗಾ ಯೋಜನೆಯಡಿ ಉದ್ಯೋಗ ಚೀಟಿ ವಿತರಿಸಲಾಗಿದೆ. ಇಲ್ಲಿಯವರೆಗೂ ಒಟ್ಟು 623 ಮಂದಿ ವಿಕಲಚೇತನರು ನರೇಗಾ ಯೋಜನೆಯಡಿ ಕೆಲಸ ಪಡೆದಿದ್ದು, ಇವರಿಂದ 15,963 ಮಾನವ ದಿನಗಳ ಸೃಜನೆ ಮಾಡಲಾಗಿದೆ. –ಮಹಮ್ಮದ್‌ ರೋಷನ್‌, ಜಿಪಂ ಸಿಇಒ, ಹಾವೇರಿ

Advertisement

ಉದ್ಯೋಗ ಖಾತ್ರಿ ಕೆಲಸ ನೀಡಿದ್ದರಿಂದ ಕುಟುಂಬ ನಿರ್ವಹಣೆಗೆ ಅನುಕೂಲವಾಗಿದೆ. ಸರ್ಕಾರ ನರೇಗಾದಡಿ ವಿಕಲಚೇತನರಿಗೆ ಅವಕಾಶ ಕಲ್ಪಿಸಿದ್ದು ಖುಷಿ ನೀಡಿದೆ. ವಿಕಲಚೇನರಾಗಿದ್ದರಿಂದ ದಿನದಲ್ಲಿ ಶೇ.50ರಷ್ಟು ಕೆಲಸ ನೀಡಲಾಗುತ್ತಿದೆ. ಉದ್ಯೋಗ ಮಾಡಿ ಬಂದಿದ್ದ ಕೂಲಿ ಹಣ ನಮ್ಮ ಕುಟುಂಬ ನಿರ್ವಹಣೆಗೆ ವರದಾನವಾಗಿದೆ. –ಬಸವರಾಜ ಶಿವಣ್ಣನವರ, ನರೇಗಾ ಕೂಲಿ ಕಾರ್ಮಿಕರು

-ವೀರೇಶ ಮಡ್ಲೂರ

Advertisement

Udayavani is now on Telegram. Click here to join our channel and stay updated with the latest news.

Next