Advertisement
ಇತರೆ ರಾಜ್ಯಗಳಲ್ಲಿ ಶೇ.50ಕ್ಕಿಂತ ಹೆಚ್ಚು ಮೀಸಲಾತಿಯನ್ನು ಸ್ಥಳೀಯರಿಗೆ ಕಲ್ಪಿಸುವ ಕಾನೂನುಗಳಿವೆ. ಆದರೆ ಕರ್ನಾಟಕದಲ್ಲಿ ಇರುವ ಕಾನೂನುಗಳು ಪ್ರಬಲವಾಗಿ ಇಲ್ಲದೇ ಇರುವುದರಿಂದಲೇ ಕನ್ನಡಿಗರಿಗೆ ವಂಚನೆಯಾಗುತ್ತದೆ ಎನ್ನುವ ಹೋರಾಟಗಳು ಸಾಕಷ್ಟು ನಡೆದಿವೆ. ಸ್ಥಳೀಯರಿಗೆ ಉದ್ಯೋಗ ಕೊಟ್ಟರೆ ಕನಿಷ್ಠ ವೇತನ ಸೇರಿದಂತೆ ಸೌಲಭ್ಯಗಳನ್ನು ಕೊಡಬೇಕು ಹಾಗೂ ಸ್ಥಳೀಯ ಕಾರ್ಮಿಕ ಕಾನೂನನ್ನು ಪಾಲನೆ ಮಾಡಬೇಕು. ಇಂತಹ ಹಲವಾರು ಕಾರಣಗಳಿಂದಾಗಿ ಹೊರರಾಜ್ಯಗಳಿಂದ ಜನರನ್ನು ಕರೆತಂದು ಉದ್ಯೋಗ ಕೊಡಲಾಗುತ್ತದೆ. ಇದರಿಂದ ಕನ್ನಡಿಗರ ಅವಕಾಶಗಳನ್ನು ಹೊರರಾಜ್ಯಗಳವರು ಕಿತ್ತುಕೊಳ್ಳುತ್ತಿದ್ದಾರೆ ಎನ್ನುವ ಅರಣ್ಯರೋದನ ಸರಕಾರಕ್ಕೆ ಕೇಳಿಸದ್ದೇನಲ್ಲ.
Related Articles
Advertisement
ಮೊದಲಿನಿಂದಲೂ ಅನುಭವಿಸಿಕೊಂಡು ಬಂದ ಇಂತಹ ಅವಕಾಶ ವಂಚ ನೆಯ ಕಾರಣದಿಂದಲೇ ಡಾ| ಸರೋಜಿನಿ ಮಹಿಷಿ ನೇತೃತ್ವದಲ್ಲಿ 1983ರಲ್ಲಿಯೇ ಸಮಿತಿ ರಚಿಸಿದ್ದ ಸರಕಾರ, ಉದ್ಯೋಗಾವಕಾಶಗಳ ಕುರಿತು ಪರಾಮರ್ಶೆ ನಡೆಸಿ ವರದಿ ನೀಡಲು ನಿರ್ದೇಶಿಸಿತ್ತು. ಅದರಂತೆ ಸರೋಜಿನಿ ಮಹಿಷಿ ವರದಿಯೂ ಸಲ್ಲಿಕೆಯಾಗಿತ್ತು. ಆದರೆ ಅದು ಕಾರ್ಯಗತ ಆಗಿಲ್ಲ ಎಂಬುದನ್ನು ಒತ್ತಿ ಹೇಳಬೇಕಿಲ್ಲ. ಕೊನೆಗೆ ಈ ವರದಿಯಲ್ಲಿನ ಎಲ್ಲ ಶಿಫಾರಸುಗಳನ್ನೂ ಅನುಷ್ಠಾನ ಮಾಡಲು ಆಡಳಿತಾತ್ಮಕವಾಗಿ ದುಸ್ತರವೆಂಬ ಅಭಿಪ್ರಾಯ ವ್ಯಕ್ತವಾಗಿತ್ತು.
ಕನ್ನಡ ಕಾವಲು ಸಮಿತಿಯ ಅಧ್ಯಕ್ಷರೂ ಆಗಿದ್ದ ಸಿದ್ದರಾಮಯ್ಯ ಅವರು 2017 ರಲ್ಲಿ ಸಿಎಂ ಆಗಿದ್ದಾಗ ಪರಿಷ್ಕೃತ ವರದಿಯನ್ನೂ ಸ್ವೀಕರಿಸಿದ್ದರು. ಅಂದಿನಿಂದ ಪರಿಷ್ಕೃತ ವರದಿಯಲ್ಲಿನ ಶಿಫಾರಸುಗಳೂ ಅನುಷ್ಠಾನವಾಗಿಲ್ಲ. ಸ್ಥಳೀಯರು ಎಂಬುದನ್ನು ಪರಿಗಣಿಸಲು ಕರ್ನಾಟಕದಲ್ಲಿ 15 ವರ್ಷ ವಾಸವಿರಬೇಕು ಎಂಬ ನಿಯಮವನ್ನು 10 ವರ್ಷಕ್ಕೆ ಇಳಿಸುವ ಬೇಡಿಕೆಯೂ ಇದರೊಂದಿಗೆ ಇದೆ. ಈ ಹೋರಾಟದ ಕಿಚ್ಚು ಮತ್ತೆ ಹೊತ್ತಿಕೊಂಡಿದ್ದು, ಕರ್ನಾಟಕ ರಕ್ಷಣ ವೇದಿಕೆ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಮತ್ತೆ ಬೀದಿಗಿಳಿದಿವೆ. ಕನ್ನಡಿಗರ ಈ ನ್ಯಾಯಯುತ ಬೇಡಿಕೆಯನ್ನು ಸಂವಿಧಾನದ ಮಿತಿಯಲ್ಲಿ ರಾಜ್ಯ ಸರಕಾರ ಮಾಡುವ ಬಗ್ಗೆ ಆಲೋಚನೆ ಮಾಡಬೇಕು.