ಕಲಬುರಗಿ: ಆರೋಗ್ಯ ಇಲಾಖೆಯ 2019-20ನೇ ಸಾಲಿನ ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಕನಿಷ್ಠ ಶೇ.75ರಷ್ಟು ಹುದ್ದೆ ಮೀಸಲಿರಿಸುವ ಭರವಸೆ ಮೇರೆಗೆ ಆರೋಗ್ಯ ಸೇವೆಯ ಎಂಟು ವಿವಿಧ ಕೌಶಲ್ಯ ತರಬೇತಿ ಆಯ್ಕೆಗಾಗಿ ಆ.27ರಂದು ಜಿಲ್ಲಾ ಮಟ್ಟದ ಉದ್ಯೋಗ ಭರವಸೆ ಮೇಳ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಉದ್ಯೋಗ ಭರವಸೆ ಮೇಳ ಕುರಿತಂತೆ ನಡೆದ ಜಿಲ್ಲಾ ಆಯ್ಕೆ ಸಮಿತಿ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರದ ಡಾ| ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಉದ್ಯೋಗ ಭರವಸೆ ಮೇಳ ನಡೆಯಲಿದೆ. 18ರಿಂದ 35 ವಯಸ್ಸಿನ ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿಸಿ ತಮ್ಮ ವಿದ್ಯಾರ್ಹತೆ ಮತ್ತು ಆಸಕ್ತಿಗೆ ಅನುಗುಣವಾಗಿ ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ವಿವಿಧ 8 ತರಬೇತಿಗಳಿಗೆ 96 ಅಭ್ಯರ್ಥಿಗಳನ್ನು ಆಯ್ಕೆಗಾಗಿ ಗುರಿ ನೀಡಲಾಗಿದೆ, 1:3ರಂತೆ 96 ಅಭ್ಯರ್ಥಿಗಳ ಆಯ್ಕೆಗಾಗಿ 284 ಅಭ್ಯರ್ಥಿಗಳನ್ನು ಜಿಲ್ಲೆಯಿಂದ ಆಯ್ಕೆ ಮಾಡಿ ಶಿಫಾರಸು ಮಾಡಲಾಗುವುದು. ಎಎನ್‌ಎಂ, ಪಿಯುಸಿ, ಪದವಿ, ಜಿಎನ್‌ಎಂ ನರ್ಸಿಂಗ್, ಬಿಎಸ್‌ಸಿ ನರ್ಸಿಂಗ್ ಉತ್ತೀರ್ಣರಾದವರು ಅಂದು ತಮ್ಮ ಮೂಲ ಶೈಕ್ಷಣಿಕ ದಾಖಲಾತಿಗಳೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಕೌಶಲ್ಯ ತರಬೇತಿ ನೀಡಲು ಬೆಂಗಳೂರಿನ 800 ಹಾಸಿಗೆವುಳ್ಳ ಎನ್‌ಎಬಿಎಚ್. ಮಾನ್ಯತೆ ಪಡೆದ ಅಪೋಲೋ ಮೆಡ್‌ಸ್ಕಿಲ್ಸ್ ಲಿಮಿಟೆಡ್, ರಾಮಯ್ಯ ಮೆಮೋರಿಯಲ್ ಆಸ್ಪತ್ರೆ ಮತ್ತು ನಾರಾಯಣ ಹೃದಾಲಯ ಸಂಸ್ಥೆಗಳೊಂದಿಗೆ ಆರೋಗ್ಯ ಇಲಾಖೆ ಒಡಂಬಡಿಕೆ ಮಾಡಿಕೊಂಡಿದೆ. ಉದ್ಯೋಗ ಮೇಳದ ಯಶಸ್ಸಿಗೆ ಅಗತ್ಯ ಪೂರ್ವಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ| ಪಿ.ರಾಜಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಮಾಧವರಾವ ಪಾಟೀಲ. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ. ಸತೀಶ, ಜಿಲ್ಲಾ ಆಸ್ಪತ್ರೆ ಜಿಲ್ಲಾ ಸರ್ಜನ್ ಶಿವಾನಂದ ತುರಗಾಳಿ ಇದ್ದರು.