ನವದೆಹಲಿ: ನವದೆಹಲಿಯ ಜವಾಹರ್‌ಲಾಲ್ ನೆಹರೂ ವಿವಿ ಯ ಕುಲಪತಿಯಾಗಿ ಶಾಂತಿ ಶ್ರೀ ಧುಲಿಪುಡಿ ಪಂಡಿತ್ (59) ಅವರನ್ನು ನೇಮಿಸಲಾಗಿದೆ.
ಸದ್ಯ ಅವರು ಮಹಾರಾಷ್ಟ್ರದ ಪುಣೆಯ ಸಾವಿತ್ರಿಬಾಯಿ ಫುಲೆ ವಿವಿಯ ಕುಲಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 1969ರಲ್ಲಿ ಜೆಎನ್‌ಯು ಸ್ಥಾಪನೆಯಾದ ಬಳಿಕ ಇದೇ ಮೊದಲಬಾರಿಗೆ ಮಹಿಳಾ ಕುಲಪತಿ ನೇಮಕ ಮಾಡಿ, ಕೇಂದ್ರ ಶಿಕ್ಷಣ ಸಚಿವಾಲಯ ಸೋಮವಾರ ಆದೇಶ ಹೊರಡಿಸಿದೆ. ಅವರ ಅಧಿಕಾರದ ಅವಧಿ ಐದು ವರ್ಷಗಳಾಗಿರುತ್ತವೆ.
ಜೆಎನ್‌ಯುನ ಹಳೆ ವಿದ್ಯಾರ್ಥಿಯಾಗಿರುವ ಅವರು, ಇಂಟರ್‌ನ್ಯಾಷನಲ್ ರಿಲೇಷನ್ಸ್ ವಿಚಾರದಲ್ಲಿ ಎಂ.ಫಿಲ್ ಮತ್ತು ಪಿಎಚ್.ಡಿ ಪದವಿ ಪಡೆದಿದ್ದಾರೆ.
ಇದನ್ನೂ ಓದಿ:ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನ ಮತ್ತೆ ಬಂದ್ ಆಗುತ್ತಾ ? ಭಕ್ತರು, ವ್ಯಾಪಾರಸ್ಥರಲ್ಲಿ ಆತಂಕ
ಗೋವಾ ವಿವಿಯಲ್ಲಿ 1988ರಿಂದ ಅವರು ತಮ್ಮ ಪ್ರಾಧ್ಯಾಪಕ ವೃತ್ತಿ ಶುರು ಮಾಡಿದ್ದರು. 1993ರಲ್ಲಿ ಅವರು ಪುಣೆ ವಿವಿಗೆ ನೇಮಕಗೊಂಡರು. ಯುಜಿಸಿಯ ಸದಸ್ಯರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಪ್ರಾಧ್ಯಾಪಕರಾಗಿ ತಮ್ಮ ವೃತ್ತಿ ಜೀವನದ ಅವಧಿಯಲ್ಲಿ 29 ಮಂದಿಗೆ ಪಿಎಚ್.ಡಿ ಅಧ್ಯಯನಕ್ಕೆ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದಾರೆ.