ನವದೆಹಲಿ: ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಸೋಮವಾರ ಎಬಿವಿಪಿ ಸದಸ್ಯರು ಮತ್ತು ಕ್ಯಾಂಪಸ್ ಸೆಕ್ಯುರಿಟಿ ಗಾರ್ಡ್‌ಗಳ ನಡುವಿನ ಘರ್ಷಣೆಯಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ವಿದ್ಯಾರ್ಥಿಗಳ ಗುಂಪು ಇಂದು ಎರಡು ವರ್ಷಗಳಿಂದ ತಡೆಹಿಡಿಯಲಾದ ವಿದ್ಯಾರ್ಥಿವೇತನದ ಹಣವನ್ನು ಬಿಡುಗಡೆ ಮಾಡುವಂತೆ ಶಾಂತಿಯುತವಾಗಿ ಒತ್ತಾಯಿಸುತ್ತಿರುವಾಗ ಸಂಸ್ಥೆಯಲ್ಲಿ ನಿಯೋಜಿತರಾಗಿದ್ದ ಭದ್ರತಾ ಸಿಬಂದಿ ತಮ್ಮ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ವಿದ್ಯಾರ್ಥಿ ವೇತನದ ಬಗ್ಗೆ ವಿಚಾರಿಸಲು ಬೆಳಗ್ಗೆ 11 ಗಂಟೆಗೆ ಐದು ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ವಿಭಾಗಕ್ಕೆ ಹೋಗಿದ್ದರು ಎಂದು ಎಬಿವಿಪಿ ಜೆಎನ್‌ಯು ಅಧ್ಯಕ್ಷ ರೋಹಿತ್ ಕುಮಾರ್ ಹೇಳಿದ್ದು, ಸಿಬಂದಿ ವಿದ್ಯಾರ್ಥಿಗಳನ್ನು ನಿಂದಿಸಿದರು ಮತ್ತು ಅವರೊಂದಿಗೆ ಅನುಚಿತವಾಗಿ ವರ್ತಿಸಿದರು. ಈ ಹಿಂದೆ 17 ಸಿಬಂದಿ ಇದ್ದರು ಈಗ ಕೇವಲ ನಾಲ್ವರು ಸಿಬಂದಿ ಇದ್ದಾರೆ. ವಿದ್ಯಾರ್ಥಿಗಳು ಈಗ ಎರಡು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಸ್ಥಳದಿಂದ ಬಂದ ದೃಶ್ಯಗಳಲ್ಲಿ ಸಮವಸ್ತ್ರಧಾರಿ ಭದ್ರತಾ ಸಿಬಂದಿಗಳು ಪ್ರತಿಭಟನಾನಿರತ ವಿದ್ಯಾರ್ಥಿಗಳ ಗುಂಪನ್ನು ತಳ್ಳುವ ಮತ್ತು ತಡೆಯಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ. ಕೆಲವು ವಿಡಿಯೋಗಳಲ್ಲಿ ನೆಲದ ಮೇಲೆ ರಕ್ತದ ಕಲೆಗಳು, ಡಸ್ಟ್‌ಬಿನ್‌ಗಳಲ್ಲಿ ರಕ್ತಸಿಕ್ತ ಡ್ರೆಸ್ಸಿಂಗ್ ಮತ್ತು ನೆಲದ ಮೇಲೆ ಚದುರಿದ ಗಾಜುಗಳನ್ನು ತೋರಿಸುತ್ತಿವೆ.
ಹಲವಾರು ವಿದ್ಯಾರ್ಥಿಗಳು, ತಮ್ಮ ಗಾಯಗಳನ್ನು ಪ್ರದರ್ಶಿಸುತ್ತಾ, ತಮ್ಮನ್ನು ಭದ್ರತಾ ಸಿಬಂದಿಗಳು ಟಾರ್ಗೆಟ್ ಮಾಡಿದ್ದಾರೆ ಮತ್ತು ತೀವ್ರವಾಗಿ ಗಾಯಗೊಂಡಿದ್ದೇವೆ ಎಂದು ಹೇಳಿದರು.