ಶ್ರೀನಗರ: ಖನ್ಯಾರ್ ಪ್ರದೇಶದಲ್ಲಿ ಶನಿವಾರ(ನ2 ) ನಡೆದ ಎನ್‌ಕೌಂಟರ್‌ನಲ್ಲಿ ಹಲವಾರು ವರ್ಷಗಳಿಂದ ಕಣಿವೆಯಲ್ಲಿ ಸಕ್ರಿಯವಾಗಿರುವ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾ ದ (LeT) ಪಾಕಿಸ್ಥಾನಿ ಉನ್ನತ ಕಮಾಂಡರ್ ಹತ್ಯೆಗೀಡಾಗಿದ್ದಾನೆ. ಕಾರ್ಯಾಚರಣೆ ನಾಲ್ವರು ಭದ್ರತಾ ಸಿಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರ ಉಪಸ್ಥಿತಿಯ ಬಗ್ಗೆ ಮಾಹಿತಿ ನೀಡಿದ ನಂತರ ಭದ್ರತಾ ಪಡೆಗಳು ಖನ್ಯಾರ್‌ನ ಜನನಿಬಿಡ ಪ್ರದೇಶದಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಈ ವೇಳೆ ಎನ್‌ಕೌಂಟರ್‌ಗೆ ತಿರುಗಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾರ್ಯಾಚರಣೆಯ ಸಮಯದಲ್ಲಿ, ಭಯೋತ್ಪಾದಕರು ಅಡಗಿದ್ದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತು ಮತ್ತು ದಟ್ಟವಾದ ಬೂದು ಹೊಗೆಯು ಆಕಾಶದಲ್ಲಿ ಕಾಣಿಸಿಕೊಂಡಿತು.
ಎನ್‌ಕೌಂಟರ್‌ನಲ್ಲಿ ಇಬ್ಬರು ಸಿಆರ್‌ಪಿಎಫ್ ಯೋಧರು ಮತ್ತು ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಅವರನ್ನು ಸೇನೆಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹತ್ಯೆಯಾದ ಭಯೋತ್ಪಾದಕ ಪಾಕ್ ನ ಉಸ್ಮಾನ್ ಎಂದು ಗುರುತಿಸಲಾಗಿದ್ದು ಎಲ್‌ಇಟಿಗೆ ಅತ್ಯಂತ ಹಿರಿಯ ಕಮಾಂಡರ್ ಆಗಿ ಬಹಳ ಸಮಯದಿಂದ ಕಣಿವೆಯಲ್ಲಿ ಸಕ್ರಿಯನಾಗಿ ಹಲವಾರು ದಾಳಿಗಳಲ್ಲಿ ಭಾಗಿಯಾಗಿದ್ದ. ಇನ್‌ಸ್ಪೆಕ್ಟರ್ ಮಸ್ರೂರ್ ವಾನಿ ಹತ್ಯೆಯಲ್ಲಿ ಕೂಡ ಭಾಗಿಯಾಗಿದ್ದ ,ಆತನ ಹತ್ಯೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಇಟಿಗೆ “ದೊಡ್ಡ ಹೊಡೆತ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
2023ರ ಅಕ್ಟೋಬರ್‌ನಲ್ಲಿ ಇಲ್ಲಿನ ಈದ್ಗಾ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ವೇಳೆ ವಾನಿ ಅವರನ್ನು ಸಮೀಪದಿಂದ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಮತ್ತೊಂದು ಕಾರ್ಯಾಚರಣೆಯಲ್ಲಿ, ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಶಾಂಗಸ್-ಲರ್ನೂ ಪ್ರದೇಶದ ಹಲ್ಕನ್ ಗಲಿ ಬಳಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.