ಜಮ್ಮು-ಕಾಶ್ಮೀರ:ಗಡಿ ಭದ್ರತಾ ಪಡೆಯ ಯೋಧರು ದಾಳಿಯಲ್ಲಿ ಹುತಾತ್ಮರಾಗಿ ನಾಲ್ಕು ತಿಂಗಳು ಕಳೆದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಪೊಲೀಸರು ಶುಕ್ರವಾರ(ಸೆಪ್ಟೆಂಬರ್ 04,2020) ಇಸ್ಲಾಮಿಕ್ ಸ್ಟೇಟ್ ಜಮ್ಮು-ಕಾಶ್ಮೀರ್ ಸಂಘಟನೆಯ ಐವರು ಉಗ್ರರು ಹಾಗೂ ನಾಲ್ಕು ವಾಹನಗಳನ್ನು ವಶಕ್ಕೆ ಪಡೆದಿರುವುದಾಗಿ ವರದಿ ತಿಳಿಸಿದೆ.
ಜಮ್ಮು-ಕಾಶ್ಮೀರದ ಶ್ರೀನಗರದ ಸೌರಾ ಪ್ರದೇಶದ ಸಮೀಪ ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದ ಘಟನೆ ಮೇ 20ರಂದು ನಡೆದಿತ್ತು.
ಬಂಧಿತರ ವಿರುದ್ಧ ಭಾರತೀಯ ದಂಡ ಸಂಹಿತೆ 302 ಮತ್ತು 395 ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ 7/25, 7/27, ಸೆಕ್ಷನ್ 16, 18, 19, 23 ಅನ್ವಯ ಸೌರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ಈ ಐವರು ಉಗ್ರರು ಭಾಗಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತನಿಖೆಯ ಪರಿಣಾಮ ಎರಡು ಖಾಸಗಿ ಆ್ಯಂಬುಲೆನ್ಸ್ ಸೆರಿದಂತೆ ನಾಲ್ಕು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಒಂದು ಬೈಕ್ ಮತ್ತು ಸ್ಕೂಟರ್ ಸೇರಿದೆ ಎಂದು ವರದಿ ತಿಳಿಸಿದೆ. ಜಮ್ಮು-ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ಈ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿ ಹೇಳಿದೆ.
ಈ ಆ್ಯಂಬುಲೆನ್ಸ್ ಅನ್ನು ಉಗ್ರರು ಬಿಜಿಬೆಹ್ರಾದಿಂದ ಪಂಡಖ್ ಗೆ ತೆರಳಿ ಅಲ್ಲಿಂದ ವಾಪಸ್ ಬರಲು ಉಪಯೋಗಿಸಲಾಗಿತ್ತು. ಬೈಕ್ ಮತ್ತು ಸ್ಕೂಟರ್ ಅನ್ನು ದಾಳಿ ನಡೆಸಿ, ಯೋಧರ ಬಳಿ ಇದ್ದ ಶಸ್ತ್ರಾಸ್ತ್ರ ತೆಗೆದುಕೊಂಡು ಪರಾರಿಯಾಲು ಬಳಸಿರುವುದಾಗಿ ವರದಿ ವಿವರಿಸಿದೆ.
ಎರಡು ಪ್ರತ್ಯೇಕ ಎನ್ ಕೌಂಟರ್ ನಲ್ಲಿ ದಾಳಿಯಲ್ಲಿ ಭಾಗಿಯಾಗಿದ್ದ ಐಎಸ್ ಜೆಕೆ ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಅಲ್ಲದೇ ಬಿಎಸ್ ಎಫ್ ಯೋಧರಿಂದ ಲೂಟಿಗೈದಿದ್ದ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.