ನವದೆಹಲಿ: ಕೇಂದ್ರಾಡಳಿತ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಕ್ಷೇತ್ರ ಪುನರ್‌ವಿಂಗಡಣಾ ಆಯೋಗ ಗುರುವಾರ ತನ್ನ ವರದಿಯನ್ನು ಅಂತಿಮಗೊಳಿಸಿದೆ. ಒಟ್ಟು 90 ಕ್ಷೇತ್ರಗಳು ಇರಲಿದ್ದು, 43 ಜಮ್ಮು, 47 ಕಾಶ್ಮೀರ ಪ್ರದೇಶದಲ್ಲಿ ಇರಲಿದೆ.
ಐದು ಸಂಸದೀಯ ಕ್ಷೇತ್ರಗಳಲ್ಲಿ ಇರುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯನ್ನು ಆಯಾ ಜಿಲ್ಲೆಯ ವ್ಯಾಪ್ತಿಯಲ್ಲಿಯೇ ಇರಿಸುವಂತೆ ರಚಿಸಲಾಗಿದೆ. ಜಮ್ಮು ಪ್ರದೇಶದಲ್ಲಿ ಹಾಲಿ 37ರಿಂದ 43ಕ್ಕೆ ವಿಧಾನಸಭಾ ಕ್ಷೇತ್ರಗಳ ಏರಿಕೆಯಾಗಿರುವುದು ಗಮನಾರ್ಹವಾಗಿದೆ.
ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ, ಮುಖ್ಯ ಚುನಾವಣಾ ಆಯುಕ್ತ ಸುಶೀಲ್‌ಚಂದ್ರ, ಜಮ್ಮು ಮತ್ತು ಕಾಶ್ಮೀರದ ಚುನಾವಣಾ ಆಯುಕ್ತ ಕೆ.ಕೆ.ಶರ್ಮಾ ಅವರನ್ನೊಳಗೊಂಡ ಸಮಿತಿ ಈ ವರದಿ ಸಿದ್ಧಪಡಿಸಿದೆ ಮತ್ತು ಅದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನೂ ಹೊರಡಿಸಲಾಗಿದೆ. 2020ರಲ್ಲಿ ರಚಿಸಲಾಗಿದ್ದ ಸಮಿತಿ 2011ರ ಜನಗಣತಿಯ ಆಧಾರದಲ್ಲಿ ವರದಿ ಸಿದ್ಧಗೊಳಿಸಿದೆ.
ಕೆಲವೊಂದು ವಿಧಾನಸಭಾ ಕ್ಷೇತ್ರಗಳ ಹೆಸರುಗಳನ್ನು ಬದಲಿಸಲಾಗಿದೆ. ಕಾಶ್ಮೀರ ಭಾಗದ ಕುಪ್ವಾರ ಜಿಲ್ಲೆಯಲ್ಲಿ ಒಂದು ಕ್ಷೇತ್ರ ಹೆಚ್ಚುವರಿಯಾಗಿ ಸಿಗಲಿದೆ.
ಹೀಗಾಗಿ, ಶೀಘ್ರದಲ್ಲಿಯೇ ಅಲ್ಲಿ ವಿಧಾನಸಭೆ ಚುನಾವಣೆ ನಡೆಸುವ ಸಾಧ್ಯತೆ ಇದೆ. 2018 ಜೂನ್ ಬಳಿಕ ಇಲ್ಲಿ ಚುನಾಯಿತ ಸರ್ಕಾರ ಇಲ್ಲ. 2019ರಲ್ಲಿ ವಿಶೇಷ ಸ್ಥಾನಮಾನ ರದ್ದುಗೊಳಿಸಿ, ಕೇಂದ್ರಾಡಳಿತ ಪ್ರದೇಶವನ್ನಾಗಿ ಬದಲಾಯಿಸಲಾಯಿತು.