ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯ ಕಾವೇರಿದ್ದು ಕೊನೆ ಕ್ಷಣದ ಪಕ್ಷಾಂತರ ಪರ್ವವೂ ಜೋರಾಗಿದೆ.
ಪಕ್ಷೇತರರಾಗಿ ಗೆದ್ದಿದ್ದ ಸಂಸದ ಇಂಜಿನಿಯರ್ ರಶೀದ್ ರ ಅವಾಮಿ ಇತ್ತೆಹಾದ್ ಪಕ್ಷದ (AIP) ಪುಲ್ವಾಮಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮೊಹಮ್ಮದ್ ಇಕ್ಬಾಲ್ ಸೋಫಿ ಅವರು ಸೋಮವಾರ(ಸೆ16) ಪಕ್ಷಕ್ಕೆ ಕೈಕೊಟ್ಟು ನ್ಯಾಷನಲ್ ಕಾನ್ಫರೆನ್ಸ್ ಸೇರ್ಪಡೆಯಾಗಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಒಮರ್ ಅಬ್ದುಲ್ಲಾ ಅವರ ಸಮ್ಮುಖದಲ್ಲಿ ಪಕ್ಷಾಂತರ ಮಾಡಿದ್ದು ಬೆಳವಣಿಗೆ ಇಂಜಿನಿಯರ್ ರಶೀದ್ ರನ್ನು ಕೆರಳಿಸಿದೆ. ಸೆಪ್ಟೆಂಬರ್ 18 ರಂದು ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ.
ಮೊಹಮ್ಮದ್ ಇಕ್ಬಾಲ್ ಸೋಫಿ ಪ್ರತಿಕ್ರಿಯಿಸಿ ‘ನಾನು ಪುಲ್ವಾಮಾದಿಂದ ಎಐಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಎಐಪಿ ಜಮಾತ್-ಎ-ಇಸ್ಲಾಮಿ (ಜೆಇಐ) ಜತೆ ಮೈತ್ರಿ ಮಾಡಿಕೊಳ್ಳುತ್ತಿದೆ ಎಂಬ ಮಾಹಿತಿ ನಿನ್ನೆ ನನಗೆ ಬಂತು. ನಮಗೆ ಈ ಸಂದೇಶವು ಹಠಾತ್ತಾಗಿ ಬಂದಿದೆ. ಎನ್‌ಸಿ ಎಲ್ಲ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ನಾನು ನಂಬುತ್ತೇನೆ.ನನ್ನ ಉಮೇದುವಾರಿಕೆಯನ್ನು ನಾನು ಹಿಂಪಡೆಯಲು ಸಾಧ್ಯವಿಲ್ಲ ಹಾಗಾಗಿ ಎಲ್ಲರೂ ಎನ್‌ಸಿ-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ವಿನಂತಿಸುತ್ತೇನೆ” ಎಂದರು.
ಉಗ್ರ ನೆರವು ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಇಂಜಿನಿಯರ್ ರಶೀದ್ ಜೈಲಿನಿಂದಲೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಒಮರ್ ಅಬ್ದುಲ್ಲಾ ಅವರ ವಿರುದ್ಧ ಜಯ ಸಾಧಿಸಿದ್ದರು. ಜೈಲಿನಿಂದ ಜಾಮೀನು ಪಡೆದು ಬಿಡುಗಡೆಯಾಗಿರುವ ರಶೀದ್ ನೇತೃತ್ವದ ಎಐಪಿ ಹಲವು ರಣತಂತ್ರಗಳನ್ನೂ ನಡೆಸಿ ಎನ್ ಸಿ-ಕಾಂಗ್ರೆಸ್ ಮೈತ್ರಿಕೂಟ, ಪಿಡಿಪಿಯ ನಿದ್ದೆ ಕೆಡಿಸಿದೆ.
ರಶೀದ್ ರ ಅವಾಮಿ ಇತ್ತೆಹಾದ್ ಪಾರ್ಟಿ ಬಿಜೆಪಿಯ ‘ಬಿ’ ಟೀಮ್ ಎಂದು ಎನ್‌ಸಿ ಹೇಳಿಕೊಂಡಿದೆ. ಏತನ್ಮಧ್ಯೆ, ಎಐಪಿ ವಿಧಾನಸಭಾ ಚುನಾವಣೆಗಾಗಿ ನಿಷೇಧಿತ ಜಮಾತ್-ಎ-ಇಸ್ಲಾಮಿ (ಜೆಐ) ಜತೆ ಮೈತ್ರಿ ಮಾಡಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 90 ವಿಧಾನಸಭಾ ಸ್ಥಾನಗಳಿವೆ ಮತ್ತು ಬಹುಮತದ ಗುರುತು 46 ಆಗಿದೆ.