ಮುಂಬಯಿ: ರಿಲಯನ್ಸ್ ಜಿಯೋ ಇನ್ಫೊಕಾಮ್ ಲಿಮಿಟೆಡ್, ಜು. 3 ರಿಂದ ಜಾರಿಗೆ ಬರುವಂತೆ ತನ್ನ ಎಲ್ಲ ಪ್ಲಾನ್ ಗಳ ದರ ಏರಿಕೆ ಮಾಡಿದೆ. ಈ ದರ ಏರಿಕೆಯನ್ನು ಹೊಸ ಅನ್ ಲಿಮಿಟೆಡ್ ಪ್ಲಾನ್ ಗಳು ಎಂದು ಕರೆದುಕೊಂಡಿರುವ ಕಂಪೆನಿ ಹೊಸ ಯೋಜನೆಗಳ ಮೂಲಕ ಕಡಿಮೆ ದರಕ್ಕೆ ಇಂಟರ್ನೆಟ್ ಸೇವೆ ಒದಗಿಸುವ ತನ್ನ ಬದ್ಧತೆಯನ್ನು ಮುಂದುವರೆಸುವುದಾಗಿ ತಿಳಿಸಿದೆ!
ಕನಿಷ್ಟ ದರದ ಪ್ಲಾನ್ ಆಗಿದ್ದ 155 ರೂ. 28 ದಿನ ವ್ಯಾಲಿಡಿಟಿ ಒಟ್ಟು 2 ಜಿಬಿ ಡಾಟಾ ಇದ್ದ ಪ್ಲಾನ್ 189 ರೂ. ಗೆ ಏರಿಕೆ ಮಾಡಲಾಗಿದೆ. 209 ರೂ. ಪ್ರತಿ ದಿನ 1 ಜಿಬಿ ಡಾಟಾ 28 ದಿನದ ಪ್ಲಾನ್ 249 ರೂ.ಗೆ ಏರಿಕೆಯಾಗಿದೆ. ಮಿತವ್ಯಯವಾಗಿದ್ದು ಜನಪ್ರಿಯ ಪ್ಲಾನ್ ಆಗಿದ್ದ 239 ರೂ. ಪ್ರತಿದಿನ 1.5 ಜಿಬಿ ಡಾಟಾ ಪ್ಲಾನ್ 299 ರೂ.ಗೆ ಏರಿಕೆಯಾಗಿದೆ. ಈ ಮೊದಲು 239 ರೂ. ಪ್ಲಾನ್ ಹಾಕಿಕೊಂಡರೆ ಅನಿಯಮಿತ 5ಜಿ ಡಾಟಾ ದೊರಕುತ್ತಿತ್ತು. ಇನ್ನು ಮುಂದೆ ಪ್ರತಿದಿನ 2 ಜಿಬಿ ಡಾಟಾ ಇರುವ ಪ್ಲಾನ್ಗೆ ಮಾತ್ರ ಅನಿಯಮಿತ 5ಜಿ ದೊರಕುತ್ತದೆ. ಅಂದರೆ, ಪ್ರತಿದಿನ 2 ಜಿಬಿ ಡಾಟಾ ಇರುವ ಪ್ಲಾನ್ ದರ 349 ರೂ. ಆಗಲಿದೆ. ಪ್ರಸ್ತುತ 2 ಜಿಬಿ ಡಾಟಾ/ಪ್ರತಿದಿನ 299 ರೂ. ಇದೆ. 3 ತಿಂಗಳಿಗೆ (84 ದಿನ) 395 ರೂ. ಇದ್ದ (ಒಟ್ಟು ಡಾಟಾ 6 ಜಿಬಿ) ಪ್ಲಾನಿನ ದರ 479 ರೂ.ಗೆ ಏರಿಕೆಯಾಗಿದೆ.
ಪ್ರಿಪೇಡ್ ಮಾತ್ರವಲ್ಲದೇ ಪೋಸ್ಟ್ ಪೇಡ್ ಪ್ಲಾನ್ ದರವೂ ಏರಿಕೆಯಾಗಿದೆ. ಮಾಸಿಕ 299 ರೂ. ಪ್ಲಾನ್ (30 ಜಿಬಿ ಡಾಟಾ) 349 ರೂ., ಹಾಗೂ 399 ರೂ. ಪ್ಲಾನ್ (75 ಜಿಬಿ ಡಾಟಾ) 449 ರೂ.ಗೆ ಹೆಚ್ಚಳವಾಗಿದೆ.
ಎರಡು ಹೊಸ ಆ್ಯಪ್: ಜಿಯೋ ಕಂಪನಿಯು ತನ್ನ ಡಿಜಿಟಲ್ ಸೌಲಭ್ಯದ ವ್ಯಾಪ್ತಿಯನ್ನೂ ವಿಸ್ತರಿಸಿದೆ. ಜಿಯೋ ಸೇಫ್ ಮತ್ತು ಜಿಯೋ ಟ್ರಾನ್ಸ್ಲೇಟ್ ಎಂಬ ಎರಡು ಅಪ್ಲಿಕೇಷನ್ಗಳನ್ನು ಬಿಡುಗಡೆ ಮಾಡಿದೆ. ಜಿಯೋ ಸೇಫ್ ತಿಂಗಳ ದರ ರೂ. 199 ಇದ್ದು, ಸುರಕ್ಷಿತ ಕರೆ, ಮೆಸೇಜಿಂಗ್ ಮತ್ತು ಫೈಲ್ ಟ್ರಾನ್ಸ್ಫರ್ ಸೇವೆಯನ್ನು ಒದಗಿಸುತ್ತದೆ. ಜಿಯೋ ಟ್ರಾನ್ಸ್ಲೇಟ್ ಆ್ಯಪ್ನಲ್ಲಿ ತಿಂಗಳಿಗೆ 99 ರೂ.ನೀಡಿದರೆ, ಕೃತಕ ಬುದ್ದಿ ಮತ್ತೆ ಚಾಲಿತ ಆ್ಯಪ್, ವಾಯ್ಸ್, ಕಾಲ್, ಮೆಸೇಜ್, ಟೆಕ್ಸ್ಟ್ ಮತ್ತು ಇಮೇಜ್ಗಳನ್ನು ಟ್ರಾನ್ಸ್ಲೇಟ್ ಮಾಡಬಲ್ಲದು. ಜಿಯೋ ಬಳಕೆದಾರರಿಗೆ ಒಂದು ವರ್ಷದವೆರೆಗೆ ಈ ಎರಡೂ ಆ್ಯಪ್ಗಳು ಉಚಿತವಾಗಿರಲಿವೆ.