ಬೆಂಗಳೂರು: ಜಿಂದಾಲ್ ಕಂಪನಿಗೆ ಕಡಿಮೆ ಬೆಲೆಗೆ ಜಮೀನು ಮಾರಾಟ ಮಾಡಿರುವ ಪ್ರಕರಣ ಕಾಂಗ್ರೆಸ್‌ನ ಇಬ್ಬರು ಹಿರಿಯ ನಾಯಕರ ನಡುವೆ ಆಂತರಿಕ ಸಂಘರ್ಷಕ್ಕೆ ಕಾರಣವಾಗಿದೆ. ಜಿಂದಾಲ್ ನಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ಬಾಕಿ ಹಣ ಬರಬೇಕಿಲ್ಲ ಎಂದು ಹೇಳಿದ್ದ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್ ಅವರಿಗೆ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ್ ದಾಖಲೆಗಳೊಂದಿಗೆ ಪತ್ರ ಬರೆದು, ಸಂಪುಟದ ನಿರ್ಧಾರವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ.
ಜಿಂದಾಲ್ ಗೆ ಜಮೀನು ನೀಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಎಚ್.ಕೆ. ಪಾಟೀಲ್ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪತ್ರ ಬರೆದಿದ್ದಕ್ಕೆ ಜಾರ್ಜ್ ಪತ್ರಿಕಾಗೋಷ್ಠಿ ಮೂಲಕ ಪಾಟೀಲರ ವಾದವನ್ನು ಅಲ್ಲಗಳೆದಿದ್ದರು. ಅಲ್ಲದೇ ಜಿಂದಾಲ್ ಗೆ ಜಮೀನು ನೀಡಿರುವುದನ್ನು ಸಮರ್ಥಿಸಿಕೊಂಡಿದ್ದರು. ಜಾರ್ಜ್ ಸಮರ್ಥನೆಗೆ ಎಚ್.ಕೆ. ಪಾಟೀಲ್ ಪತ್ರದ ಮೂಲಕ ತಿರುಗೇಟು ನೀಡಿದ್ದಾರೆ. ಇದು ಇಬ್ಬರ ನಡುವಿನ ಆಂತರಿಕ ಸಂಘರ್ಷಕ್ಕೆ ಕಾರಣವಾಗಿದೆ.
ಪಾಟೀಲ್ ಪತ್ರದಲ್ಲೇನಿದೆ?: ಜೆಎಸ್‌ಡಬ್ಲು ಸಂಸ್ಥೆ ಅಕ್ರಮ ಅದಿರು ಸಾಗಾಟ ಮಾಡಿರುವ ಬಗ್ಗೆ ಲೋಕಾಯುಕ್ತರಾಗಿದ್ದ ನ್ಯಾ. ಸಂತೋಷ್ ಹೆಗಡೆ ಅವರ ವರದಿಯಲ್ಲಿ ಉಲ್ಲೇಖೀಸಲಾಗಿದೆ. 2006-10ರವರೆಗೆ ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆಯಿಂದ 12,228 ಕೋಟಿ ರೂಪಾಯಿ ನಷ್ಟವುಂಟಾಗಿದೆ ಎಂದು ಲೋಕಾಯುಕ್ತರು ವರದಿ ಸಲ್ಲಿಸಿದ್ದಾರೆ. ಇದೇ ವರದಿ ಆಧಾರದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದರು.
ಅಲ್ಲದೇ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಅಕ್ರಮ ಗಣಿಗಾರಿಕೆಯ ಬಗ್ಗೆ ಲೋಕಾಯುಕ್ತರು ನೀಡಿದ್ದ ವರದಿ ಮೇಲೆ ಕೈಗೊಳ್ಳಲಾದ ಕ್ರಮಗಳನ್ನು ಮೇಲ್ವಿಚಾರಣೆ ಮಾಡಲು ಗ್ರಾಮೀಣಾಭಿವೃದ್ಧಿ ಸಚಿವನಾಗಿದ್ದ ನನ್ನ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿ ರಚನೆಯಾಗಿದ್ದಾಗ ತಾವು ಗೃಹ ಸಚಿವರಾಗಿ ಆ ಸಮಿತಿಯ ಸದಸ್ಯರಾಗಿದ್ದೀರಿ. ಅಲ್ಲದೇ ಸುಪ್ರೀಂ ಕೋರ್ಟ್‌ನಿಂದ ಹೊರಗಿದ್ದ ಪ್ರಕರಣಗಳನ್ನು ಸಿಬಿಐಗೆ ನೀಡುವ ಸಂಬಂಧ ತೀರ್ಮಾನ ತೆಗೆದುಕೊಂಡ ಸಂದರ್ಭದಲ್ಲಿಯೂ ತಾವು ಗೃಹ ಸಚಿವರಾಗಿ ಸಂಪುಟದಲ್ಲಿದ್ದಿರಿ. ಅದೇ ಸಂದರ್ಭದಲ್ಲಿ ಜಿಂದಾಲ್ ಗೆ ಜಮೀನು ನೀಡುವ ಪ್ರಸ್ತಾಪ ಬಂದಾಗ ಈ ಬಗ್ಗೆ ಕಾನೂನು ಇಲಾಖೆ ಅಭಿಪ್ರಾಯ ಪಡೆಯಲು ನಿರ್ಧರಿಸಲಾಗಿತ್ತು.
ಜಿಂದಾಲ್ ಸಂಸ್ಥೆಗೆ ಜಮೀನು ನೀಡಲು ಕಾನೂನು ಇಲಾಖೆ ನಿರಾಕರಿಸಿದ ನಂತರ ರಾಜ್ಯ ಸರ್ಕಾರ ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯ ಪಡೆದಿರುವುದರ ಔಚಿತ್ಯ ಏನು ಎಂದು ಎಚ್.ಕೆ. ಪಾಟೀಲ್ ಪ್ರಶ್ನಿಸಿದ್ದಾರೆ. ಅಲ್ಲದೇ, ಅಕ್ರಮ ಗಣಿಗಾರಿಕೆ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಇರುವುದರ ಬಗ್ಗೆಯೂ ಮರೆಮಾಚಿ ಸರ್ಕಾರ ಜಿಂದಾಲ್ ಗೆ ಕಡಿಮೆ ದರದಲ್ಲಿ ಜಮೀನು ಮಾರಾಟ ಮಾಡಲು ನಿರ್ಧರಿಸಿರುವುದು ಸಾರ್ವಜನಿಕರಲ್ಲಿ ಪ್ರಶ್ನೆಗಳು ಮೂಡುವಂತೆ ಮಾಡಿದೆ.
ಜಿಂದಾಲ್ ಕಂಪನಿಯಿಂದ ದಂಡದ ಹಣ ವಸೂಲಿ ಮಾಡುವ ಕುರಿತು ಸಚಿವ ಸಂಪುಟ ಉಪ ಸಮಿತಿ ಸಭೆಯ ನಡವಳಿಕೆಗಳಿದ್ದರೂ, ಎಂ.ಎಂ.ಎಲ್ ಅಧಿಕಾರಿಗಳು ಬಾಕಿ ವಸೂಲಿ ಮಾಡಲು ವಿಳಂಬ ನೀತಿ ಅನುಸರಿಸಿದ್ದು ವಿಚಿತ್ರವೆನಿಸುತ್ತದೆ. ಸರ್ಕಾರ ಸಾರ್ವಜನಿಕ ಆಸ್ತಿ ಪರಭಾರೆ ಮಾಡುವ ಯಾವುದೇ ನಿರ್ಣಯ ಕೈಗೊಳ್ಳುವಾಗ ಪಾರದರ್ಶಕವಾಗಿರಬೇಕು. ಈ ನಿರ್ಣಯದಿಂದ ಸರ್ಕಾರಿ ಸಂಸ್ಥೆಗಳಿಗೆ ಆಗುವ ಲಾಭ ನಷ್ಟದ ಲೆಕ್ಕ ಪರಿಗಣಿಸಬೇಕು.
ಜಿಂದಾಲ್ ಗೆ ಕಡಿಮೆ ದರದಲ್ಲಿ ಜಮೀನು ಮಾರಾಟ ಮಾಡಿರುವುದರಿಂದ ಸರ್ಕಾರಕ್ಕೆ ದೊಡ್ಡ ನಷ್ಟವಾಗುವುದರಿಂದ ಸಂಪುಟದ ನಿರ್ಣಯವನ್ನು ರದ್ದು ಪಡಿಸಬೇಕು ಎಂದು ಪಾಟೀಲರು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಜಿಂದಾಲ್ ನಿಂದ ಸರ್ಕಾರಕ್ಕೆ ಯಾವುದೇ ಬಾಕಿ ಹಣ ಬರಬೇಕಿಲ್ಲ ಎಂದು ಕೈಗಾರಿಕಾ ಸಚಿವ ಜಾರ್ಜ್ ಹೇಳಿದ್ದಾರೆ. ಆದರೆ, ಜಿಂದಾಲ್ ಸರ್ಕಾರಕ್ಕೆ ಬಾಕಿ ಹಣ ನೀಡಬೇಕಿದೆ ಎಂದು ದಾಖಲೆ ಸಮೇತ ನಾನು ಜಾರ್ಜ್‌ಗೆ ಪತ್ರ ಬರೆದಿದ್ದೇನೆ. ಜಮೀನು ಮಾರಾಟ ಮಾಡುವ ಮೊದಲು ಎಚ್ಚರಿಕೆ ವಹಿಸುವಂತೆ ಹೇಳಿದ್ದೆ. ಆದರೂ ನಿರ್ಣಯ ಮಾಡಿದ್ದಾರೆ. ಈಗಲಾದರೂ ಸರ್ಕಾರ ನಿರ್ಣಯ ವಾಪಸ್ ಪಡೆಯಲಿ
-ಎಚ್.ಕೆ. ಪಾಟೀಲ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ.