ಬೆಂಗಳೂರು: ಜಿಂದಾಲ್ ಸಂಸ್ಥೆಗೆ ಜಮೀನು ಪರಭಾರೆ ಮಾಡುವ ವಿಚಾರದಲ್ಲಿ ವಿವಾದವನ್ನು ಮೈಮೇಲೆ ಎಳೆದುಕೊಂಡಿರುವ ಕಾಂಗ್ರೆಸ್ ಸಚಿವರ ಪಾಳಯ ಮತ್ತು ಪಕ್ಷದಲ್ಲಿ ಎರಡು ಬಣಗಳು ಪರ-ವಿರೋಧ ನಿಲುವು ತಳೆದಿದೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಜಿಂದಾಲ್ ಸಂಸ್ಥೆಗೆ 3,667 ಎಕರೆ ಜಮೀನು ಪರಭಾರೆ ಮಾಡುವ ಕುರಿತು ಮೇ 27ರಂದು ನಡೆದ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಜಮೀನು ಪರಭಾರೆ ಮಾಡುವ ನಿರ್ಧಾರದ ಸಾಧಕ ಬಾಧಕ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಲಾಗಿದೆ.
ಮೇ 27ರಂದು ರಾಜ್ಯ ಸರ್ಕಾರ ಸಂಪುಟದಲ್ಲಿ ತೆಗೆದುಕೊಂಡ ತೀರ್ಮಾನ ಸರಿಯಾಗಿದೆ ಎಂದು ಕಾಂಗ್ರೆಸ್‌ನ ಹಿರಿಯ ಸಚಿವರಾದ ಕೆ.ಜೆ. ಜಾರ್ಜ್, ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಜೂ.14ರಂದು ನಡೆದ ಸಂಪುಟ ಸಭೆಯಲ್ಲಿ ಸಮರ್ಥಿಸಿಕೊಂಡಿದ್ದಾರೆ ಎನ್ನಲಾಗಿದೆ. ಎಚ್.ಕೆ. ಪಾಟೀಲ್ ಹಾಗೂ ಪ್ರತಿಪಕ್ಷ ಬಿಜೆಪಿ ಮಾಡುತ್ತಿರುವ ಆರೋಪಕ್ಕೆ ಮಣಿಯಬಾರದು ಎಂದು ಒತ್ತಡ ಹೇರಿದ್ದಾರೆ. ಅಲ್ಲದೇ ಈ ರೀತಿ ಆರೋಪಗಳಿಗೆ ಮಣಿದು ಸಂಪುಟ ತೀರ್ಮಾನ ಕೈಗೊಳ್ಳುತ್ತ ಹೋದರೆ, ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಯಾರೂ ಮುಂದೆ ಬರುವುದಿಲ್ಲವೆಂದು ಎಚ್ಚರಿಸಿದ್ದಾರೆ ಎಂದೂ ಹೇಳಲಾಗಿದೆ.
ಆದರೆ, ಎಚ್.ಕೆ. ಪಾಟೀಲ್ ವ್ಯಕ್ತಪಡಿಸಿರುವ ವಿರೋಧಕ್ಕೆ ಕಾಂಗ್ರೆಸ್‌ನ ಸಂಪುಟದ ಸಚಿವರೇ ಸಮರ್ಥಿಸಿಕೊಂಡು, ಸಂಪುಟ ಉಪ ಸಮಿತಿ ಮಾಡುವುದು ಸೂಕ್ತ ಎಂದು ವಾದಿಸಿದ್ದಾರೆ ಎಂದು ತಿಳಿದು ಬಂದಿದೆ. ಉಪ ಮುಖ್ಯಮಂತ್ರಿ ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಇ.ತುಕಾರಾಂ, ಪಿ.ಟಿ. ಪರಮೇಶ್ವರ್ ನಾಯ್ಕ, ಶಿವಾನಂದ ಪಾಟೀಲ್ ಸೇರಿ ಕೆಲವು ಸಚಿವರು ಎಚ್.ಕೆ. ಪಾಟೀಲ್ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗೃಹ ಸಚಿವ ಎಂ.ಬಿ. ಪಾಟೀಲ್ ಮಾತ್ರ ಈ ಗೊಂದಲದಿಂದ ಅಂತರ ಕಾಯ್ದುಕೊಂಡಿದ್ದಾರೆ. ಯಾವುದೇ ನಿರ್ಧಾರವನ್ನೂ ಸಮರ್ಥಿಸಿಕೊಂಡಿಲ್ಲ ಎನ್ನಲಾಗಿದೆ.
ಪಕ್ಷದಲ್ಲಿಯೂ ಬಣ: ಜಿಂದಾಲ್ ವಿಷಯದಲ್ಲಿ ಕಾಂಗ್ರೆಸ್ ನಾಯಕರಲ್ಲಿ ಎರಡು ಬಣಗಳಾಗಿದ್ದು, ಹಿರಿಯ ನಾಯಕರಾದ ಖರ್ಗೆ, ರಾಮಲಿಂಗಾ ರೆಡ್ಡಿ, ಎಸ್.ಆರ್.ಪಾಟೀಲ್, ಆನಂದ್ ಸಿಂಗ್, ಅನಿಲ್ ಲಾಡ್ ಸೇರಿ ಕೆಲವು ನಾಯಕರು ಎಚ್.ಕೆ. ಪಾಟೀಲ್ ಪರ ನಿಂತಿದ್ದಾರೆ ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪರೋಕ್ಷವಾಗಿ ಜಾರ್ಜ್ ಬೆಂಬಲಕ್ಕೆ ನಿಂತಿದ್ದಾರೆ ಎಂದು ತಿಳಿದು ಬಂದಿದೆ.