ಬೆಂಗಳೂರು: ಜಿಂದಾಲ್ ಕಂಪೆನಿಗೆ ಭೂಮಿ ಕೊಡುವ ಯಡಿಯೂರಪ್ಪ ಸರಕಾರದ ಆದೇಶವನ್ನು ಹೈಕೋರ್ಟ್ ಸೂಚನೆ ಅನ್ವಯ ನಾವೀಗ ಜಾರಿಗೊಳಿಸಿದ್ದೇವೆ. ಇದರಲ್ಲಿ ಯಾವ ಒಳ ಒಪ್ಪಂದವೂ ಇಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ರವಿವಾರ ಈ ಕುರಿತು ಪ್ರತಿಕ್ರಿಯಿಸಿ, 2021ರ ಮೇ 6ರಂದು ಜಿಂದಾಲ್ಗೆ 3,666 ಎಕರೆ ಕೊಡಲು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ತೀರ್ಮಾನಿಸಿತ್ತು. ಅದನ್ನೇ ಅನುಷ್ಠಾನಕ್ಕೆ ತಂದಿದ್ದೇವೆ. ಈ ವಿಷಯದಲ್ಲಿ ಸರಕಾರ ಒಳ ಒಪ್ಪಂದ ಮಾಡಿಕೊಂಡಿದೆ ಎನ್ನುವ ವಿಧಾನಸಭೆ ವಿಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್ ಆರೋಪ ನಿರಾಧಾರ. ಇಷ್ಟಕ್ಕೂ ಜಿಂದಾಲ್ ಕಂಪೆನಿ ರಾಜ್ಯದಲ್ಲಿ 90 ಸಾವಿರ ಕೋಟಿ ರೂ. ಹೂಡಿಕೆ ಮಾಡಿ, 50 ಸಾವಿರ ಜನರಿಗೆ ಉದ್ಯೋಗ ನೀಡಿದೆ. ಸರಕಾರದ ಷರತ್ತುಗಳನ್ನು ಪಾಲಿಸಿದ ಅನಂತರವೂ ಅವರಿಗೆ ಜಮೀನು ಕೊಡದಿದ್ದರೆ ಹೂಡಿಕೆ ವಲಯಕ್ಕೆ ಕೆಟ್ಟ ಸಂದೇಶ ಕೊಟ್ಟಂತಾಗುತ್ತದೆ ಎಂದರು.
ಹಿಂದಿನ ಬಿಜೆಪಿ ಸರಕಾರವು ಚಾಣಕ್ಯ ವಿಶ್ವವಿದ್ಯಾನಿಲಯಕ್ಕೆ ದೇವನಹಳ್ಳಿ ಬಳಿ ಕೆಐಎಡಿಬಿಯ 116 ಎಕರೆ ಜಮೀನನ್ನು ಕೇವಲ 50 ಕೋಟಿ ರೂ.ಗೆ ಭಾರಿ ರಿಯಾಯಿತಿ ದರದಲ್ಲಿ ಕೊಟ್ಟಿದೆ. ಅದರ ನೈಜ ಬೆಲೆ ಅಂದು 187 ಕೋಟಿ ರೂ. ಇತ್ತು. ಇದರಲ್ಲಿ 137 ಕೋಟಿ ರೂ. ಮೇಲ್ನೋಟಕ್ಕೇ ನಷ್ಟವಾಗಿದೆ ಎಂದರು.
3,667 ಎಕರೆಗೆ 52 ಕೋಟಿ ರೂ., 14 ಸೈಟ್ಗೆ 62 ಕೋ. ನ್ಯಾಯವೇ ?
ಮೈಸೂರು: ರಾಜ್ಯ ಸರಕಾರ ಜಿಂದಾಲ್ ಕಂಪೆನಿಗೆ 3,667 ಎಕರೆಯನ್ನು ಕೇವಲ 52 ಕೋಟಿ ರೂ.ಗಳಿಗೆ ಮಾರಾಟ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ 14 ನಿವೇಶನಗಳಿಗೆ 62 ಕೋಟಿ ರೂ. ಕೊಡಿ ಎಂದು ಮುಡಾದವರನ್ನು ಕೇಳುತ್ತಾರೆ. ಇದ್ಯಾವ ನ್ಯಾಯ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರಶ್ನಿಸಿದರು.
ಮೈಸೂರಿನಲ್ಲಿ ಅವರು ಮಾತನಾಡಿ, ರಾಜ್ಯ ಸರಕಾರ ಜಿಂದಾಲ್ ಕಂಪೆನಿಗೆ 3667 ಎಕರೆಯಲ್ಲಿ ಎರಡು ಸಾವಿರ ಎಕರೆ ಭೂಮಿಯನ್ನು 1.20 ಲಕ್ಷ ರೂ.ಗೆ ಮತ್ತು 1667 ಎಕರೆಯನ್ನು 1.50 ಲಕ್ಷ ರೂ.ಗೆ ಮಾರಾಟ ಮಾಡಲು ನಿರ್ಧರಿಸಿರುವುದು ಜನವಿರೋಧಿ ನೀತಿ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಬೇಕು. ಜಿಂದಾಲ್ಗೆ ಭೂಮಿ ಮಾರಾಟಕ್ಕೆ ಮೊದಲಿನಿಂದಲೂ ವಿರೋಧಿಸುತ್ತಿದ್ದರೂ ರಾಜ್ಯ ಸರಕಾರ ಕಡಿಮೆ ಬೆಲೆಗೆ ಮಾರಾಟಕ್ಕೆ ಒಪ್ಪಿಗೆ ಸೂಚಿಸಿರುವುದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ ಎಂದರು.