Advertisement

ಸಮಸ್ಯೆಗಳಿಗೆ ಅಧಿಕಾರಿಗಳು ಶೀಘ್ರ ಸ್ಪಂದಿಸಬೇಕು

01:02 PM Sep 18, 2022 | Team Udayavani |

ಚಾಮರಾಜನಗರ: ಸಾರ್ವಜನಿಕರ ಅಹವಾಲು ಆಲಿಸಿ ಸರ್ಕಾರದ ವಿವಿಧ ಸವಲತ್ತುಗಳು ಮತ್ತು ಯೋಜನೆ ಗಳನ್ನು ತಲುಪಿಸುವ ಉದ್ದೇಶದ ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ ಕಾರ್ಯಕ್ರಮ ತಾಲೂಕಿನ ಸಂತೇಮರಹಳ್ಳಿ ಹೋಬಳಿಯ ಉಮ್ಮತ್ತೂರು ಗ್ರಾಮದಲ್ಲಿ ಶನಿವಾರ ಯಶಸ್ವಿಯಾಗಿ ನಡೆಯಿತು.

Advertisement

ಉಮ್ಮತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರಿಗೆ ವಿವಿಧ ಸಮಸ್ಯೆ, ಕುಂದು ಕೊರತೆಗಳನ್ನು ಗಮನಕ್ಕೆ ತಂದರಿಸುವಂತೆ ಮನವಿ ಮಾಡಿದರು.

ಡೀಸಿಗೆ ದೂರುಗಳ ಸುರಿಮಳೆ: ಪೌತಿ ಖಾತೆಗಳು ಬಹಳಷ್ಟು ಬಾಕಿ ಉಳಿದಿವೆ. ತಾಲೂಕು ಕಚೇರಿಗೆ ಅಲೆದಾಡಿದರೂ ಸಹ ಖಾತೆಗಳನ್ನು ನಿಗದಿತ ಅವಧಿಯೊಳಗೆ ಮಾಡಿಕೊಡಲಾಗುತ್ತಿಲ್ಲ. ಬೆಳೆ ವಿಮೆ ಯೋಜನೆ ಈ ಭಾಗದ ರೈತರಿಗೆ ತಲುಪಿಲ್ಲ. ಕೆಲ ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಆಟದ ಮೈದಾನ ಊರಿನಲ್ಲಿಲ್ಲ. ಹಲವು ಬಡಾವಣೆಗಳಲ್ಲಿ ಸ್ವಚ್ಚತೆವಿಲ್ಲದಾಗಿದ್ದು ವಿವಿಧ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಕೆಲವೆಡೆ ಚರಂಡಿ ಇಲ್ಲದಿರುವುದರಿಂದ ತೀವ್ರ ತೊಂದರೆ ಯಾಗಿದೆ ಎಂದು ಗ್ರಾಮಸ್ಥರು ಗಮನಸೆಳೆದರು.

ಪೌರಕಾರ್ಮಿಕರ ನೇಮಕ ಮಾಡಿ: ಗ್ರಾಮದಲ್ಲಿರುವ ಆಸ್ಪತ್ರೆಯಲ್ಲಿ ಸಂಜೆಯವರೆಗೆ ಮಾತ್ರ ವೈದ್ಯರು ಲಭ್ಯವಿರುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ಇಲ್ಲಿಗೆ ಹಗಲು ರಾತ್ರಿ ವೈದ್ಯರ ಸೇವೆ ಲಭಿಸಬೇಕು. ಸಮುದಾಯ ಭವನಗಳು ನಿರ್ಮಾಣ ಮಾಡಬೇಕು, ಪಂಚಾಯಿತಿಯಲ್ಲಿ ಇನ್ನಷ್ಟು ಪೌರಕಾರ್ಮಿಕರ ನೇಮಕವಾಗಬೇಕು. ರಸ್ತೆ ಅಗಲೀಕರಣವಾಗಬೇಕು. ಗ್ರಾಮದ ಛಾಯಾಪತಿ ಕೊಳದ ಬಳಿ ಉದ್ಯಾನವನ ನಿರ್ಮಾಣ ಮಾಡಬೇಕು.

ವನ್ಯಜೀವಿಗಳ ಹಾವಳಿಗೆ ಬ್ರೇಕ್‌ ಹಾಕಿ: ಊರಿನ ಹಿರಿಯ ಪ್ರಾಥಮಿಕ ಶಾಲೆ ಶತಮಾನ ಪೂರೈಸಿದ್ದು, ಈ ಶಾಲೆಗೆ ಇನ್ನಷ್ಟು ಸೌಕರ್ಯಗಳು ಒದಗಿಸಬೇಕು, ಕೆರೆಯಲ್ಲಿ ಹೂಳು ತೆಗೆಸಬೇಕು. ಹಂದಿ, ಕೃಷ್ಣಮೃಗ ಇತರೆ ಪ್ರಾಣಿಗಳಿಂದ ಬೆಳೆ ಹಾನಿಯಾಗುವುದನ್ನು ತಡೆಯಬೇಕು, ನಿವೇಶನ ರಹಿತರಿಗೆ ನಿವೇಶನ ನೀಡಿ ವಸತಿ ಸೌಲಭ್ಯ ಕಲ್ಪಿಸಬೇಕು. ಪಶು ಆಸ್ಪತ್ರೆಗೆ ಪೂರ್ಣ ಪ್ರಮಾಣದ ವೈದ್ಯರ ನಿಯೋಜನೆಯಾಗಬೇಕು. ಗ್ರಾಮದ ಐತಿಹಾಸಿಕ ರಂಗನಾಥಸ್ವಾಮಿ, ಭುಜಂಗೇಶ್ವರ ದೇವಾಲಯ ಮೇಲ್ಚಾವಣಿಗಳು ಸೋರುತ್ತಿದ್ದು ಇದರ ದುರಸ್ತಿಯಾಗಬೇಕು. ಸ್ಮಶಾನ ಒತ್ತುವರಿ ತೆರವು ಸೇರಿದಂತೆ ಇತರೆ ವೈಯಕ್ತಿಕ ಮನವಿ ಸಮಸ್ಯೆಗಳನ್ನು ಜಿಲ್ಲಾಧಿಕಾರಿಯವರ ಬಳಿ ಜನರು ಸಲ್ಲಿಸಿದರು.

Advertisement

ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು ಜನರಿಂದ ಸಮಸ್ಯೆ ಪ್ರಸ್ತಾಪವಾಗುತ್ತಿದ್ದಂತೆಯೇ ಕೂಡಲೇ ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚನೆ ನೀಡಿ ಕ್ರಮ ವಹಿಸುವಂತೆ ತಿಳಿಸಿದರು.

ಸ್ಥಳೀಯ ಕುಂದು ಕೊರತೆಗಳನ್ನು ಬಗೆಹರಿಸ ಬೇಕು: ಎಲ್ಲರ ಮನವಿಗೆ ಉತ್ತರಿಸಿ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗುತ್ತಿದೆ. ಸಂಬಂಧಪಟ್ಟ ಇಲಾಖೆಗಳು ಪಟ್ಟಿ ಮಾಡಿಕೊಂಡು ಪರಿಹರಿಸುವ ನಿಟ್ಟಿನಲ್ಲಿ ಮುಂದಾಗಲಿ ದ್ದಾರೆ ಎಂದು ತಿಳಿಸಿದರು.

ತಾಲೂಕು ಹಂತದ ಅಧಿಕಾರಿಗಳು ಆಯಾ ಭಾಗದ ಸಮಸ್ಯೆಗಳನ್ನು ಅಲ್ಲಿಯೇ ಸಮರ್ಪಕವಾಗಿ ಪರಿಹರಿಸಿದರೆ ಮೇಲಿನ ಹಂತದವರೆಗೆ ದೂರು ಬರುವುದಿಲ್ಲ. ಹೀಗಾಗಿ ಸ್ಥಳೀಯ ಕುಂದು ಕೊರತೆಗಳನ್ನು ಬಗೆಹರಿಸಬೇಕು. ಯಾವುದೇ ತೊಂದರೆ ಇರಲಿ ಅದಕ್ಕೆ ಸ್ಪಂದಿಸಿ ಪರಿಹಾರ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಆರಂಭದಲ್ಲಿ ದೀಪ ಬೆಳಗಿಸುವ ಮೂಲಕ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು ಚಾಲನೆ ನೀಡಿದರು. ಕಂದಾಯ ಇಲಾಖೆ ವತಿಯಿಂದ ಫ‌ಲಾನುಭವಿಗಳಿಗೆ ಮಾಸಾಶನ, ವಿಧವಾ ವೇತನ, ಮನಸ್ವಿನಿ ಯೋಜನೆ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಸವಲತ್ತುಗಳ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು. ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿಯವರನ್ನು ಮಕ್ಕಳು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ಮಂಗಳವಾದ್ಯ, ಎತ್ತಿನಗಾಡಿ ಮೆರವಣಿಗೆ ಸಹ ಏರ್ಪಾಡು ಮಾಡಲಾಗಿತ್ತು. ಶಾಲಾ ಆವರಣದಲ್ಲಿ ಏರ್ಪಾಡಾಗಿದ್ದ ರಕ್ತದಾನ ಶಿಬಿರಕ್ಕೆ ಜಿಲ್ಲಾಧಿಕಾರಿಯವರು ಭೇಟಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಪೋಷಣಾ ಮಾಸಾಚರಣೆ ಅಂಗವಾಗಿ ಏರ್ಪಡಿಸಿದ್ದ ಪೌಷ್ಠಿಕ ಆಹಾರ ಪದಾರ್ಥಗಳ ಪ್ರದರ್ಶನ, ಇತರೆ ಜಾಗೃತಿ ಪ್ರದರ್ಶನ ಉದ್ಘಾಟಿಸಿ ವೀಕ್ಷಿಸಿದರು. ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಚಂದ್ರಮ್ಮ, ತಹಶೀಲ್ದಾರ್‌ ಬಸವರಾಜು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ, ಪೊ›ಬೆಷನರಿ ತಹಶೀಲ್ದಾರ್‌ ರೇಷ್ಮಾ ಗೌರವ್‌, ಭೂ ದಾಖಲೆಗಳ ಉಪನಿರ್ದೇಶಕಿ ವಿದ್ಯಾಯಿನಿ ಇತರರು ಇದ್ದರು.

ಉಮ್ಮತ್ತೂರು : ವಿವಿಧೆಡೆ ಜಿಲ್ಲಾಧಿಕಾರಿ ಭೇಟಿ :

ಚಾಮರಾಜನಗರ: ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು ಉಮ್ಮತ್ತೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ದೇವಾಲಯ ಗಳಿಗೆ ಭೇಟಿ ನೀಡಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದರು.

ಮಕ್ಕಳಿಗೆ ಭವಿಷ್ಯದಲ್ಲಿ ಏನಾಗಬೇಕೆಂದು ಬಯಸಿದ್ದೀರ ಎಂದು ಪ್ರಶ್ನಿಸಿದರು. ವಿದ್ಯಾರ್ಥಿಗಳು ಶ್ರಮವಹಿಸಿದರೆ ಅದೃಷ್ಟ ಒಲಿಯುತ್ತದೆ. ಆತ್ಮ ವಿಶ್ವಾಸ ರೂಢಿಸಿಕೊಂಡರೆ ಅಗಾಧ ಸಾಧನೆ ಮಾಡಬಹುದು ಎಂದು ಸಲಹೆ ಮಾಡಿದರು. ಉಮ್ಮತ್ತೂರು ಕೆರೆ ವೀಕ್ಷಣೆ ಮಾಡಿದರು. ಹತ್ತಿರದಲ್ಲಿಯೇ ಇದ್ದ ಮಿಲಿಟರಿ ಕ್ಯಾಂಪ್‌ ಗೆ ಜಿಲ್ಲಾಧಿಕಾರಿಯವರು ಭೇಟಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next