ಬೇತಮಂಗಲ: ಕೇವಲ ಕಂದಾಯದ ಬಗ್ಗೆ ಮಾತ್ರವಲ್ಲ, ಇತರೆ ಇಲಾಖೆಯಲ್ಲಿ ಕೆಲಸವಾಗಬೇಕಾದರೂ ನೀವು ಅರ್ಜಿ ಸಲ್ಲಿಸಿದರೆ ತಕ್ಷಣ ನಿಮ್ಮ ಸಮಸ್ಯೆಗೆ ಸ್ಪಂದಿಸಿ ಬಗೆಹರಿಸಲಾಗುವುದು ಎಂದು ತಹಶೀಲ್ದಾರ್ ಸುಜಾತಾ ಹೇಳಿದರು.
ಸಮೀಪದ ಮಾರಿಕುಪ್ಪ ಗ್ರಾಪಂ ವ್ಯಾಪ್ತಿಯ ಎಂ.ಕೊತ್ತೂರು ಗ್ರಾಮದಲ್ಲಿ ತಾಲೂಕು ಆಡಳಿತ, ಗ್ರಾಪಂ ಹಮ್ಮಿಕೊಂಡಿದ್ದ “ಜಿಲ್ಲಾಧಿಕಾರಿಗಳ ನಡೆಗೆ ಹಳ್ಳಿಯ ಕಡೆಗೆ’ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಬಡಜನರನ್ನು ವಿನಾಕಾರಣ ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸಬಾರದು ಎಂಬ ದೃಷ್ಟಿಯಿಂದ ಕಂದಾಯ ಸಚಿವರು ದೃಢ ನಿರ್ಧಾರ ಕೈಗೊಂಡು ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಗೆ ಎಂಬ ಕಾರ್ಯಕ್ರಮ ರೂಪಿಸಿದ್ದು, ಬಡವರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಬೇಕು ಎಂದು ವಿಶೇಷ ಕಾರ್ಯಕ್ರಮ ರೂಪಿಸಿದ್ದು, ಗ್ರಾಮಸ್ಥರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಿವರಿಸಿದರು.
ಸಭೆಯಲ್ಲಿ ನಮಗೆ ಹಲವು ತಿಂಗಳಿನಿಂದ ವಿಧಾವ ವೇತನ, ವೃದ್ಧಾಪ್ಯ ವೇತನ ಬರುತ್ತಿಲ್ಲ ಎಂದು ಅರ್ಜಿ ಸಲ್ಲಿಸಿದರೆ, ಕೆಲವರು ಕೆರೆಗಳು ಒತ್ತುವರಿ ಆಗಿದ್ದು, ತೆರವುಗೊಳಿಸುವಂತೆ ಅರ್ಜಿ ಸಲ್ಲಿಸಿದರು. ಇನ್ನು ಮಾಜಿ ಯೋಧ ನಾನು 22 ವರ್ಷ ದೇಶಕ್ಕಾಗಿ ಸೇವೆ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳು ಜಮೀನು ಮಂಜೂರು ಮಾಡಿದ್ದರು. ಕಂದಾಯ ಇಲಾಖೆಯಲ್ಲಿ ಕೆಲಸವಾಗುತ್ತಿಲ್ಲ. ನನಗೆ ನ್ಯಾಯ ದೊರಕಿಸಿಕೊಡಿ ಎಂದು ಅರ್ಜಿ ಸಲ್ಲಿಸಿದರು.
ಅಧಿಕಾರಿಗಳಾದ ರಘುರಾಮಸಿಂಗ್, ವಿಎ ರಮೇಶ್, ಚಂದ್ರು, ಬೇತಮಂಗಲ ಸಿಡಿಪಿಒ ನಾಗರತ್ನ, ಮೀನುಗಾರಿಗೆ ಇಲಾಖೆಯ ಲೋಕೇಶ್, ಪಿಆರ್‌ಇಡಿ ಜೆಇ ಶ್ರೀನಿವಾಸ್, ಬೆಸ್ಕಾ, ಅನೇಕ ಇಲಾಖೆಯ ಅಧಿಕಾರಿಗಳು, ಮಾರಿಕುಪ್ಪ ಗ್ರಾಪಂ ಅಧ್ಯಕ್ಷೆ ಜಲಜಾಕ್ಷ್ಮಿಶಿವ, ಸದಸ್ಯ ಶಂಕರರೆಡ್ಡಿ, ನದೀಯ, ಸ್ಥಳೀಯ ಮುಖಂಡರು ಇತರರು ಹಾಜರಿದ್ದರು.