Advertisement
ಮೊದಲು ಮಾತಿಗಿಳಿದದ್ದು ನಿರ್ದೇಶಕ ಕವೀಶ್ ಶೆಟ್ಟಿ. ಇದು ಇವರ ಮೊದಲ ನಿರ್ದೇಶನದ ಚಿತ್ರ. ಈ ಮೊದಲು “ಮುಂಗಾರು ಮಳೆ-2′ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಇದೆ. ನಂತರ ಮುಂಬೈನಲ್ಲೂ ಫಿಲಂ ಕೋರ್ಸ್ ಮಾಡಿ, ಅಲ್ಲೊಂದು ಕಿರುಚಿತ್ರ ಮಾಡುವ ಯೋಚನೆ ಇವರಲ್ಲಿತ್ತು. ಆದರೆ, ಇವರ ಕಥೆ ಇಷ್ಟವಾಗಿದ್ದೇ ತಡ, ಮುಂಬೈ ಮೂಲದ ನಿರ್ಮಾಪಕರು ಕಿರುಚಿತ್ರ ಬದಲು ಸಿನಿಮಾ ಮಾಡಲು ಮುಂದಾಗಿದ್ದಾರೆ. ಈಗ ಚಿತ್ರೀಕರಣ ಮುಗಿದಿದ್ದು ಬಿಡುಗಡೆಗೆ ರೆಡಿಯಾಗುತ್ತಿದೆ. ಸಿನಿಮಾ ಬಗ್ಗೆ ಹೇಳುವ ಕವೀಶ್ ಶೆಟ್ಟಿ, “ಕಥೆ, ಚಿತ್ರಕಥೆ, ಸಾಹಿತ್ಯ, ನಿರ್ದೇಶನದ ಜೊತೆ ನಟನಾಗಿಯೂ ಕಾಣಿಸಿಕೊಂಡಿದ್ದೇನೆ. ಕನ್ನಡ, ಹಿಂದಿ ಹಾಗು ಮರಾಠಿ ಭಾಷೆಯಲ್ಲಿ ಚಿತ್ರ ತಯಾರಾಗಿದೆ. ಎರಡು ತಲೆಮಾರಿನ ಯುವ ಮನಸ್ಸುಗಳ ತಲ್ಲಣ, ತಳಮಳ, ಪ್ರೀತಿ, ಗೀತಿ ಇತ್ಯಾದಿ ಚಿತ್ರದ ಹೈಲೈಟ್. ಚಿತ್ರದಲ್ಲಿ ನನ್ನ ಪಾತ್ರ ಮೂರು ಶೇಡ್ ಹೊಂದಿದೆ. ಸ್ಕೂಲ್ ಡೇಸ್, ಕಾಲೇಜ್ ಡೇಸ್ ಹಾಗು ಯೌವ್ವನದ ದಿನಗಳಲ್ಲಿರುವ ಪಾತ್ರ ಮಾಡಿದ್ದೇನೆ. ಅದಕ್ಕಾಗಿ ನಾನು ಮೂರು ಬಾರಿ ದೇಹ ತೂಕ ಇಳಿಸಿ, ಹೆಚ್ಚಿಸಿಕೊಂಡಿದ್ದೇನೆ. 58 ಕೆಜಿ, 68 ಕೆಜಿ ಹಾಗು 75 ಕೆಜಿ ತೂಕ ಹೆಚ್ಚಿಸಿಕೊಂಡು ನಟಿಸಿದ್ದೇನೆ. ಇನ್ನು, ಮುಂಬೈ, ಕುಂದಾಪುರ ಹಾಗು ಕರಾವಳಿ ಭಾಗದಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ನಾಲ್ಕು ಹಾಡುಗಳಿಗೆ ಪ್ರಾಂಶು ಜಾ ಸಂಗೀತ ನೀಡಿದ್ದಾರೆ. ನಾಯಕಿ ಲಕ್ಷ ಶೆಟ್ಟಿ ಕಾಲೇಜು ಎಪಿಸೋಡಿನಲ್ಲಿ ಕಾಣಿಸಿಕೊಂಡರೆ, ಮತ್ತೂಬ್ಬ ನಾಯಕಿ ಪ್ರಿಯಾ ಹೆಗ್ಡೆ ಯೌವ್ವನದ ಎಪಿಸೋಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಗೋಪಿಕಾ ದಿನೇಶ್, ಕೃಷ್ಣಮೂರ್ತಿ ಕವಿತಾಳ ಇತರರು ನಟಿಸಿದ್ದಾರೆ.
Advertisement
ಕರಾವಳಿ ಹುಡುಗನ ಜಿಲ್ಕಕನಸು
10:13 AM Dec 28, 2019 | mahesh |