ವಾಷಿಂಗ್ಟನ್: ಸಿರಿಯಾದಲ್ಲಿ ಐಸಿಸ್ ಒತ್ತೆಯಾಳುಗಳನ್ನು ಹತ್ಯೆಗೈದ ಕುಖ್ಯಾತಿ ಹೊಂದಿರುವ ಇಬ್ಬರು ಉಗ್ರರನ್ನು ಇತ್ತೀಚೆಗೆ ಅಮೆರಿಕ ಪಡೆಗಳು ಸಿರಿಯಾದ ಕೊಬಾನಿಯಲ್ಲಿ ಬಂಧಿಸಿದ್ದು, ಒತ್ತೆಯಾಳುಗಳ ಶಿರಚ್ಛೇದನ ತಪ್ಪು ನಿರ್ಧಾರವಾಗಿತ್ತು ಎಂದು ವಿಚಾರಣೆಯ ವೇಳೆ ಹೇಳಿಕೆ ನೀಡಿದ್ದಾರೆ. ಆದರೆ ಇಬ್ಬರೂ ಈ ಕ್ರೂರ ಹತ್ಯೆಗೆ ಸಂಬಂಧಿಸಿದಂತೆ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ.
ದಿ ಬೀಟಲ್ಸ್ ಎಂದೇ ಕುಖ್ಯಾತರಾಗಿದ್ದ ಬ್ರಿಟನ್ ಮೂಲದ ಎಲ್ ಶಫೀ ಎಲ್‌ಶೇಖ್ ಮತ್ತು ಅಲೆಕ್ಸಾಂಡಾ ಅಮೋನ್ ಕೊಟೆ, ಆರಂಭದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿರಲಿಲ್ಲ. ಸದ್ಯ ಕುರ್ದಿಶ್‌ನ ಭದ್ರತಾ ಕೇಂದ್ರದಲ್ಲಿ ಸೆರೆಯಲ್ಲಿರುವ ಈ ಉಗ್ರರು ಕೆಲವು ವಿಚಾರಗಳ ಬಗ್ಗೆ ಬಾಯಿಬಿಟ್ಟಿದ್ದಾರೆ. ಶಿರಚ್ಛೇದನ ಬಗ್ಗೆ ಐಸಿಸ್ ಮುಖಂಡರು ಭಿನ್ನಾಭಿಪ್ರಾಯ ಹೊಂದಿದ್ದರು. ಶಿರಚ್ಛೇದ ಮಾಡುವುದರಿಂದ ಏನೂ ಸಿಗುವುದಿಲ್ಲ. ಹಲವು ಒತ್ತೆಯಾಳುಗಳನ್ನು ಹಣಕ್ಕಾಗಿ ಬಿಡುಗಡೆ ಮಾಡಲಾಗಿದ್ದು, ಹಾಗೆ ಮಾಡಿದರೆ ಮಾತ್ರವೇ ಲಾಭವಾಗುತ್ತದೆ ಎಂದು ಐಸಿಸ್ ಉಗ್ರರು ಭಾವಿಸಿದ್ದರು ಎಂದು ಹೇಳಿದ್ದಾರೆ.
ಇವರು ಅಮೆರಿಕ, ಬ್ರಿಟಿಷ್ ಹಾಗೂ ಜಪಾನ್ ಪತ್ರಕರ್ತರು ಮತ್ತು ಸಹಾಯಕರು ಹಾಗೂ ಸಿರಿಯಾ ಯೋಧರ ಗುಂಪಿನ 20ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳಾಗಿ ಇರಿಸಿ, ಚಿತ್ರಹಿಂಸೆ ನೀಡಿದ್ದರು. ಈ ಪೈಕಿ 7 ಮಂದಿಯ ಕತ್ತು ಕೊಯ್ದು ಹತ್ಯೆಗೈದಿದ್ದರು. ವಿಡಿಯೋವನ್ನೂ ಬಿಡುಗಡೆ ಮಾಡಿ, ತಮ್ಮ ಕುಕೃತ್ಯವನ್ನು ಜಗಜ್ಜಾಹೀರು ಮಾಡಿಕೊಂಡಿದ್ದರು. ಇವರ ಗುಂಪಿನಲ್ಲಿದ್ದ ಮೊಹಮ್ಮದ್ ಎಮಾÌಜಿಯನ್ನು ಜಿಹಾದಿ ಜಾನ್ ಎಂದು ಕರೆಯಲಾಗಿದ್ದು, ವಿಡಿಯೋದಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಒತ್ತೆಯಾಳುಗಳನ್ನು ಹತ್ಯೆಗೈಯುತ್ತಿದ್ದ. ಈತನನ್ನು 2014ರಲ್ಲಿ ಸಿರಿಯಾದ ರಖಾದಲ್ಲಿ ಬಂಧಿಸಲಾಗಿತ್ತು. ಇನ್ನೊಬ್ಬ ಸದಸ್ಯ ಆ್ಯನೀ ಲೆಸ್ಲೆ ಡೇವಿಸ್ ಕೂಡ 2017ರಲ್ಲಿ ಟರ್ಕಿಯಲ್ಲಿ ಬಂಧಿತನಾಗಿದ್ದ.
ಈಗ ಬಂಧಿತನಾಗಿರುವ ಎಲ್‌ಶೇಖ್ ಮೂಲತಃ ಸುಡಾನ್‌ನವನಾಗಿದ್ದು, ಬ್ರಿಟನ್‌ಗೆ ಕುಟುಂಬದೊಂದಿಗೆ ಆಗಮಿಸಿದ್ದ. ಲಂಡನ್‌ನ ವೈಟ್ ಸಿಟಿಯಲ್ಲಿ ಈತ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. 2012ರಲ್ಲಿ ಈತ ಅಲ್ ಖೈದಾಗಾಗಿ ಸಿರಿಯಾಗೆ ಬಂದು ನಂತರ ಐಸಿಸ್‌ಗೆ ಸೇರಿದ್ದ. ಇನ್ನೊಂದೆಡೆ ಕೊಟೆ ಘಾನಾ ಹಾಗೂ ಗ್ರೀಕ್ ಮೂಲದವನಾಗಿದ್ದು, ತನ್ನ 20ನೇ ವಯಸ್ಸಿನಲ್ಲಿ ಇಸ್ಲಾಂಗೆ ಮತಾಂತರಗೊಂಡಿದ್ದ. ಲಂಡನ್‌ನ ಪ್ಯಾಡಿಂಗ್ಟನ್‌ನಲ್ಲಿ ವಾಸವಾಗಿದ್ದ.