Advertisement

ಜೂಲನ್‌ ಗೋಸ್ವಾಮಿ: 10,000 ಎಸೆತಗಳನ್ನಿಕ್ಕಿದ ವಿಶ್ವದ ಮೊದಲ ಬೌಲರ್‌ 

11:18 PM Sep 25, 2022 | Team Udayavani |

ಲಂಡನ್‌: ಶನಿವಾರ ಐತಿಹಾಸಿಕ ಲಾರ್ಡ್ಸ್‌ ನಲ್ಲಿ ತನ್ನ ಯಶಸ್ವಿ ಹಾಗೂ ವರ್ಣರಂಜಿತ ಕ್ರಿಕೆಟ್‌ ಬದುಕಿಗೆ ತೆರೆ ಎಳೆದ ಜೂಲನ್‌ ಗೋಸ್ವಾಮಿ, ವಿದಾಯ ಪಂದ್ಯದಲ್ಲೂ ಮೈಲುಗಲ್ಲೊಂದನ್ನು ನೆಟ್ಟರು. ವನಿತಾ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 10 ಸಾವಿರ ಎಸೆತಗಳನ್ನಿಕ್ಕಿದ ವಿಶ್ವದ ಮೊದಲ ಬೌಲರ್‌ ಎಂಬ ಕೀರ್ತಿ ಇವರದಾಯಿತು. ಇದರೊಂದಿಗೆ ಇವರ ದಾಖಲೆಗಳ ಕಿರೀಟಕ್ಕೆ ಇನ್ನೊಂದು ಗರಿ ಮೂಡಿತು.

Advertisement

ಈ ಪಂದ್ಯದಲ್ಲಿ ಜೂಲನ್‌ 2 ವಿಕೆಟ್‌ ಕಿತ್ತರು. ಮೊದಲು ಅಲೈಸ್‌ ಕ್ಯಾಪ್ಸಿ ಅವರನ್ನು ಔಟ್‌ ಮಾಡಿದ ಜೂಲನ್‌, ಕೊನೆಯದಾಗಿ ಕೇಟ್‌ ಕ್ರಾಸ್‌ ಅವರನ್ನು ಬೌಲ್ಡ್‌ ಮಾಡಿದರು. ಅವರ ಕೊನೆಯ ಏಕದಿನ ವಿಕೆಟ್‌ 10,001ನೇ ಎಸೆತದಲ್ಲಿ ಬಂತು. ಜೂಲನ್‌ ಅವರ ಏಕದಿನದ ಒಟ್ಟು ಬೌಲಿಂಗ್‌ ವಿವರ ಹೀಗಿದೆ: 1667.3 ಓವರ್‌, 265 ಮೇಡನ್‌, 5622 ರನ್‌, 255 ವಿಕೆಟ್‌. 31ಕ್ಕೆ 6 ವಿಕೆಟ್‌ ಅತ್ಯುತ್ತಮ ಸಾಧನೆ. ಸರಾಸರಿ 22.04.

ಈ ಯಾದಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವವರು ಕ್ಯಾಥರಿನ್‌ ಬ್ರಂಟ್‌ (6,847 ಎಸೆತ). ತೃತೀಯ ಸ್ಥಾನದಲ್ಲಿರುವವರು ಅನೀಸಾ ಮೊಹಮ್ಮದ್‌ (6,252 ಎಸೆತ). ಇಬ್ಬರೂ 141 ಪಂದ್ಯವಾಡಿದ್ದಾರೆ.

-ಏಕದಿನದಲ್ಲಿ ಸರ್ವಾಧಿಕ 255 ವಿಕೆಟ್‌. ಈ ಮಾದರಿಯಲ್ಲಿ 200 ವಿಕೆಟ್‌ ಗಡಿ ದಾಟಿದ ವಿಶ್ವದ ಏಕೈಕಕ ಬೌಲರ್‌.
-ಏಕದಿನದಲ್ಲಿ ಅತ್ಯಧಿಕ 265 ಓವರ್‌ ಮೇಡನ್‌.
-ಟೆಸ್ಟ್‌ ಪಂದ್ಯವೊಂದರಲ್ಲಿ 10 ವಿಕೆಟ್‌ ಕಿತ್ತ ಅತೀ ಕಿರಿಯ ಆಟಗಾರ್ತಿ (23 ವರ್ಷ, 277 ದಿನ).
-ಏಕದಿನದಲ್ಲಿ ಅತ್ಯಧಿಕ ಎಲ್‌ಬಿ ವಿಕೆಟ್‌ (56), ಬೌಲ್ಡ್‌ (95), ಕೀಪರ್‌ ಕ್ಯಾಚ್‌ (94).
-ಟೆಸ್ಟ್‌ನಲ್ಲಿ ಭಾರತದ ಅತ್ಯುತ್ತಮ ಬೌಲಿಂಗ್‌ (ಇಂಗ್ಲೆಂಡ್‌ ವಿರುದ್ಧ 78ಕ್ಕೆ 10 ವಿಕೆಟ್‌).

Advertisement

Udayavani is now on Telegram. Click here to join our channel and stay updated with the latest news.

Next