ಕಾರ್ಕಳ: ಬುಧವಾರವೂ ಕಾರ್ಕಳ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿದಿದ್ದು, ಯಾವುದೇ ಹಾನಿಯಾದ ಕುರಿತು ವರದಿಯಾಗಿಲ್ಲ. ಕಾರ್ಕಳ, ಕೆರ್ವಾಶೆ, ಬೇಳಿಂಜೆ ಪ್ರದೇಶಗಳಲ್ಲಿ ಅತಿಯಾಗಿ ಮಳೆಯಾಗಿತ್ತು. ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆಯಲ್ಲೇ ನೀರು ಹರಿಯುತ್ತಿತ್ತು.
ಕಾರ್ಕಳ ನಗರದ ಮುಖ್ಯರಸ್ತೆಗಳು ಹೊಂಡಗಳಿಂದ ಕೂಡಿದ್ದು, ನಿರಂತರ ಮಳೆ ಸುರಿಯುತ್ತಿದ್ದ ಕಾರಣ ರಸ್ತೆ ನೀರಿನಿಂದ ಆವೃತ್ತವಾಗಿತ್ತು. ವಾಹನ ಚಾಲಕರಿಗೆ ಅದರಲ್ಲೂ ವಿಶೇಷವಾಗಿ ದ್ವಿಚಕ್ರ ಸವಾರರು ಹೊಂಡಗಳನ್ನು ಗುರುತಿಸಲಾಗದೇ ಚಾಲನೆಗೆ ವೇಳೆ ಪರಿತಪಿಸುವಂತಾಯಿತು. ರಸ್ತೆಯಲ್ಲೇ ನೀರು ಹರಿಯುವ ಕಾರಣ ವಾಹನಗಳ ಓಡಾಟದ ವೇಳೆ ಕಾರಂಜಿಯಂತೆ ನೀರು ಚಿಮ್ಮುವ ದೃಶ್ಯ ಸಾಮಾನ್ಯವಾಗಿತ್ತು.
ಕಾರ್ಕಳದ ನದಿ, ಹೊಳೆಗಳು ಮೈದುಂಬಿ ಹರಿಯುತ್ತಿವೆ. ಮುನಿಯಾಲು, ಕೆರ್ವಾಶೆ, ಮಾಳ, ಶಿರ್ಲಾಲು, ದುರ್ಗಾ, ಬೇಳಿಂಜೆ ಹೊಳೆಗಳು ಧುಮ್ಮಕ್ಕಿ ಹರಿಯುತ್ತಿದ್ದು, ಸುವರ್ಣ ನದಿ, ಎಣ್ಣೆ ಹೊಳೆಯಲ್ಲೂ ನೀರು ಅತ್ಯಧಿಕ ಪ್ರಮಾಣದಲ್ಲಿ ಹರಿಯುತ್ತಿದೆ.
ಜಲಪಾತಗಳ ಸೊಬಗು
ನಿಟ್ಟೆ, ದುರ್ಗಾ, ಮಾಳ, ಜೊಂಬ್ಲು, ಕೂಡ್ಲು ಜಲಪಾತಗಳಲ್ಲಿ ನೀರಿನ ಹರಿವು ಜಾಸ್ತಿಯಾಗಿರುವುದರಿಂದಾಗಿ ಜಲಪಾತಗಳು ತನ್ನ ಸೊಬಗನ್ನು ಹೆಚ್ಚಿಸಿವೆ. ನೋಡುಗರ ಕಣ್ಮನ ಸೆಳೆಯುಂತಿದೆ ಇಲ್ಲಿನ ಜಲಪಾತಗಳು. ಬಹುತೇಕ ಜಲಪಾತಗಳು ಸುರಕ್ಷಿತವಾಗಿಲ್ಲದ ಕಾರಣ ಪ್ರವಾಸಿಗರು ಜಾಗರೂಕತೆಯಿಂದ ಇರಬೇಕೆಂದು ಸ್ಥಳೀಯರು ಎಚ್ಚರಿಸುತ್ತಿದ್ದಾರೆ. ಕೂಡ್ಲು ಜಲಪಾತಕ್ಕೆ ಪ್ರವಾಸಿಗರ ನಿಷೇಧವಿದೆ.