ರಾಂಚಿ: ಜಾರ್ಖಂಡ್ ವಿಧಾನಸಭೆ ಚುನಾವಣೆಯ ಮತ ಎಣಿಕೆಯು ಶನಿವಾರ (ನ.23) ನಡೆಯುತ್ತಿದ್ದು, ಸದ್ಯದ ಟ್ರೆಂಡ್ ಪ್ರಕಾರ ಆಡಳಿತಾರೂಢ ಇಂಡಿಯಾ ಒಕ್ಕೂಟ ಮುನ್ನಡೆ ಸಾಧಿಸಿದೆ.
81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ನ.13 ಮತ್ತು 20ರಂದು 2 ಹಂತದಲ್ಲಿ ಮತದಾನ ನಡೆದಿತ್ತು. ಮೊದಲ ಹಂತದಲ್ಲಿ ಶೇ.66.65, 2ನೇ ಹಂತ ದಲ್ಲಿ ಶೇ.68ರಷ್ಟು ಹಕ್ಕು ಚಲಾವಣೆಯಾಗಿತ್ತು. ಬಹುಮತಕ್ಕೆ 41 ಸ್ಥಾನಗಳ ಗೆಲುವು ಅಗತ್ಯವಿದೆ.
ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾ ದಳ ಪಕ್ಷಗಳನ್ನು ಒಳಗೊಂಡಿರುವ ಇಂಡಿಯಾ ಒಕ್ಕೂಟವು ಸದ್ಯ ಮುನ್ನಡೆ ಸಾಧಿಸಿದೆ. ಬಿಜೆಪಿ ನೇತೃತ್ವದ ಎನ್ ಡಿಎ ಹಿನ್ನಡೆ ಅನುಭವಿಸಿದೆ.
ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾದ ನಂತರ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿತ್ತು. ಆದರೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಜೆಎಂಎಂ ನಿಧಾನವಾಗಿ ಮುನ್ನಡೆ ಸಾಧಿಸಿದೆ. ಬೆಳಗ್ಗೆ 11ಕ್ಕೆ ರಾಜ್ಯದ 81 ಸ್ಥಾನಗಳ ಪೈಕಿ 57ರಲ್ಲಿ ಇಂಡಿಯಾ ಪಡೆ ಮುಂದಿತ್ತು. 22ರಲ್ಲಿ ಎನ್ಡಿಎ ಮುಂದಿತ್ತು. ಎರಡು ಕ್ಷೇತ್ರಗಳಲ್ಲಿ ಇತರರು ಮುನ್ನಡೆಯಲ್ಲಿದ್ದಾರೆ.
ಎಕ್ಸಿಟ್ ಪೋಲ್ಗಳು ವಿಭಿನ್ನ ಫಲಿತಾಂಶದ ಸೂಚನೆ ನೀಡಿದ್ದರೂ, ಪೈಟೋಟಿಯ ವಿಚಾರವನ್ನು ಸ್ಪಷ್ಟಪಡಿಸಿತ್ತು. ಮ್ಯಾಟ್ರಿಜ್ ಪ್ರಕಾರ, ಎನ್ಡಿಎ 42-47 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿತ್ತು, ಜೆಎಂಎಂ ನೇತೃತ್ವದ ಮೈತ್ರಿಕೂಟವು 25-30 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸೂಚಿಸಿತ್ತು. ಮತ್ತೊಂದೆಡೆ ಟೈಮ್ಸ್ನೌ-ಜೆವಿಸಿ ಸಮೀಕ್ಷೆಯು ಎನ್ಡಿಎಗೆ 40-44 ಸ್ಥಾನಗಳನ್ನು ಮುನ್ಸೂಚಿಸಿದೆ, ಇಂಡಿಯಾ ಬ್ಲಾಕ್ 30-40 ಸ್ಥಾನಗಳನ್ನು ಪಡೆದುಕೊಳ್ಳುತ್ತದೆ.
ಆದರೆ, ಆಕ್ಸಿಸ್ ಮೈ ಇಂಡಿಯಾ ಮತ್ತು ಪಿ ಮಾರ್ಕ್ ವ್ಯತಿರಿಕ್ತ ದೃಷ್ಟಿಕೋನವನ್ನು ನೀಡಿತ್ತು. ಜೆಎಂಎಂ ನೇತೃತ್ವದ ಇಂಡಿಯಾ ಬ್ಲಾಕ್ಗೆ ಕ್ರಮವಾಗಿ 49-59 ಮತ್ತು 37-47 ಸ್ಥಾನಗಳನ್ನು ನೀಡಿತ್ತು. ಇವುಗಳ ಪ್ರಕಾರ ಎನ್ಡಿಎ ತುಂಬಾ ಹಿಂದೆ ಬೀಳುತ್ತದೆ ಎಂದು ಅಂದಾಜಿಸಲಾಗಿದೆ.