ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ಆರಂಭವಾಗಿದ್ದು, ಆರು ಜಿಲ್ಲೆಗಳ 13 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ.
ಐದು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಮೊದಲ ಹಂತದ ಮತದಾನ ಇಂದು ನಡೆದರೆ, ಡಿ.7ರಂದು 2ನೇ ಹಂತದ ಮತದಾನ, ಡಿ.12ರಂದು 3ನೇ ಹಂತದ ಮತದಾನ, ಡಿ.16ರಂದು 4ನೇ ಹಂತದ ಮತದಾನ, ಡಿ.20ರಂದು 5ನೇ ಹಂತದ ಮತದಾನ ನಡೆಯಲಿದೆ. ಒಟ್ಟಾರೆ ಜಾರ್ಖಂಡ್ನ 81 ವಿಧಾನಸಭಾ ಕ್ಷೇತ್ರಗಳಿಗೆ ಐದು ಹಂತದಲ್ಲಿ ಚುನಾವಣೆ ನಡೆಯಲಿದ್ದು ,ಡಿಸೆಂಬರ್ 23ಕ್ಕೆ ಫಲಿತಾಂಶ ಹೊರ ಬೀಳಲಿದೆ.
ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ 15 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 189 ಅಭ್ಯರ್ಥಿಗಳ ಚುನಾವಣಾ ಭವಿಷ್ಯವನ್ನು 37 ಲಕ್ಷಕ್ಕೂ ಹೆಚ್ಚು ಮತದಾರರು ನಿರ್ಧರಿಸಲಿದ್ದಾರೆ ಎಂದು ಜಾರ್ಖಂಡ್ ಮುಖ್ಯ ಚುನಾವಣಾ ಅಧಿಕಾರಿ ವಿನಯ್ ಕುಮಾರ್ ಚೌಬೆ ತಿಳಿಸಿದ್ದಾರೆ.
ಜಾರ್ಖಂಡ್ನಲ್ಲಿ ನವೆಂಬರ್ 1ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು ರಾಜ್ಯ ವಿಧಾನಸಭೆಯ ಐದು ವರ್ಷಗಳ ಅವಧಿ ಜನವರಿ 5, 2020 ಕ್ಕೆ ಮುಕ್ತಾಯಗೊಳ್ಳಲಿದೆ. ಮತದಾನ ನಡೆಯುವ ಹಿನ್ನಲೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ 2ನೇ ಬಾರಿಗೆ ಅಧಿಕಾರಕ್ಕೇರಿದ ನಂತರ ನಡೆಯುತ್ತಿರುವ 3ನೇ ರಾಜ್ಯದ ಚುನಾವಣೆ ಇದಾಗಿದೆ. ಈ ರಾಜ್ಯದಲ್ಲಿ ಕೂಡ ಬಿಜೆಪಿ ಅಧಿಕಾರದಲ್ಲಿದೆ. ಹೀಗಾಗಿ, ಜಾರ್ಖಂಡ್ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ವಿಷಯವಾಗಿದೆ. ಇತ್ತೀಚೆಗಷ್ಟೇ ಮಹಾರಾಷ್ಟ್ರ ಮತ್ತು ಹರಿಯಾಣ ಸೇರಿದಂತೆ ಕೆಲವು ರಾಜ್ಯಗಳ ಉಪಚುನಾವಣೆ ಫಲಿತಾಂಶ ಹೊರಬಿದ್ದಿತ್ತು. ಅದರ ಬೆನ್ನಲ್ಲೇ ಜಾರ್ಖಂಡ್ ಚುನಾವಣೆ ನಡೆಯುತ್ತಿದೆ.