ರಾಂಚಿ: ಜಾರ್ಖಂಡ್ ಪೊಲೀಸರ ಗುಂಡಿನ ದಾಳಿಗೆ ಐವರು ನಕ್ಸಲೀಯರು ಹತರಾಗಿರುವ ಘಟನೆ ಸೋಮವಾರ (ಎ.03) ನಡೆದಿದೆ. ಐವರಲ್ಲಿ ಇಬ್ಬರು ನಕ್ಸಲೀಯರ ತಲೆಗೆ ಪೊಲೀಸ್ ಇಲಾಖೆ ತಲಾ 25 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದು, ಇನ್ನಿಬ್ಬರ ವಿರುದ್ಧ 5 ಲಕ್ಷ ರೂಪಾಯಿ ಘೋಷಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಐಪಿಎಲ್ 2023: ಮುಂಬೈ ಇಂಡಿಯನ್ಸ್ ಬೌಲರ್ ಗಳಿಗೆ ಎಚ್ಚರಿಕೆ ನೀಡಿದ ರೋಹಿತ್ ಶರ್ಮಾ
ಜಾರ್ಖಂಡ್ ನ ಛಾತ್ರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳದಲ್ಲಿ ಎರಡು ಎಕೆ 47 ವಶಪಡಿಸಿಕೊಳ್ಳಲಾಗಿದೆ. ನಕ್ಸಲೀಯರ ವಿರುದ್ಧದ ಕಾರ್ಯಾಚರಣೆ ಮುಂದುವರಿದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜಾರ್ಖಂಡ್ ಪೊಲೀಸರ ಮಾಹಿತಿ ಪ್ರಕಾರ, ಹತ ನಕ್ಸಲೀಯರನ್ನು ಗೌತಮ್ ಪಾಸ್ವಾನ್, ಚಾರ್ಲಿ, ಸಬ್ ಝೋನಲ್ ಕಮಾಂಡರ್ಸ್ ಗಳಾದ ನಂದು, ಅಮರ್ ಗಂಜು ಮತ್ತು ಸಂಜೀವ್ ಭುಯಿಯಾನ್ ಎಂದು ಗುರುತಿಸಲಾಗಿದೆ.
ಎನ್ ಕೌಂಟರ್ ನಲ್ಲಿ ಐವರು ನಕ್ಸಲೀಯರು ಹತರಾಗಿದ್ದು, ಉಳಿದವರು ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ. ಗುಂಡಿನ ಚಕಮಕಿ ನಡೆದ ಸ್ಥಳದಲ್ಲಿ ಎಕೆ 47 ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಸ್ಪೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.