Advertisement

Jharkand: ಮುಖ್ಯಮಂತ್ರಿ ಸ್ಥಾನಕ್ಕೆ ಚಂಪೈ ಸೊರೇನ್‌ ರಾಜೀನಾಮೆ

09:52 PM Jul 03, 2024 | Team Udayavani |

ರಾಂಚಿ:  ಜಾರ್ಖಂಡ್‌ ಮುಖ್ಯಮಂತ್ರಿ ಚಂಪೈ ಸೊರೇನ್‌ ನಿರೀಕ್ಷೆಯಂತೆಯೇ ಬುಧವಾರ ರಾತ್ರಿ  ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರಿಂದಾಗಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಳೆದ ವಾರ ಜಾಮೀನು ಪಡೆದ ಜೆಎಂಎಂ ನಾಯಕ ಹೇಮಂತ್ ಸೊರೇನ್ (Hemanth Soren)  ಮತ್ತೆ ಮುಖ್ಯಮಂತ್ರಿಯಾಗಲು ಸಜ್ಜಾಗುತ್ತಿದ್ದಾರೆ.

Advertisement

ರಾಂಚಿಯಲ್ಲಿನ ರಾಜಭವನಕ್ಕೆ ತೆರಳಿ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್‌ ಅವರಿಗೆ ಸಿಎಂ ಚಂಪೈ ಸೊರೇನ್‌ ರಾಜೀನಾಮೆ ಪತ್ರ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ಮತ್ತೆ ಸರ್ಕಾರ ರಚನೆಯ ಹಕ್ಕು ಕೂಡ ಮಂಡಿಸಿದರು.

ರಾಜೀನಾಮೆ ಸಲ್ಲಿಸಿ ಹೊರಬಂದ ಬಳಿಕ ಮಾತನಾಡಿದ ಚಂಪೈ ಸೊರೇನ್‌ ʼಕಳೆದ ಐದು ತಿಂಗಳಿನಿಂದ ರಾಜ್ಯದ ಮುಖ್ಯಮಂತ್ರಿಯಾಗಿ ಜವಾಬ್ದಾರಿ ನಿರ್ವಹಿಸಿದ್ದೇನೆ. ಈಗ ನಮ್ಮನಾಯಕ ಹೇಮಂತ್‌ ಸೊರೇನ್‌ ಮರಳಿ ಬಂದಿದ್ದಾರೆ. ಹೀಗಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ನಮ್ಮ ಮೈತ್ರಿಕೂಟದ ನಾಯಕರೆಲ್ಲ ಸೇರಿ ಹೇಮಂತ್‌ ಸೊರೇನ್‌ರನ್ನು ನಾಯಕರಾಗಿ ಆಯ್ಕೆ ಮಾಡಲಾಗಿದೆʼ ಎಂದರು.

ಜಾರಿ ನಿರ್ದೇಶನಾಲಯ (ಇಡಿ) ಬಂಧಿಸುವ ಮೊದಲು ಜನವರಿಯಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು. ಕಳೆದ ವಾರ ಜಾಮೀನು ಮಂಜೂರು ಮಾಡಿದ ಜಾರ್ಖಂಡ್ ಹೈಕೋರ್ಟ್, “ಆಪಾದಿತ ಅಪರಾಧದಲ್ಲಿ ಅವರು ತಪ್ಪಿತಸ್ಥನಲ್ಲ” ಎಂದು ನಂಬಲು ಕಾರಣವಿದೆ ಎಂದು ಹೇಳಿದೆ.

ಬುಧವಾರ ಚಂಪೈ ಸೊರೇನ್ ನಿವಾಸದಲ್ಲಿ ನಡೆದ ಜಾರ್ಖಂಡ್ ಮುಕ್ತಿ ಮೋರ್ಚಾ (JMM), ಕಾಂಗ್ರೆಸ್ ಮತ್ತು ಆರ್‌ಜೆಡಿ ಮೈತ್ರಿಕೂಟದ ನಾಯಕರ ಸಭೆಯಲ್ಲಿ ಹೇಮಂತ್ ಸೊರೇನ್ ವಾಪಸಾತಿ ಕುರಿತು ಆಡಳಿತಾರೂಢ ಸಮ್ಮಿಶ್ರ ನಾಯಕರು ಒಮ್ಮತಕ್ಕೆ ಬಂದಿದ್ದಾರೆ. ಸಭೆಯಲ್ಲಿ ಕಾಂಗ್ರೆಸ್‌ನ ಜಾರ್ಖಂಡ್ ಉಸ್ತುವಾರಿ ಗುಲಾಮ್ ಅಹ್ಮದ್ ಮಿರ್, ರಾಜ್ಯಾಧ್ಯಕ್ಷ ರಾಜೇಶ್ ಠಾಕೂರ್ ಮತ್ತು ಹೇಮಂತ್ ಸೊರೇನ್ ಪತ್ನಿ ಮತ್ತು ಶಾಸಕಿ ಕಲ್ಪನಾ ಸೋರೆನ್ ಉಪಸ್ಥಿತರಿದ್ದರು. ಚಂಪೈ ಸೊರೇನ್ ರನ್ನು ಜೆಎಂಎಂನ ಕಾರ್ಯಾಕಾರಿ ಅಧ್ಯಕ್ಷರಾಗಿ ನೇಮಕ ಮಾಡಬಹುದು ಎಂದು ತಿಳಿದು ಬಂದಿದೆ.

Advertisement

ಹೇಮಂತ್‌ ನಾಯಕತ್ವಕ್ಕೆ ಒಲವು:

ಜಾರ್ಖಂಡ್‌ನಲ್ಲಿ ಚುನಾವಣೆಗೆ ತಿಂಗಳುಗಳು ಬಾಕಿಯಿದ್ದು, ಹೇಮಂತ್ ಸೊರೇನ್ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಜೆಎಂಎಂ ನೋಡುತ್ತಿದೆ. ಆದರೆ ಚಂಪೈ ಸೊರೇನ್ ರನ್ನು ಬದಲಿಸುವ ನಿರ್ಧಾರವು ಪ್ರತಿಪಕ್ಷ ಬಿಜೆಪಿಗೆ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ. 67 ವರ್ಷದ ಚಂಪೈ ಸೊರೇನ್ ಜೆಎಂಎಂನ ಹಿರಿಯ ನಾಯಕರಾಗಿದ್ದು ಪಕ್ಷದ ಸಂಸ್ಥಾಪಕ ಮತ್ತು ಹೇಮಂತ್ ಸೊರೇನ್ ತಂದೆ ಶಿಬು ಸೊರೆನ್ ರೊಂದಿಗೆ ದಶಕಗಳಿಂದ ಇದ್ದಾರೆ. ಈ ಹಿಂದೆ ಅವರು ಹೇಮಂತ್ ಸೊರೇನ್ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು.

ಜಾರ್ಖಂಡ್‌ನ ಗೊಡ್ಡಾದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಸಾಮಾಜಿಕ ಜಾಲತಾಣ ಪೋಸ್ಟ್‌ನಲ್ಲಿ “ಜಾರ್ಖಂಡ್‌ನಲ್ಲಿ ಚಂಪೈ ಸೊರೇನ್ ಯುಗ ಮುಗಿದಿದೆ” ಎಂದು ಹೇಳಿದ್ದಾರೆ. ಜೆಎಂಎಂ ಅನ್ನು ಗುರಿಯಾಗಿಸಿಕೊಂಡ ಅವರು “ಕುಟುಂಬ ಆಧಾರಿತ ಪಕ್ಷದಲ್ಲಿ, ಕುಟುಂಬದ ಹೊರಗಿನ ಜನರಿಗೆ ರಾಜಕೀಯ ಭವಿಷ್ಯವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next