ಆನೇಕಲ್: ತಾಲೂಕಿನ ಹಲವು ಠಾಣಾ ವ್ಯಾಪ್ತಿಯಲ್ಲಿ ಕೆಲ ವರ್ಷಗಳಿಂದ ಕಳ್ಳತನ ಪ್ರಕರಣಗಳು ದಾಖಲಾಗಿತ್ತು ಸದ್ಯ ಹೆಬ್ಬಗೋಡಿ ಹಾಗೂ ಸರ್ಜಾಪುರ ಪೊಲೀಸರು ಹಳೆ ಪ್ರಕರಣಗಳನ್ನು ಬೇಧಿಸಿ ಆರೋಪಿಗಳನ್ನು ಬಂಧಿಸಿ ಅವರಿಂದ ಕಳವು ಮಾಲನ್ನು ಜಪ್ತಿ ಮಾಡಿ ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಮನೆ ಕಳ್ಳತನ ಮಾಡಿ ತಲೆ ಮರೆಸಿಕೊಂಡಿದ್ದ ತಿಪಟೂರು ತಾಲೂಕಿನ ಹಾಲುಕುರ್ಕಿ ಗ್ರಾಮದ ಮೈಲಾರಿ (26)ಯನ್ನು ಹೆಬ್ಬಗೋಡಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಜಗದೀಶ್ ಮತ್ತು ಅವರ ತಂಡ 12 ಪ್ರಕರಣಗಳನ್ನು ಭೇದಿಸಿ ಆರೋಪಿಯಿಂದ ಸುಮಾರು 9.50 ಲಕ್ಷ ರೂ. ಮೌಲ್ಯದ 320 ಗ್ರಾಂ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಮೈಲಾರಿಯೊಂದಿಗೆ ಕಳ್ಳತನದಲ್ಲಿ ಭಾಗಿಯಾಗಿದ್ದ ಮತ್ತೂಬ್ಬ ಆರೋಪಿ ರಮೇಶ್ ತಲೆ ಮರೆಸಿಕೊಂಡಿದ್ದು ಪತ್ತೆಗೆ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ತಿರುಪಾಳ್ಯ ಗ್ರಾಮದ ಬಳಿ ಕಾರು ಹಾಗೂ ಕೊಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರವಾಹನ ಕಳ್ಳತನ ಮಾಡಿದ್ದ ಕೋಳಿಪಾರಂನ ಅರವಿಂದ (22) ಆರೋಪಿಯನ್ನು ಬಂಧಿಸಿ 5.5 ಲಕ್ಷ ಮೌಲ್ಯದ ಕಾರು ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಸರ್ಜಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಾಣ ವಾಗುತ್ತಿರುವ ಬಡಾವಣೆಗಳಲ್ಲಿ ಎಲೆಕ್ಟ್ರಿಕಲ್ ವೈರ್ ಮತ್ತು ಪ್ಲಂಬಿಂಗ್ ಸಾಮಾನುಗಳನ್ನು ಕಳ್ಳತನ ಮಾಡುತ್ತಿದ್ದ ತಮಿಳುನಾಡಿನ ವೆಟ್ರಿವೇಲ್(25), ಪಳನಿವೇಲ್ (26), ಸೆಲ್ವಂ(24) ಆರೋಪಿಗಳನ್ನು ಸರ್ಜಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ ನವೀನ್ ಮತ್ತು ಅವರ ತಂಡ ಬಂಧಿಸಿ 9.25 ಲಕ್ಷ ಮೌಲ್ಯದ ಕಾಪರ್ ವೈರ್ ಬಂಡಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಆರೋಪಿಗಳಿಂದ ವಶ ಪಡಿಸಿಕೊಂಡ ಆಭರಣ, ವಸ್ತುಗಳನ್ನು ಮಾಲೀಕರಿಗೆ ಹಿಂದಿರು ಗಿಸಲಾಯಿತು. ಹೆಬ್ಬಗೋಡಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಜಗದೀಶ್, ಸರ್ಜಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ ನವೀನ್ ಇತರರು ಇದ್ದರು.