Advertisement

ಆಭರಣ ಸುಂದರಿ!

12:30 AM Mar 13, 2019 | |

ಹಬ್ಬಹರಿದಿನಗಳಂದು ಸರ ಪಟಾಕಿ ಹಚ್ಚಿ ಡಮ್ಮೆಂದು ಸದ್ದು ಮಾಡಿ ಸಂಭ್ರಮಿಸುವುದು ಸಾಮಾನ್ಯ. ಸದ್ದು ಮಾಡದ “ಸರ’ ಪಟಾಕಿ ಹಚ್ಚಿ ಸಂಭ್ರಮಿಸುವ ದಿನವನ್ನು ಎಲ್ಲಾದರೂ ನೋಡಿದ್ದೀರಾ? ಆ ದಿನವೇ ರಾಷ್ಟ್ರೀಯ ಆಭರಣ ದಿನ. ಹೆಂಗಳೆಯರೆಲ್ಲಾ ಅಂದು “ಸರ’ ತೊಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸೆಲ್ಫಿ ಪಟಾಕಿ ಹಚ್ಚಿ ನೋಡುಗರ ಕಂಗಳನ್ನು ಮಿನುಗಿಸುತ್ತಾರೆ.

Advertisement

ನಮ್ಮಲ್ಲಿ ಅಕ್ಷಯ ತೃತೀಯ ಇದ್ದಂತೆ ಅನ್ಯದೇಶೀಯರಿಗೂ ಚಿನ್ನ ಕೊಳ್ಳಲು ಒಂದು ದಿನ ಬೇಕಲ್ಲವೇ? ಅದಕ್ಕೆ ಹೆಚ್ಚಿನ ದೇಶಗಳು ಮಾರ್ಚ್‌ 13ರಂದು ಅವರವರ ನ್ಯಾಷನಲ್‌ ಜುವೆಲ್‌ ಡೇ ಅಂದರೆ ರಾಷ್ಟ್ರೀಯ ಒಡವೆ ದಿನ ಆಚರಿಸುತ್ತಾ ಬಂದಿದ್ದಾರೆ. ಈ ದಿನವನ್ನು ಮೊದಲು ಆಚರಿಸಿದ್ದು ಯಾರು, ಎಲ್ಲಿ, ಯಾಕೆ ಮತ್ತು ಹೇಗೆ ಎಂಬುದು ಯಾರಿಗೂ ಗೊತ್ತಿಲ್ಲ! ಆದರೂ ಜನರು ಈ ದಿನವನ್ನು ವರ್ಷ ವರ್ಷ ಆಚರಿಸುತ್ತಿದ್ದಾರೆ. 

ಸಂಭ್ರಮಕ್ಕೆ ಕಾರಣ ಬೇಕೆ?
ಆಭರಣ ವ್ಯಾಪಾರಿಗಳಿಗೆ ಲಾಭವಾಗಲು ಈ ದಿನ ಸೃಷ್ಟಿಸಲಾಗಿತ್ತೆ? ಅಥವಾ ಇದಕ್ಕೆ ಆಯಾ ದೇಶದ ಇತಿಹಾಸದಲ್ಲಿ ಏನಾದರೂ ಮಹತ್ವದ ಸ್ಥಾನವಿತ್ತೆ? ಇದಕ್ಕೆ ಎಲ್ಲಿಯೂ ಉತ್ತರವಿಲ್ಲ. ಆದರೆ ಆಭರಣಪ್ರಿಯರಿಗೆ ಒಡವೆ ಕೊಳ್ಳಲು ಕಾರಣ ಬೇಕೇ? ಖುಷಿಯಿಂದ ತಮ್ಮ ಒಡವೆಗಳನ್ನು ತೊಟ್ಟು ಅಥವಾ ಹೊಸ ಒಡವೆ ಕೊಂಡುಕೊಂಡು ಈ ದಿನದಂದು ಸಂಭ್ರಮಿಸುತ್ತಾರೆ. 

ಇಂಟರ್‌ನೆಟ್‌ನಲ್ಲಿ ಮಿಂಚು
ಹ್ಯಾಶ್‌ಟ್ಯಾಗ್‌ ನ್ಯಾಷನಲ್‌ ಜುವೆಲ್‌ ಡೇ (#NationalJewelDay), ಹ್ಯಾಶ್‌ ಟ್ಯಾಗ್‌ ಹ್ಯಾಪಿ ಜುವೆಲ್‌ ಡೇ (#HappyJewelDay)ಎಂದು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಆಭರಣ ತೊಟ್ಟು ಪೋಸ್‌ ಕೊಟ್ಟಿರುವ ತಮ್ಮ ಚಿತ್ರಗಳನ್ನು ಅಪ್ಲೋಡ್‌ ಮಾಡುತ್ತಾರೆ ಜನ. ಹಾಗಾಗಿ ಇದು ಕೂಡ ಒಂದು ಟ್ರೆಂಡ್‌ ಆಗಿಬಿಟ್ಟಿದೆ. ಈ ದಿನದಂದು ಜನರು ತಮ್ಮ ಪ್ರೀತಿಪಾತ್ರರಿಗೆ ಆಭರಣವನ್ನು ಉಡುಗೊರೆಯಾಗಿ ನೀಡುತ್ತಾರೆ. ಇಲ್ಲವೆ ಆಭರಣವನ್ನು ಉಡುಗೊರೆಯಾಗಿ ಪಡೆಯುತ್ತಾರೆ. ಇವೆರಡೂ ಆಗದಿದ್ದರೆ ತಮ್ಮಲ್ಲಿರುವ ಒಡವೆಗಳನ್ನು ತೊಟ್ಟು ಓಡಾಡುತ್ತಾರೆ. ಇಲ್ಲವೆ ತಮಗೆ ತಾವೆ ಹೊಸ ಆಭರಣವನ್ನು ಖರೀದಿಸಿ ಉಡುಗೊರೆಯಾಗಿ ನೀಡುತ್ತಾರೆ. ಈ ಆಚರಣೆ ಎಷ್ಟೊಂದು ಸಿಂಪಲ್‌ ನೋಡಿ!

ಹೆಂಗಳೆಯರಿಗೆ ಮಾತ್ರವಲ್ಲ
ಈ ದಿನ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ. ಇದನ್ನು ಪುರುಷರು ಸಹ ಆಚರಿಸುತ್ತಾರೆ. ಇನ್ನು ಕೆಲವು ಜನರು ಈ ದಿನದಂದು ಆಭರಣ ತಯಾರಿಕಾ ಶಿಬಿರ ಅಥವಾ ತರಬೇತಿಗೆ ಸೇರಿ ಜಂಕ್‌ ಜುವೆಲರಿ (ಗುಜರಿ ವಸ್ತುಗಳಿಂದ ತಯಾರಿಸಿದ ಆಭರಣ) ಮಾಡುವುದನ್ನು ಕಲಿಯಲು ಮುಂದಾಗುತ್ತಾರೆ ಕೂಡ! ನೀವೂ ಈ ಒಡವೆ ದಿನವನ್ನು ಆಚರಿಸುವುದಾದರೆ, ಯಾವ ರೀತಿ ಆಚರಿಸುತ್ತೀರಾ? ಯಾರಿಗಾದ್ರೂ ಹೊಸ ಒಡವೆ ಉಡುಗೊರೆಯಾಗಿ ನೀಡುತ್ತೀರಾ? ನಿಮಗೆ ನೀವೆ ಹೊಸ ಆಭರಣ ಖರೀದಿಸುತ್ತೀರಾ? ಅಥವಾ ಆಭರಣ ವಿನ್ಯಾಸ ಮಾಡುವುದು ಹೇಗೆ ಎಂಬುದನ್ನು ಕಲಿಯುತ್ತೀರಾ?

Advertisement

ಬೆಲೆಬಾಳುವ ಕಲ್ಲುಗಳು
ಜನ್ಮರಾಶಿಗೆ ಅನುಗುಣವಾದ ಕಲ್ಲುಗಳು, ರತ್ನಗಳು ಅಥವಾ ಜನ್ಮತಿಂಗಳಿಗೆ ಅನುಗುಣವಾದ ಕಲ್ಲುಗಳಿಂದ ಒಡವೆ ಮಾಡಿಸಿ ಈ ದಿನದಂದು ತೊಡುವುದು ಕೆಲವು ದೇಶಗಳಲ್ಲಿ ಸಂಪ್ರದಾಯವಾಗಿ ಬಿಟ್ಟಿದೆ. ಇಂಗ್ಲಿಷ್‌ ಕ್ಯಾಲೆಂಡರ್‌ ನೋಡುವುದಾದರೆ –
ಜನವರಿ- ಗಾರ್ನೆಟ್‌ (ರಕ್ತಮಣಿ)
ಫೆಬ್ರವರಿ- ಆಮೆತಿಸ್ಟಲ್ಲು (ಪದ್ಮಾ ರಾಗ)
ಮಾರ್ಚ್‌- ಆಕ್ವಾಮರೀನ್‌ (ನೀಲಿ-ಹಸಿರು ಬಣ್ಣದ ಕಲ್ಲು)
ಏಪ್ರಿಲ್‌- ಡೈಮಂಡ್‌(ವಜ್ರ)
ಮೇ- ಎಮರಲ್ಡ… (ಪಚ್ಚೆ ಕಲ್ಲು)
ಜೂನ್‌- ಪರ್ಲ್ (ಮುತ್ತು)
ಜುಲೈ- ರೂಬಿ (ಕೆಂಪು ಬಣ್ಣದ ಮಾಣಿಕ್ಯ)
ಆಗಸ್ಟ್- ಪೆರಿಡೊಟ್‌ (ಒಂದು ವಿಧದ ಪಚ್ಚೆಮಣಿ)
ಸೆಪ್ಟೆಂಬರ್‌- ಸಫಾಯರ್‌ (ಇಂದ್ರನೀಲಮಣಿ)
ಅಕ್ಟೋಬರ್‌- ಓಪಲ್‌ (ಕ್ಷೀರಸ್ಫಟಿಕ)
ನವೆಂಬರ್‌- ಎಲ್ಲೋ ಟೋಪ್ಯಾಜ…, ಸಿಟ್ರಿನ್‌ (ಗೋಮೇದಕ, ತೆಳು ಹಳದಿ ಬಣ್ಣದ ಪುಷ್ಯರಾಗ)
ಡಿಸೆಂಬರ್‌ – ಟಾಂಜನೈಟ್‌, ಜರ್ಕಾನ್‌, ಬ್ಲೂ ಟೊಪ್ಯಾಜ್‌ (ನೇರಳೆ ಬಣ್ಣದ ಕಲ್ಲು, ಕಂದು ಬಣ್ಣದ ಕಲ್ಲು, ನೀಲಮಣಿ)

ರಿಯಾಯಿತಿ ಕೊಡುಗೆಗಳು
ಈ ದಿನದಂದು ಆಭರಣ ತಯಾರಕರು, ವಿನ್ಯಾಸಕರು ಮತ್ತು ಮಾರಾಟಗಾರರು ಒಡವೆಗಳ ಮೇಲೆ ರಿಯಾಯಿತಿ ಮತ್ತು ಕೊಡುಗೆಗಳನ್ನೂ ನೀಡುತ್ತಾರೆ. ಹಾಗಾಗಿ ಈ ದಿನಕ್ಕಾಗಿ ಬಹಳ ಜನ ಕಾಯುತ್ತಾರೆ ಕೂಡ.

ಅದಿತಿಮಾನಸ. ಟಿ. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next