Advertisement
ಐವತ್ತೂಂಭತ್ತು ಪ್ರಕರಣಗಳಲ್ಲಿ ಬೊಮ್ಮನಹಳ್ಳಿಯ 13, ಮಡಿವಾಳದ 14, ಆಡುಗೋಡಿಯ 13, ಪರಪ್ಪನ ಅಗ್ರಹಾರ 9, ಎಲೆಕ್ಟ್ರಾನಿಕ್ ಸಿಟಿ 10 ಪ್ರಕರಣಗಳು ಪತ್ತೆಯಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
Related Articles
Advertisement
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸರಗಳವು: ಬಸ್‌ಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಮೌಲ್ಯಯುತ ವಸ್ತುಗಳನ್ನು ಕಳವು ಮಾಡುತ್ತಿದ್ದ ತಮಿಳುನಾಡಿನ ಜೋಲಾರಪೇಟೆಯ ಒಂದೇ ಕುಟುಂಬದ ಇಬ್ಬರು ಮಹಿಳೆಯರು ನಾಲ್ವರನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ. ಶಬರಿ (38), ಬಾಲಾಜಿ(49), ಜ್ಯೋತಿ(44) ಮತ್ತು ಸುಬಾಸ(20) ಬಂಧಿತರು. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಂತೆ ನಿಂತುಕೊಳ್ಳುವ ಆರೋಪಿಗಳು ಬ್ಯಾಗ್‌ಗಳನ್ನು ಕೊಂಡೊಯ್ಯುವ ಸಹ ಪ್ರಯಾಣಿಕರ ಜತೆ ಬಸ್ ಹತ್ತುತ್ತಿದ್ದರು.
ಸ್ವಲ್ಪ ದೂರ ಬಸ್ ಹೋಗುತ್ತಿದ್ದಂತೆ ಆ ನಿರ್ದಿಷ್ಟ ಪ್ರಯಾಣಿಕರ ಪಕ್ಕದಲ್ಲೇ ಆರೋಪಿತ ಮಹಿಳೆಯರು ಕುಳಿತುಕೊಳ್ಳುತ್ತಿದ್ದರು. ಇತರೆ ಆರೋಪಿಗಳು ಪಕ್ಕದಲ್ಲೇ ನಿಂತುಕೊಳ್ಳುತ್ತಿದ್ದರು. ಅನಂತರ ಕುಳಿತಿರುವ ಸೀಟಿನ ಕೆಳಗೆ ಚಿಲ್ಲರೆ ಹಣ ಹಾಕಿ, ತೆಗೆದುಕೊಳ್ಳುವಂತೆ ನಟಿಸಿ, ನಿರ್ದಿಷ್ಟ ಪ್ರಯಾಣಿಕರಿಗೆ ಹಣ ತೆಗೆದುಕೊಡುವಂತೆ ಕೇಳುತ್ತಿದ್ದರು.
ಆತ ಕೆಳಗೆ ಬಗ್ಗುತ್ತಿದ್ದಂತೆ, ಪಕ್ಕದಲ್ಲೇ ಇದ್ದ ಇತರೆ ಆರೋಪಿಗಳು ಆ ಪ್ರಯಾಣಿಕನ ಬ್ಯಾಗ್‌ಗೆ ಕೈ ಹಾಕಿ ಚಿನ್ನಾಭರಣ ಮತ್ತು ಹಣ ಕಳವು ಮಾಡಿ ಮುಂದಿನ ನಿಲ್ದಾಣಗಳಲ್ಲಿ ಇಳಿದು ಪರಾರಿಯಾಗುತ್ತಿದ್ದರು. ಈ ಸಂಬಂಧ ವಿಶೇಷ ಕಾರ್ಯಾಚರಣೆ ನಡೆಸಿದ ಎಲೆಕ್ಟ್ರಾನಿಕ್ ಸಿಟಿ ಠಾಣೆ ಇನ್‌ಸ್ಪೆಕ್ಟರ್‌ಎಂ.ಮಲ್ಲೇಶ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ, 28 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಎರಡೂವರೆ ಲಕ್ಷ ರೂ. ನಗದು ವಶಕ್ಕೆ ಪಡೆದುಕೊಂಡಿದೆ.
ಮಡಿವಾಳ ದ್ವಿಚಕ್ರವಾಹನ ಕಳವು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಕೇರಳದ ವೈನಾಡು ಜಿಲ್ಲೆಯ ಜೋಸಿನ್ ಟಿಟೋಸ್(20), ಸಿಮ್‌ಜಿತ್ ಶಶಿಕುಮಾರ್ (22) ಮತ್ತು ತಮಿಳುನಾಡಿನ ಸೆಲ್ವರಾಜ್ (30) ಬಂಧಿತರು. ಅವರಿಂದ 15 ಲಕ್ಷ ರೂ. ಮೌಲ್ಯದ 20 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಮಡಿವಾಳ ಸೇರಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 20 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿದ್ದು, ಐಷಾರಾಮಿ ಜೀವನಕ್ಕಾಗಿ ಕೃತ್ಯ ಎಸಗುತ್ತಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ಆಡುಗೋಡಿ, ಪರಪ್ಪನ ಅಗ್ರಹಾರದಲ್ಲೂ ಕಳವು: ಐಷಾರಾಮಿ ಜೀವನಕ್ಕಾಗಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಕಾನೂನು ಸಂಘರ್ಷಕ್ಕೊಳಗಾದವ ಸೇರಿ ಮೂವರು ಆರೋಪಿಗಳನ್ನು ಆಡುಗೋಡಿ ಮತ್ತು ಪರಪ್ಪನ ಅಗ್ರಹಾರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. ದೀಪಕ್(18) ಮತ್ತು ಸುಹೇಲ್ (23) ಬಂಧಿತರು. ಅವರಿಂದ 25ಲಕ್ಷ ರೂ. ಮೌಲ್ಯದ 29 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳಿಂದ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 20 ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.