•ವಿಜಯಕುಮಾರ ಎಸ್.ಕಲ್ಲಾ
ಜೇವರ್ಗಿ: ತಾಲೂಕಿನ ಹೆಗ್ಗಿನಾಳ ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟ ಪರಿಣಾಮ ಕಳೆದ ಎಂಟು ವರ್ಷಗಳಿಂದ ಬಸ್ ಸಂಚಾರ ಸ್ಥಗಿತವಾಗಿ ವಿದ್ಯಾರ್ಥಿಗಳು, ರೈತರು, ಮಹಿಳೆಯರು ನಿತ್ಯ ಪರದಾಡುವಂತೆ ಆಗಿದೆ.
ಸುಮಾರು 800 ಜನಸಂಖ್ಯೆ ಹೊಂದಿರುವ ಹೆಗ್ಗಿನಾಳ ಗ್ರಾಮ ತೀರಾ ಹಿಂದುಳಿದಿದ್ದು, ಬಡ ಕೂಲಿಕಾರ್ಮಿಕರು, ಹಿಂದುಳಿದ ವರ್ಗದ ಜನರೇ ಹೆಚ್ಚಾಗಿ ವಾಸ ಮಾಡುತ್ತಿದ್ದಾರೆ.
ಸೊನ್ನದಿಂದ ಹೆಗ್ಗಿನಾಳಕ್ಕೆ ತೆರಳುವ ಈ ರಸ್ತೆ ಕಳೆದ ಏಳೆಂಟು ವರ್ಷಗಳಿಂದ ದುರಸ್ತಿ ಕಾಣದೇ ಇದ್ದುದರಿಂದ ತೆಗ್ಗು-ಗುಂಡಿಗಳು ಬಿದ್ದಿವೆ. ಜೇವರ್ಗಿಯಿಂದ ಸೊನ್ನ ಗ್ರಾಮದ ವರೆಗೆ ಮಾತ್ರ ಬಸ್ ಸಂಚಾರವಿದೆ. ಅಲ್ಲಿಂದ ಹೆಗ್ಗಿನಾಳ ಗ್ರಾಮಕ್ಕೆ ಐದು ಕಿ.ಮೀ ನಡೆದುಕೊಂಡೇ ಹೋಗಬೇಕು. ಇದು ಈ ಗ್ರಾಮದ ವಿದ್ಯಾರ್ಥಿಗಳು, ಶಿಕ್ಷಕರು ನಿತ್ಯ ಪಡುವ ನರಕಯಾತನೆ.
ಹಿರಿಯ ಪ್ರಾಥಮಿಕ ಶಾಲೆ ಮಾತ್ರ ಈ ಗ್ರಾಮದಲ್ಲಿದ್ದು, ಪ್ರೌಢಶಾಲೆ ಹಾಗೂ ಕಾಲೇಜಿಗೆ ಬರಬೇಕಾದರೇ ಸೊನ್ನಕ್ಕೆ ಐದು ಕಿ.ಮೀ ನಡೆದುಕೊಂಡೇ ಬರಬೇಕು. ಉಳ್ಳವರು ಟಂಟಂ ಅಥವಾ ಬೈಕ್ ಮೇಲೆ ಪ್ರಯಾಣಿಸಿದರೇ ಬಡವರು ನಡೆದುಕೊಂಡೇ ಹೋಗಬೇಕು. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದಲ್ಲಿರುವ ನಾಲ್ಕು ಬೋರವೆಲ್ಗಳು ನಿರುಪಯುಕ್ತವಾಗಿದ್ದು, ಕುಡಿಯಲು ಯೋಗ್ಯವಿಲ್ಲ. ಇರುವ ಒಂದು ಕೆರೆಯ ಹೂಳೆತ್ತದೇ ಅನೇಕ ವರ್ಷಗಳಿಂದ ನಿರ್ಲಕ್ಷಿಸಲಾಗಿದೆ. ನಾಲಾ ಸುಧಾರಣೆ, ಕೆರೆ ನವೀಕರಣ ಕಾಮಗಾರಿ ನಡೆಯಬೇಕಿದ್ದು, ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಗ್ರಾಮದ ಹೊಸ ಬಡಾವಣೆಗೆ ವಿದ್ಯುತ್ ಸಂಪರ್ಕ, ನೀರಿನ ಸಮಸ್ಯೆ, ಸ್ಮಶಾನ ಅಭಿವೃದ್ಧಿ, ಹೆಗ್ಗಿನಾಳದಿಂದ ಮಾವನೂರ, ನೀರಲಕೋಡ ರಸ್ತೆ ನಿರ್ಮಾಣವಾಗಬೇಕಿದೆ. ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ಮಳೆ ನೀರು, ಮನೆ ಬಳಕೆ ನೀರು ರಸ್ತೆ ಮೇಲೆ ನಿಂತು ಗಲೀಜು ವಾತಾವರಣ ನಿರ್ಮಾಣವಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟವರು ಈ ಗ್ರಾಮದ ಕಡೆ ಗಮನಹರಿಸುವರೋ ಇಲ್ಲವೋ ಕಾಯ್ದು ನೋಡಬೇಕಿದೆ.
ಗ್ರಾಮದ ಸಮಸ್ಯೆಗಳ ಕುರಿತು ಜಿಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ತಾಪಂ ಇಒ, ಗ್ರಾಪಂ ಪಿಡಿಒಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಆದರೆ ಇಲ್ಲಿಯವರೆಗೂ ಈ ಗ್ರಾಮದ ರಸ್ತೆ ಹಾಗೂ ಅಭಿವೃದ್ಧಿ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಕೂಡಲೇ ಕೆರೆ ಹೂಳೆತ್ತುವ, ಹೊಸ ಬಡಾವಣೆಗೆ ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೇ ಗ್ರಾಮಸ್ಥರೊಂದಿಗೆ ಸೇರಿ ತಹಶೀಲ್ದಾರ್ ಕಚೇರಿ ಎದುರು ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ.
•
ಗೌರಮ್ಮ ಮಲ್ಕಣಗೌಡ ಪಾಟೀಲ,
ಗ್ರಾಪಂ ಸದಸ್ಯರು