ಜೇವರ್ಗಿ: ತಾಲೂಕಿನ ಕೋಳಕೂರ ಗ್ರಾಮದ ಸರಕಾರಿ ಪ್ರೌಢಶಾಲೆಗೆ ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಪ್ಪ ಹುಲಕಲ್ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು.
ಶುಕ್ರವಾರ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಶನಿವಾರ ಶಾಲಾ ಆವರಣದಲ್ಲಿ ಲೆಕ್ಕ ಬಾರದ ಗಣಿತ ಶಿಕ್ಷಕರ ವರ್ಗಾವಣೆ ಆಗುವ ವರೆಗೂ ಶಾಲೆ ಬೀಗ ತೆಗೆಯಲ್ಲ, ನಮಗೆ ಈ ಗಣಿತ ಶಿಕ್ಷಕ ಬೇಡವೇ ಬೇಡ ಎಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿದ್ದರು.
ಇದೇ ವೇಳೆ ವಿದ್ಯಾರ್ಥಿಗಳು ಗಣಿತ ಶಿಕ್ಷಕರು ನಮಗೆ ಅರ್ಥವಾಗುವ ರೀತಿಯಲ್ಲಿ ಪಾಠ ಮಾಡುತ್ತಿಲ್ಲ. ಗಣಿತ ವಿಷಯಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆ ಕೇಳಿದರೂ ಸರಿಯಾದ ಉತ್ತರ ನೀಡದೇ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಡೈಜೆಸ್ಟ್ ನೋಡಿ ನೀವೇ ಉತ್ತರ ಹುಡುಕಿಕೊಳ್ಳಿ ಎನ್ನುತ್ತಾರೆ. ನಮಗೆ ಎಸ್‌ಎಸ್‌ಎಲ್ಸಿ ಪ್ರಮುಖ ಘಟ್ಟ. ಅದರಲ್ಲೂ ಎಲ್ಲಾ ವಿಷಯಗಳಿಗಿಂತ ಗಣಿತ ಕಠಿಣವಾಗಿದೆ. ಈ ವಿಷಯದ ಬಗ್ಗೆ ನಮಗೆ ತಿಳಿಯುವಂತೆ ಪಾಠ ಮಾಡದೇ ಶಿಕ್ಷಕರು ಉಡಾಫೆ ಮಾಡುತ್ತಿದ್ದಾರೆ ಎಂದು ದೂರಿದರು.
ಶಾಲೆಯಲ್ಲಿ ಸೇವಕಿಯಿದ್ದರೂ ನಮ್ಮ ಕೈಯಿಂದಲೇ ಶಾಲೆ ಆವರಣ, ಕೋಣೆಗಳ ಕಸಗೂಡಿಸುವುದು ಸೇರಿದಂತೆ ಇನ್ನಿತರ ಕೆಲಸ ಮಾಡಿಸಲಾಗುತ್ತಿದೆ. ಶಾಲೆಯಲ್ಲಿ ಸ್ವಚ್ಛತೆ ಎನ್ನುವುದೇ ಮರಿಚೀಕೆಯಾಗಿದೆ. ನಿತ್ಯ ನಮಗೆ ನೀಡುವ ಬಿಸಿಯೂಟದಲ್ಲಿ ತರಕಾರಿ ಬಳಸದೇ ಅರೆಬೆಂದ ಅನ್ನ, ತಿಳಿಸಾರು ನೀಡಲಾಗುತ್ತಿದೆ. ಈ ಎಲ್ಲ ಸಮಸ್ಯೆ ಬಗೆಹರಿಸುವುದರ ಜೊತೆಗೆ ಕೂಡಲೇ ಗಣಿತ ಶಿಕ್ಷಕರ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.
ಬಿಇಒ ಶಾಂತಪ್ಪ ಹುಲಕಲ್ ಗ್ರಾಮದ ಪ್ರಮುಖರ, ವಿದ್ಯಾರ್ಥಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಗಣಿತ ಶಿಕ್ಷಕರನ್ನು ಬೇರೆಡೆ ನಿಯೋಜನೆ ಮಾಡಲಾಗುವುದು. ಶಾಲೆ ಸ್ವಚ್ಛತೆ ಬಗ್ಗೆ ಸಿಬ್ಬಂದಿ ಗಮನಹರಿಸಬೇಕು. ಇಲ್ಲದಿದ್ದರೆ ಬೇರೆಡೆ ವರ್ಗಾವಣೆ ಮಾಡಬೇಕಾಗುತ್ತದೆ. ಅಲ್ಲದೇ ಮಕ್ಕಳಿಗೆ ನಿತ್ಯ ಗುಣಮಟ್ಟದ ಬಿಸಿಯೂಟ ನೀಡಬೇಕು ಎಂದು ಮುಖ್ಯಶಿಕ್ಷಕರಿಗೆ ತಾಕೀತು ಮಾಡಿದರು. ನಂತರ ಪ್ರತಿಭಟನೆ ಕೈಬಿಟ್ಟು ವಿದ್ಯಾರ್ಥಿಗಳು ತರಗತಿ ಕೋಣೆಗೆ ತೆರಳಿದರು.
ಮುಖ್ಯಶಿಕ್ಷಕ ಎಸ್.ಟಿ. ಬಿರಾದಾರ, ಗ್ರಾಪಂ ಅಧ್ಯಕ್ಷ ಅಮೃತರಾಯಗೌಡ ಪೇಠ ಪಾಟೀಲ, ಸದಸ್ಯ ರವಿಗೌಡ ಪಾಟೀಲ, ಆರ್‌ಎಸ್‌ಎಸ್ ಸೊಸೈಟಿ ಅಧ್ಯಕ್ಷ ಸಿದ್ಧಣ್ಣ ಕೂಡಿ, ಪೀರಣ್ಣ ಗುತ್ತಾ, ಮಲ್ಕಣ್ಣ, ಮಲ್ಲಣ್ಣ ಹೊಸಳ್ಳಿ, ಮಹಾದೇವ ಪಾಳೆದ್, ಬಸ್ಸುಗೌಡ ಪೇಠ ಪಾಟೀಲ ಹಾಗೂ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.