ವಿಜಯಕುಮಾರ ಎಸ್.ಕಲ್ಲಾ
ಜೇವರ್ಗಿ: ತಾಲೂಕಿನ ಸೊನ್ನ ಗ್ರಾಮದ ಜನತೆಯ ಜ್ಞಾನ ದೇಗುಲವಾದ ಗ್ರಂಥಾಲಯ ಕಟ್ಟಡ ಕಾಮಗಾರಿ ಏಳು ವರ್ಷ ಕಳೆದರೂ ಗ್ರಾ.ಪಂ ಆಡಳಿತದ ನಿರ್ಲಕ್ಷ್ಯದಿಂದ ಅರ್ಧಕ್ಕೆ ನಿಂತಿದೆ.
ಕಳೆದ 2012ರಲ್ಲಿ ಗ್ರಾ.ಪಂನ ಬಿಆರ್‌ಜಿಎಫ್ ಅನುದಾನದಡಿ 5 ಲಕ್ಷ ರೂ. ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಆದರೆ ಗುತ್ತಿಗೆದಾರನ ಹಾಗೂ ಅ ಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಂಥಾಲಯ ಕಟ್ಟಡ ಮಾತ್ರ ಪೂರ್ಣಗೊಳ್ಳದೇ ಈವರೆಗೂ ಅರ್ಧಕ್ಕೆ ನಿಂತಿದೆ.
ಗ್ರಾಮ ಪಂಚಾಯತ ಕಾರ್ಯಾಲಯ ಪಕ್ಕದಲ್ಲೇ ಇರುವ ಗ್ರಂಥಾಲಯ ಕಟ್ಟಡಕ್ಕೆ ಅಡಿಪಾಯ ಹಾಕಿ ಅರ್ಧ ಗೋಡೆ ಕಟ್ಟಿದ್ದು ಬಿಟ್ಟರೆ ಇನ್ಯಾವ ಕೆಲಸವೂ ನಡೆದಿಲ್ಲ. ಗ್ರಾಮದಲ್ಲಿ 2003ರಲ್ಲಿ ಆರಂಭವಾಗಿರುವ ಗ್ರಂಥಾಲಯದಲ್ಲಿ ಸದ್ಯ 620 ಜನರು ಸದಸ್ಯತ್ವ ಪಡೆದಿದ್ದು, ಸದಸ್ಯತ್ವ ಪಡೆದವರಿಗೆ ಮೂರು ಪುಸ್ತಕಗಳನ್ನು 15 ದಿನಗಳವರೆಗೆ ನೀಡಲಾಗುತ್ತದೆ. ನಿತ್ಯ ಪತ್ರಿಕೆ ಹಾಗೂ ಪುಸ್ತಕ ಓದಲು 20ಕ್ಕೂ ಹೆಚ್ಚು ಓದುಗರು ಬರುತ್ತಿದ್ದಾರೆ. ಗ್ರಂಥಾಲಯದಲ್ಲಿ 3,525 ಪುಸ್ತಕಗಳಿದ್ದು, ಇದರಲ್ಲಿ ಸಾಹಿತ್ಯ, ಕಾದಂಬರಿ, ಕಥೆ, ಹನಿಗವನ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲ ಆಗುವಂತ ಪುಸ್ತಕಗಳಿವೆ. ಜತೆಗೆ ದಿನಪತ್ರಿಕೆಗಳು, ವಾರ, ಪಾಕ್ಷಿಕ, ಮಾಸಿಕ ಪತ್ರಿಕೆಗಳು ಓದುಗರಿಗೆ ಲಭ್ಯ ಇವೆ.
ಕಟ್ಟಡ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ತಾತ್ಕಾಲಿಕವಾಗಿ ಗ್ರಂಥಾಲಯ ನಡೆಸುತ್ತಿರುವುದರಿಂದ ಗ್ರಾ.ಪಂ ಸಿಬ್ಬಂದಿ ಹಾಗೂ ಸದಸ್ಯರಿಗೆ ತೊಂದರೆಯಾಗುತ್ತಿದೆ. ಸ್ಥಳ ಅಭಾವದ ಕಾರಣ ಪುಸ್ತಕಗಳನ್ನು ಮೂರು ಕಪಾಟುಗಳಲ್ಲಿ ಇಡಲಾಗಿದೆ. ಆಸನ, ಗಾಳಿ, ಬೆಳಕಿಗೆ ಯಾವುದೇ ತೊಂದರೆ ಇಲ್ಲ. ಆದರೆ ಓದುಗರು ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಲು ವ್ಯವಸ್ಥಿತ ಜಾಗವೇ ಇಲ್ಲದಂತಾಗಿದೆ.
ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕಾಗಿ ಹಲವು ಬಾರಿ ಶಾಸಕ ಡಾ|ಅಜಯಸಿಂಗ್ ಅವರಿಗೆ ಸೊನ್ನ ಸಿದ್ಧಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಡಾ| ಶಿವಾನಂದ ಸ್ವಾಮೀಜಿ ನೇತೃತ್ವದಲ್ಲಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಗ್ರಾ.ಪಂ ಅಧಿಕಾರಿಗಳು ಸಾರ್ವಜನಿಕರಿಗೆ, ಗ್ರಾಮಕ್ಕೆ ಮೂಲ ಸೌಲಭ್ಯ ಒದಗಿಸುವ ಜತೆಗೆ ಗ್ರಾಮದ ಯುವಕರು, ಓದುಗರು, ಸಾಹಿತ್ಯಾಸಕ್ತರು ಮತ್ತು ಹಿರಿಯ ಜೀವಿಗಳ ಮುಖ್ಯ ಕೇಂದ್ರವಾಗಿರುವ ಗ್ರಂಥಾಲಯ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ.