ಜೇವರ್ಗಿ: ಪಟ್ಟಣದಲ್ಲಿರುವ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂಲ ಸೌಕರ್ಯವಿಲ್ಲದೇ ಒಳ ಮತ್ತು ಹೊರರೋಗಿಗಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಪಟ್ಟಣದ ಹೃದಯ ಭಾಗದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸೇರಿದಂತೆ ಮೂಲಸೌಕರ್ಯ ದೊರಕದೇ ಪರದಾಡುವಂತಾಗಿದೆ.
50 ಹಾಸಿಗೆಯುಳ್ಳ ಈ ಆಸ್ಪತ್ರೆಯಲ್ಲಿ ಕುಡಿಯುವ ನೀರು, ಶೌಚಾಲಯ ಸಮಸ್ಯೆ ಗಂಭೀರವಾಗಿ ಕಾಡುತ್ತಿದೆ. ಗರ್ಭಿಣಿಯರು, ವೃದ್ಧರು, ಮಹಿಳೆಯರು ಶೌಚಾಲಯ ಇಲ್ಲದೇ ಮಲಮೂತ್ರ ವಿಸರ್ಜನೆಗೆ ಪರದಾಡುವಂತಾಗಿದೆ. ರೋಗಿಗಳು ಮಲಗುವ ಮಂಚದ ಮೇಲೆ ಬೆಡ್‌ಶೀಟ್ ಹಾಕದೇ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇಲ್ಲ. ಆದರೆ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಸೌಲಭ್ಯ ದೊರೆಯುತ್ತಿಲ್ಲ ಎನ್ನುವ ದೂರುಗಳು ಕೇಳಿ ಬರುತ್ತಿವೆ.
ನಿತ್ಯ 200 ರಿಂದ 300 ರೋಗಿಗಳು ಆಸ್ಪತ್ರೆಗೆ ಬಂದು ಹೋಗುತ್ತಾರೆ. ಆದರೆ ಅವರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ನೆಲದ ಮೇಲೆ ಕುಳಿತು ವೈದ್ಯರಿಗಾಗಿ ಕಾಯುವಂತಾಗಿದೆ. ರೋಗಿಗಳಿಗೆ ಕೆಮ್ಮು, ನೆಗಡಿ ಬಂದರೆ ಮಾತ್ರ ಇಲ್ಲಿ ಚಿಕಿತ್ಸೆ. ಗಾಯ, ತೀವ್ರ ತರಹದ ಜ್ವರ ಹಾಗೂ ರೋಗ ಬಂದರೆ ತಕ್ಷಣ ಕಲಬುರಗಿಗೆ ಕಳುಹಿಸಲಾಗುತ್ತಿದೆ. ಆಸ್ಪತೆ ಹೊರಗೂ ಹಾಗೂ ಒಳಗೂ ಸ್ವಚ್ಛತೆ ಮಾಯವಾಗಿದೆ. ಒಳರೋಗಿಗಳ ಕೋಣೆಯಲ್ಲಿ ಕಿಡಕಿಗಳಿಗೆ ಹಾಕಿರುವ ಪರದೆ ಗಲೀಜಾಗಿ ಅನೇಕ ವರ್ಷಗಳಾದರೂ ಬದಲಾಯಿಸುವ ಗೋಜಿಗೆ ಯಾರೂ ಹೋಗಿಲ್ಲ. ಶೌಚಾಲಯ ಕೋಣೆಯಲ್ಲಿ ಬಾಗಿಲು ಮುರಿದು ಗಬ್ಬೆದ್ದು ನಾರುತ್ತಿದೆ. ಮಹಿಳೆಯರ ವಾರ್ಡ್ ಹಾಗೂ ಪುರುಷರ ವಾರ್ಡ್‌ಗೂ ವ್ಯತ್ಯಾಸವಿಲ್ಲದಂತೆ ಆಗಿದೆ. ಯಾರೂ ಎಲ್ಲಿ ಬೇಕಾದರೂ ದಾಖಲು ಆಗಬಹುದು. ಆಸ್ಪತ್ರೆಯ ಕಿಟಕಿ, ಗೋಡೆಗಳ ಮೇಲೆ ಗುಟಕಾ ತಿಂದು ಉಗುಳಿ ಗಲೀಜು ಮಾಡಲಾಗಿದೆ. ವೈದ್ಯರು ಬರೆದುಕೊಡುವ ಔಷಧ ಒಂದು ಸಿಕ್ಕರೇ, ಇನ್ನೊಂದನ್ನು ಹೊರಗಡೆ ಹೋಗಿ ತರಬೇಕು. ಈ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟವರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಸರ್ಕಾರ ಆರೋಗ್ಯಕ್ಕಾಗಿ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ಇಲ್ಲಿ ಬಡ ರೋಗಿಗಳ ಪರದಾಟ ಮಾತ್ರ ತಪ್ಪಿಲ್ಲ. ಶಾಸಕ ಡಾ| ಅಜಯಸಿಂಗ್ ವೃತ್ತಿಯಲ್ಲಿ ವೈದ್ಯರಾಗಿದ್ದರೂ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಸಮಸ್ಯೆ ಹಾಗೂ ಇಲ್ಲಿನ ಅವ್ಯವಸ್ಥೆ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಶಾಸಕರು ಆಸ್ಪತ್ರೆಗೆ ಭೇಟಿ ನೀಡಿ ವರ್ಷಗಳೇ ಕಳೆದಿವೆ. ತಾಲೂಕು ಆರೋಗ್ಯಾಧಿಕಾರಿ ಡಾ| ಸಿದ್ಧು ಪಾಟೀಲ ಅವರಿಗೆ ಸ್ಥಳೀಯ ಆಸ್ಪತ್ರೆಯ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಅಲ್ಲದೇ ಆಸ್ಪತ್ರೆ ಕಡೆ ಹೆಚ್ಚು ಗಮನ ನೀಡುತ್ತಿಲ್ಲ ಎನ್ನುವ ಆರೋಪ ಸ್ಥಳೀಯರಿಂದ ಕೇಳಿಬರುತ್ತಿದೆ. ಆದ್ದರಿಂದ ಕಾಯಂ ತಾಲೂಕು ವೈದ್ಯಾಧಿಕಾರಿ ನೇಮಕ ಮಾಡುವ ಮೂಲಕ ಆಸ್ಪತ್ರೆ ಸುಧಾರಿಸುವ ಯತ್ನ ಮಾಡಬೇಕಿದೆ.
ತಾಲೂಕು ಆರೋಗ್ಯಾಧಿಕಾರಿ ಡಾ| ಸಿದ್ಧು ಪಾಟೀಲ ಕರ್ತವ್ಯಕ್ಕಿಂತ ರಾಜಕೀಯ ಮಾಡುವುದರಲ್ಲಿಯೇ ಹೆಚ್ಚು ಸಮಯ ವ್ಯಯಿಸುತ್ತಾರೆ. ಪಟ್ಟಣದ ಆಸ್ಪತ್ರೆ ಸೇರಿದಂತೆ ತಾಲೂಕಿನ ಬಹುತೇಕ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ರೋಗಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ.
•
ಶಿವಲಿಂಗಹಳ್ಳಿ.
ಅಧ್ಯಕ್ಷರು ಕರವೇ ತಾಲೂಕು ಘಟಕ ಜೇವರ್ಗಿ
ದವಾಖಾನ್ಯಾಗ ಯಾರೂ ಕೇಳ್ಳೋರು ಇಲ್ಲದಂಗ್ ಆಗ್ಯಾದ. ಗೋಲಿ (ಔಷಧ) ಚೀಟಿ ಬರದಾರ್. ಈ ದವಾಖಾನಿದಾಗ ಯಾವೂದು ಇಲ್ಲಂತ ಹೇಳಕತ್ತಾರ. ನೂರಾರು ರೂಪಾಯಿ ಖರ್ಚು ಮಾಡಿ ಹೊರಗಿನ ಮೆಡಿಕಲ್ದಾಗ ಗೋಲಿ ತಂದೀನಿ. ಇದು ದವಾಖಾನಿ ಅಲ್ಲ, ದನದ ಕೊಟ್ಟಿಗಿ ಆಗ್ಯಾದ.
•
ಭಾಗಮ್ಮ ಗುಡೂರ (ಆಸ್ಪತ್ರೆಗೆ ಬಂದ ರೋಗಿ)
ವಿಜಯಕುಮಾರ ಎಸ್.ಕಲ್ಲಾ