Advertisement

ಜೇವರ್ಗಿಗೆ ಸಿಸಿ ಕ್ಯಾಮೆರಾ ಕಣ್ಗಾವಲು

12:15 PM Nov 24, 2019 | Naveen |

ವಿಜಯಕುಮಾರ ಎಸ್‌.ಕಲ್ಲಾ
ಜೇವರ್ಗಿ:
ಕುಡಿದು ಅಡ್ಡಾದಿಡ್ಡಿ ಬೈಕು, ಕಾರು ಓಡಿಸುವುದು, ಕಳ್ಳತನ, ಪ್ರತಿಭಟನೆ ವೇಳೆ ಕಲ್ಲು ತೂರಾಟ, ಒಂಟಿ ಮಹಿಳೆಯರನ್ನು ಚುಡಾಯಿಸುವುದು ಸೇರಿದಂತೆ ಕಾನೂನು ವಿರೋಧಿ ಚಟುವಟಿಕೆ ನಡೆಸುವವರಿಗೆ ಕಡಿವಾಣ ಹಾಕಲು ಸ್ಥಳಿಯ ಪೊಲೀಸ್‌ರು ಪಟ್ಟಣದ ಅನೇಕ ಕಡೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ.

Advertisement

ಪಟ್ಟಣದ ಮೂಲಕ ಹುಮನಾಬಾದ-ವಿಜಯಪುರ ರಾಷ್ಟ್ರೀಯ ಹೆದ್ದಾರಿ 50, ಬೀದರ-ಬೆಂಗಳೂರು ರಾಜ್ಯ ಹೆದ್ದಾರಿ ಹಾಯ್ದು ಹೋಗಿದ್ದು, ಪಟ್ಟಣದಲ್ಲಿ ಸಂಭವಿಸುತ್ತಿರುವ ಅಪಘಾತ, ಕಳ್ಳತನ, ದರೋಡೆ, ಕೊಲೆ, ರೌಡಿಗಳ ಹಾವಳಿಯಂತ ಅಪರಾಧ ಪ್ರಕರಣಗಳಿಗೆ ಇನ್ಮುಂದೆ ತಡೆ ಬೀಳಲಿದೆ.

ಪಿಎಸ್‌ಐ ಮಂಜುನಾಥ ಹೂಗಾರ ಜೇವರ್ಗಿ ಠಾಣೆಗೆ ವರ್ಗವಾಗಿ ಬಂದ ಮೇಲೆ ಸಿಸಿ ಕ್ಯಾಮರಾ ಅಗತ್ಯ ಕುರಿತು ಅಂದಿನ ಪುರಸಭೆ ಮುಖ್ಯಾಧಿಕಾರಿಯಾಗಿದ್ದ ಬಸವರಾಜ ಶಿವಪೂಜಿ ಅವರೊಂದಿಗೆ ಚರ್ಚಿಸಿ, ಸಿಸಿ ಕ್ಯಾಮರಾ ಅಳವಡಿಸಲು ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ನಂತರ ಪಿಎಸ್‌ಐ ಹೂಗಾರ ಅಫಜಲಪುರ ಠಾಣೆಗೆ ವರ್ಗವಾಗಿ ಹೋಗಿದ್ದರು. ತದನಂತರ ಪ್ರಕ್ರಿಯೆ ಸ್ಥಗಿತವಾಗಿತ್ತು.

ಇತ್ತಿಚೆಗೆ ಮತ್ತೆ ಅಫಜಲಪುರದಿಂದ ಜೇವರ್ಗಿಗೆ ವರ್ಗವಾಗಿ ಬಂದಿರುವ ಹೂಗಾರ ಮುತುವರ್ಜಿ ವಹಿಸಿ, ಸಿಸಿ ಕ್ಯಾಮರಾ ಅಳವಡಿಸುವ ಕಾರ್ಯಕ್ಕೆ ಮತ್ತೆ ಚಾಲನೆ ನೀಡಿದರು.

ಪುರಸಭೆಯ 2018-19ನೇ ಸಾಲಿನ ಎಸ್‌ಎಫ್‌ಸಿ ಅನುದಾನದಲ್ಲಿ 1.91 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿ ಟೆಂಡರ್‌ ಕರೆದು ಕ್ಯಾಮರಾ ಅಳವಡಿಸುವ ಕಾರ್ಯ ಪೂರ್ಣಗೊಳಿಸಲಾಗಿದೆ. ಪಟ್ಟಣದ ನೂತನ ಬಸ್‌ ನಿಲ್ದಾಣ, ಬಸವೇಶ್ವರ ಸರ್ಕಲ್‌, ಅಂಬೇಡ್ಕರ್‌ ವೃತ್ತ, ಅಖಂಡೇಶ್ವರ ವೃತ್ತ ಸದಾ ಜನಜಂಗುಳಿಯಿಂದ ಕೂಡಿರುತ್ತದೆ. ಈ ಎಲ್ಲ ವೃತ್ತಗಳು ಹೆದ್ದಾರಿ ಮೇಲಿರುವುದರಿಂದ ಅಪಘಾತ, ಕಳ್ಳತನ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ.

Advertisement

ಇವೆಲ್ಲವುಗಳಿಗೆ ಕಡಿವಾಣ ಹಾಕಲು ಮೊದಲ ಹಂತದಲ್ಲಿ ಹೊಸ ಬಸ್‌ ನಿಲ್ದಾಣದ ಎದುರು ಮೂರು, ಅಂಬೇಡ್ಕರ್‌ ವೃತ್ತದ ಬಳಿ ಮೂರು ಹಾಗೂ ಬಸವೇಶ್ವರ ವೃತ್ತದ ಬಳಿ ಮೂರು ಕ್ಯಾಮರಾ ಅಳವಡಿಸಲಾಗಿದೆ.

ಪುರಸಭೆಗೆ ನಾನು ಬರುವ ಮುಂಚೆ ಪಿಎಸ್‌ಐ ಹೂಗಾರ ಕ್ಯಾಮರಾ ಅಳವಡಿಸಲು ಪ್ರಸ್ತಾವನೆ ಸಲ್ಲಿಸಿದ್ದರು. 2018-19ನೇ ಸಾಲಿನ ಎಸ್‌ಎಫ್‌ಸಿ ಯೋಜನೆಯಲ್ಲಿ 1.91 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿ, ಪಟ್ಟಣದ ಮೂರು ಕಡೆ ಕ್ಯಾಮರಾ ಅಳವಡಿಸಲಾಗಿದೆ.
ಕೆ.ಎಸ್‌. ಲಕ್ಷ್ಮೀಶ,
ಮುಖ್ಯಾಧಿಕಾರಿ, ಪುರಸಭೆ

ಡಿವೈಎಸ್ಪಿ ಎಸ್‌.ಎಸ್‌. ಹುಲ್ಲೂರ, ಸಿಪಿಐ ರಮೇಶ ರೊಟ್ಟಿ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗಿದೆ. ಈಗ ಮೂರು ಕಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಅಖಂಡೇಶ್ವರ ವೃತ್ತ, ಜ್ಯೋತಿ ಹೋಟೆಲ್‌, ವಿದ್ಯಾನಗರ ತೆರಳುವ ರಸ್ತೆಗಳಲ್ಲಿ ಕ್ಯಾಮರಾ ಅಳವಡಿಸಲಾಗುವುದು.
.ಮಂಜುನಾಥ ಹೂಗಾರ,
ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌

Advertisement

Udayavani is now on Telegram. Click here to join our channel and stay updated with the latest news.

Next