Advertisement

ಕೋವಿಡ್ ಹರಡದಂತೆ ಜಾಗ್ರತೆ ವಹಿಸಿ ಎಂದವರೇ ಈ ಜೆಸಿಕಾ

11:38 AM May 14, 2020 | sudhir |

ಯಾರಪ್ಪ ಈ ರೀತಿ ತಲೆ ತಿಂತಿದಾರೆ. ಅರೇ, ಎಲ್ಲರ ಕಾಲರ್ ಟ್ಯೂನ್ ಚೇಂಜ್ ಆಗಿದೆ. ಹೇ ಕೋವಿಡ್ ಜಾಗೃತಿ ಧ್ವನಿ ಅಂತೇ ಅದು. ಅಂತ ನಮ್ಮ ಮಧ್ಯೆ ಇದ್ದ ಸಾವಿರ ಪ್ರಶ್ನೆಗಳಿಗೆ ಕಾರಣವಾದ ಧ್ವನಿ.ಇತ್ತೀಚಿನ ದಿನಗಳಲ್ಲಿ ವಿಶ್ವದಾದ್ಯಂತ ಹಬ್ಬುತ್ತಿರುವ ಕೋವಿಡ್ ವೈರಸ್ ನ ಜಾಗ್ರತಿ ಧ್ವನಿಯು ಕಾಲರ್ ಟ್ಯೂನ್ ನ ಮೂಲಕ ಕೋಟ್ಯಂತರ ಜನರ ಕಿವಿಗೆ ತಲುಪುತ್ತಿದೆ. ಈ ಕಾಲರ್ ಟ್ಯೂನ್ ಗೆ ಕನ್ನಡ ಧ್ವನಿ ಕೊಟ್ಟ ಬಹುಮುಖ ಪ್ರತಿಭೆ ಡಾರೆಲ್ ಜೆಸಿಕಾ ಫೆರ್ನಾಂಡಿಸ್.

Advertisement

ಪ್ರಸ್ತುತ ದೆಹಲಿಯ ಕನ್ನಡ ಸೀನಿಯರ್ ಸೆಕೆಂಡರಿ ಸ್ಕೂಲ್ ನಲ್ಲಿ ಕಳೆದ 7 ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮಂಗಳೂರಿನ ಕಪಿತಾನಿಯೊ ದಲ್ಲಿ ಪಡೆದು ಪದವಿ ಶಿಕ್ಷಣವನ್ನು ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ಪಡೆದಿರುತ್ತಾರೆ. ಇವರು ಪುತ್ತೂರಿನ ಪ್ರತಿಷ್ಠಿತ ಸಂತ ಫಿಲೋಮಿನಾ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಡಿಂಪಲ್ ಜೆನಿಫರ್ ಫೆರ್ನಾಂಡಿಸ್ ಇವರ ತಂಗಿಯೂ ಹೌದು. ಮಂಗಳೂರಿನ ಹುಡುಗಿಗೆ ಪುತ್ತೂರಿನ ನಂಟೂ ಇದೆ.

ಜೆಸಿಕಾರವರಿಗೆ ಕೋವಿಡ್ ಜಾಗೃತಿಯ ಕಾಲರ್ ಟ್ಯೂನ್ ಗೆ ಧ್ವನಿ ಕೊಡಲು ಪ್ರೇರೇಪಿಸಿದವರು ಖ್ಯಾತ ಯಕ್ಷಗಾನ ಕಲಾವಿದರಾದ ಸರವು ಕೃಷ್ಣ ಭಟ್. ಇವರು ಜೆಸಿಕಾ ಕೆಲಸ ಮಾಡುತ್ತಿರುವ ಶಾಲೆಯ ಅಧ್ಯಕ್ಷರು ಕೂಡ ಹೌದು. “ನಾನು ಸರವು ಕೃಷ್ಣ ಭಟ್ ಅವರು ಹೇಳಿದರೆ ಮಾತ್ರವೇ ವಾಯ್ಸ್ ಓವರ್ ಕೊಡಲು ಹೋಗುವುದು, ಬೇರೆ ಯಾರು ಕರೆದರೂ ಇದುವರೆಗೂ ಹೋಗಲಿಲ್ಲ “ಎಂದಿದ್ದಾರೆ ಜೆಸಿಕಾ.

ಡಾರೆಲ್ ಜೆಸಿಕಾ ಇದುವರೆಗೆ 200 ಕ್ಕೂ ಹೆಚ್ಚು ಸರಕಾರದ ಯೋಜನೆ ಗಳಿಗೆ ವಾಯ್ಸ್ ಓವರ್ ನೀಡಿದ್ದಾರೆ. ತಮ್ಮ 24ನೇ ವಯಸ್ಸಿನಲ್ಲಿ ವಾಯ್ಸ್ ಓವರ್ ಕೊಡಲು ಪ್ರಾರಂಭಿಸಿದ ಇವರ ಧ್ವನಿ ಇಂದಿಗೂ ರೇಡಿಯೋ, ದೂರದರ್ಶನ ಗಳಲ್ಲಿ ಪ್ರಸಾರವಾಗುತ್ತಿದೆ.ಇವರು ಕಳೆದ 7 ವರ್ಷಗಳಿಂದ ಅನೇಕ ಜಾಹಿರಾತುಗಳಿಗೆ, ಪ್ರಕಟಣೆಗಳಿಗೆ ಧ್ವನಿ ನೀಡಿದ್ದಾರೆ.

Advertisement

” ಪ್ರತಿಯೊಬ್ಬರ ಫೋನ್ ನಲ್ಲಿ ತನ್ನ ಧ್ವನಿ ಪ್ರಸಾರವಾಗಬಹುದು ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಕನ್ನಡದಲ್ಲಿ ಕೋಟ್ಯಾಂತರ ಜನರಿಗೆ ಕೇಳಿಸುವ ಜಾಗ್ರತಿಯ ಧ್ವನಿ ನನ್ನದು ಎಂದು ಹೇಳಲು ಹೆಮ್ಮೆ ಅನಿಸುತ್ತದೆ”ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ ಜೆಸಿಕಾ. ಚಿಕ್ಕವಯಸ್ಸಿನಲ್ಲಿ ಸೇನೆಗೆ ಸೇರುವ ಕನಸು ಹೊತ್ತುಕೊಂಡಿದ್ದ ಇವರು ತಮ್ಮ ಕಾಲೇಜು ದಿನಗಳಲ್ಲಿ NCC ಕೆಡೆಟ್ ಆಗಿ ಸಂತ ಅಲೋಶಿಯಸ್ ಕಾಲೇಜಿನ 2006-07 ನೇ ಸಾಲಿನ “ಬೆಸ್ಟ್ NCC ಕೆಡೆಟ್ “ಎಂಬ ಹೆಸರಿಗೆ ಭಾಜನರಾಗಿದ್ದಾರೆ. NCC ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ ಯಲ್ಲಿ ಭಾಗವಹಿಸಿ ಚಿನ್ನದ ಪದಕ ಹಾಗೂ ಪರೇಡ್ ಟ್ಯಾಲೆಂಟ್ ನಲ್ಲಿ ಬೆಳ್ಳಿಯ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಇವರು ಖೋ ಖೋ, ಕಬಡ್ಡಿ, ಥ್ರೋ ಬಾಲ್, ಟೆನ್ನಿಸ್, ಫುಟ್ಬಾಲ್, ಹ್ಯಾಂಡ್ಬಾಲ್, ಅಥ್ಲೆಟಿಕ್ಸ್ ಮುಂತಾದ ಕ್ರೀಡೆಯಲ್ಲಿ ಭಾಗವಹಿಸಿರುತ್ತಾರೆ. ಜೆಸಿಕಾ ರವರು ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು, 2010ರಲ್ಲಿ ರಾಜಸ್ತಾನ ದಲ್ಲಿ ನಡೆದ ರಾಷ್ಟ್ರ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.

ಜೆಸಿಕಾರವರು ಕ್ರೀಡಾ ಲೋಕಕ್ಕೆ ಮಾತ್ರ ಸೀಮಿತವಾಗಿರದೆ ನಾಟಕ, ಚಿತ್ರಕಲೆ, ಡಾನ್ಸ್, ಮುಂತಾದ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕಲಿಕೆಯಲ್ಲೂ ಇವರು ಎತ್ತಿದ ಕೈ. B.P.Ed ನಲ್ಲಿ 2ನೇ ರಾಂಕ್ ಹಾಗೂ M.P.Ed ನಲ್ಲೂ 2ನೇ ರಾಂಕ್ ಪಡೆದು ಸೈ ಎನಿಸಿಕೊಂಡಿದ್ದಾರೆ.

ಸೈನ್ಯದಲ್ಲಿ ಡ್ರಿಲ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಡೊರ್ಜೆ ಜೋಷುಆ ಇವರೊಂದಿಗೆ ವಿವಾಹವಾದ ಇವರು ವಲೇರಿಯನ್ ಫೆರ್ನಾಂಡಿಸ್ ಹಾಗೂ ಲವೀನಾ ಫೆರ್ನಾಂಡಿಸ್ ದಂಪತಿಗಳ ಪುತ್ರಿ. ಡಾರೆಲ್ ಜೆಸಿಕಾ ಫೆರ್ನಾಂಡಿಸ್ ರವರ ಮುಂದಿನ ಜೀವನ ಉಜ್ವಲವಾಗಿರಲಿ ಎಂದು ಆಶಿಸೋಣ.

– ಲಾವಣ್ಯ. ಎಸ್.  ಪತ್ರಿಕೋದ್ಯಮ ವಿದ್ಯಾರ್ಥಿನಿ , ಸಂತ ಫಿಲೋಮಿನಾ ಕಾಲೇಜು ಪುತ್ತೂರು.

Advertisement

Udayavani is now on Telegram. Click here to join our channel and stay updated with the latest news.

Next