ದೊಡ್ಡ ಸೂಫಿ ಸಂತನಾಗಿದ್ದ ಹಸನ್ ಮರಣ ಶಯ್ಯೆಯಲ್ಲಿದ್ದ. ವಯಸ್ಸಾಗಿತ್ತು, ಸಹಜವಾಗಿ ಮೃತ್ಯು ಕೂಗಳತೆಯಲ್ಲಿತ್ತು. ಸುತ್ತ ನೆರೆದಿದ್ದವರಲ್ಲಿ ಒಬ್ಬ ಕೇಳಿದ, “ಹಸನ್ , ನಿಮ್ಮ ಗುರು ಯಾರು?’ “ಈಗ ಅದನ್ನೆಲ್ಲ ಕೇಳುವುದಕ್ಕೆ ಸಮಯವಲ್ಲ, ಬಹಳ ತಡವಾಯಿತಲ್ಲ! ಕಾಲ ಬಹಳ ಕಡಿಮೆಯಿದೆ, ಸಾವು ಸನಿಹದಲ್ಲಿದೆ’ ಎಂದ ಹಸನ್. “ನೀವೀಗಲೂ ಉಸಿರಾಡುತ್ತಿದ್ದೀರಿ, ಮಾತನಾಡುತ್ತಿದ್ದೀರಿ; ಕೆಲವು ಹೆಸರುಗಳ ನ್ನಾದರೂ ಹೇಳಬಹುದಲ್ಲ’ ಕೇಳಿದಾತ ಪಟ್ಟು ಬಿಡಲಿಲ್ಲ.
“ಅದೂ ಕಷ್ಟವೇ. ಏಕೆಂದರೆ ಲಕ್ಷಾಂತರ ಗುರುಗಳಿಂದ ನಾನು ಕಲಿತಿದ್ದೇನೆ. ಅವರನ್ನೆಲ್ಲ ಒಬ್ಬೊಬ್ಬರನ್ನಾಗಿ ನೆನಪು ಮಾಡಿಕೊಳ್ಳುವುದು, ಏನೇನು ಕಲಿಸಿಕೊಟ್ಟರು ಎಂದು ಸ್ಮರಿಸಿಕೊಳ್ಳು ವುದು ಬಹಳ ಕಷ್ಟದ ಕೆಲಸ…’ ಹಸನ್ ನಿಡುಸುಯ್ದರು. “ಆದರೆ ಬಹಳ ಮುಖ್ಯ ವಾದ ಮೂರು ಗುರುಗಳನ್ನು ನೆನಪಿಸಿ ಕೊಳ್ಳಬಹುದು…’ ಎಂದರು ಹಸನ್.
ಒಬ್ಬ ಗುರು ಒಬ್ಬ ಕಳ್ಳ. ಒಂದು ಬಾರಿ ನಾನು ಯಾತ್ರೆಯಲ್ಲಿದ್ದಾಗ ಒಂದು ಪಟ್ಟಣವನ್ನು ಸೇರಿದೆ. ಆಗ ತಡರಾತ್ರಿ ಯಾಗಿತ್ತು. ಅಂಗಡಿ ಮುಂಗಟ್ಟುಗಳೆಲ್ಲ ಮುಚ್ಚಿದ್ದವು, ರಸ್ತೆಗಳು ನಿರ್ಮಾನುಷ ವಾಗಿದ್ದವು. ಎಲ್ಲೆಡೆ ಕಾರ್ಗತ್ತಲು, ಮೈ ಕೊರೆಯುವ ಚಳಿ ಬೇರೆ. ಪಟ್ಟಣದಲ್ಲಿ ಯಾರೂ ಇರಲಿಲ್ಲ. ಬೀದಿಗಳನ್ನು ಸುತ್ತಾಡುತ್ತಿರುವಾಗ ಒಂದು ಬಂಗಲೆಯ ಗೋಡೆಯನ್ನು ಕೊರೆಯುತ್ತಿದ್ದ ಒಬ್ಟಾತ ಕಾಣಿಸಿದ. “ನಾನು ಇವತ್ತು ಒಂದು ದಿನ ನಿನ್ನ ಮನೆಯಲ್ಲಿ ಆಶ್ರಯ ಪಡೆಯ ಬಹುದೇ’ ಎಂದು ವಿಚಾರಿಸಿದೆ. ಅದಕ್ಕೆ, “ನಿಮ್ಮನ್ನು ನೋಡಿದರೆ ಸಂತನಂತೆ ಕಾಣಿಸುತ್ತಿದ್ದೀರಿ. ನಾನೊಬ್ಬ ಕಳ್ಳ. ಕಳ್ಳನೊಂದಿಗೆ ವಾಸ್ತವ್ಯ ಹೂಡುವುದು ನಿಮಗೆ ಒಗ್ಗೀತೇ?’
ಹಸನ್ ಮುಂದುವರಿಸಿದರು: ನನಗೆ ಕೊಂಚ ಹಿಂಜರಿಕೆಯಾಯಿತು. ಆಗ ಥಟ್ಟನೆ ಹೊಳೆಯಿತು, ಕಳ್ಳನಿಗೆ ನನ್ನಂಥ ಸಂತನ ಜತೆಗೆ ಇರುವುದಕ್ಕೆ ಅಂಜಿಕೆ ಇಲ್ಲ ಎಂದಾದರೆ, ಸಂತನಿಗೆ ಕಳ್ಳನ ಬಗ್ಗೆ ಏಕೆ ಹಿಂಜರಿಕೆ ಇರಬೇಕು! ಹಾಗಾಗಿ ಅಂದು ನಾನು ಅವನ ಮನೆಗೆ ಹೋದೆ. ಆತ ನನಗೆ ಎಷ್ಟು ಇಷ್ಟವಾದ ಎಂದರೆ, ಮತ್ತೆ ಒಂದು ತಿಂಗಳು ನಾನು ಅವನ ಮನೆ ಯಲ್ಲೇ ಇದ್ದೆ. ಪ್ರತೀ ದಿನ ಕತ್ತಲು ಮುಸುಕುತ್ತಿದ್ದಂತೆ ಆತ ತನ್ನ ಉದ್ಯೋಗಕ್ಕೆ ಹೊರಡುತ್ತಿದ್ದ. ದಿನಗಟ್ಟಲೆ ಖಾಲಿ ಕೈಯಲ್ಲಿ ಮರಳುತ್ತಿದ್ದ. ಆದರೆ ಇಂದಾ ದರೂ ಪ್ರಯತ್ನ ಫಲಿಸುತ್ತದೆ ಎಂಬ ವಿಶ್ವಾಸವನ್ನು ಆತ ಎಂದೂ ಕಳೆದು ಕೊಳ್ಳಲಿಲ್ಲ. “ಇವತ್ತು ಏನಾದರೂ ಸಿಗುತ್ತದೆ, ನನ್ನ ಯಶಸ್ಸಿಗಾಗಿ ಪ್ರಾರ್ಥಿಸಿ’ ಎಂದು ನನ್ನಲ್ಲಿ ವಿನಂತಿಸಿ ಆತ ಹೊರಡು ತ್ತಿದ್ದ. ಇದಾಗಿ ಎಷ್ಟೋ ವರ್ಷಗಳ ಬಳಿಕ ನನಗೆ ದೇವರ ಸಾಕ್ಷಾತ್ಕಾರವಾಯಿತು. ಎಷ್ಟೋ ಬಾರಿ ಮನಸ್ಸು ವಿಚಲಿತವಾದಾಗ ಆ ಕಳ್ಳನನ್ನು ಸ್ಮರಿಸಿಕೊಂಡು ಮನಸ್ಸು ಗಟ್ಟಿ ಮಾಡಿ ಕೊಳ್ಳುತ್ತಿದ್ದೆ. ಅವನು ನನ್ನ ಮೊದಲನೆಯ ಗುರು…
ಹಸನ್ ಮುಂದು ವರಿಸಿದರು: ಒಂದು ನಾಯಿಯೂ ನನಗೆ ಗುರುವಾಗಿತ್ತು. ಒಮ್ಮೆ ನಾನು ಕೊಳದ ಬಳಿಯಲ್ಲಿದ್ದಾಗ ಒಂದು ನಾಯಿ ನೀರು ಕುಡಿಯಲು ಬಂತು. ನೀರಿಗೆ ಇಣುಕಿ ದಾಗ ಅಲ್ಲಿ ತನ್ನ ಪ್ರತಿಬಿಂಬವನ್ನು ಕಂಡು ಅದಕ್ಕೆ ಹೆದರಿಕೆಯಾಯಿತು. ಅದು ಬೊಗಳಿದರೆ ಕೊಳದಲ್ಲಿದ್ದ ಪ್ರತಿಬಿಂಬವೂ ಬೊಗಳುತ್ತಿತ್ತು. ಕೊನೆಗೆ ನಾಯಿ ಆಸರು ತಡೆಯಲಾರದೆ ನೀರಿಗೆ ಹಾರಿತು. ಆಗ ಪ್ರತಿಬಿಂಬ ಕಲಸಿ ಹೋಗಿ ಹೆದರಿಕೆಯೂ ಮಾಯವಾಯಿತು. ಆಧ್ಯಾತ್ಮಿಕ ಮಾರ್ಗಕ್ಕೆ ಧುಮುಕುವುದಕ್ಕೆ ಇದ್ದ ಅಂಜಿಕೆಯನ್ನು ಓಡಿಸಿದ್ದು ಆ ನಾಯಿ. ಹೀಗಾಗಿ ಅದು ಕೂಡ ನನ್ನ ಗುರು…
ಹಸನ್ ಮುಂದುವರಿಸಿದರು: ಮೂರನೆಯ ಗುರು ಒಬ್ಬ ಪುಟ್ಟ ಬಾಲಕ. ಒಂದು ಸಂಜೆ ಒಬ್ಬ ಬಾಲಕ ಮೊಂಬತ್ತಿ ಹಿಡಿದುಕೊಂಡು ಹೊರಟಿದ್ದ. ದೇಗುಲ ದಲ್ಲಿ ಇನ್ನೊಂದು ದೀಪವನ್ನು ಉರಿಸುವು ದಕ್ಕಂತೆ. ನಾನು ತಮಾಶೆಯಾಗಿ, “ಈ ಬೆಳಕು ಬಂದದ್ದೆಲ್ಲಿಂದ’ ಎಂದು ಆತನನ್ನು ಪ್ರಶ್ನಿಸಿದೆ. ಬಾಲಕ ನಕ್ಕು ಮೊಂಬತ್ತಿಯನ್ನು ಊದಿ ಆರಿಸಿದ ಮತ್ತು “ಮಾನ್ಯರೇ, ಈ ಬೆಳಕು ಈಗ ಆರಿದೆ. ಅದು ಎಲ್ಲಿಗೆ ಹೋಯಿತು ಎಂದು ಉತ್ತರಿಸುವಿರಾ? ನನ್ನ ಈ ಪ್ರಶ್ನೆಗೆ ನಿಮ್ಮ ಉತ್ತರವೇ ನಿಮ್ಮ ಪ್ರಶ್ನೆಗೆ ನನ್ನ ಉತ್ತರ’ ಎಂದ. ಆಗ ನನ್ನ ಅಹಂ ಚೂರುಚೂರಾಯಿತು. ನಾನು ವಿನೀತನಾದೆ. ಹೀಗಾಗಿ ಆ ಮಗುವೂ ನನ್ನ ಗುರು…
ಹಸನ್ ಮಾತು ಮುಗಿಸಿದರು.
( ಸಾರ ಸಂಗ್ರಹ)