Advertisement

ಉಪೇಕ್ಷಾ ಎನ್ನುವ ಮಧ್ಯಮ ಮಾರ್ಗ

02:48 AM Jan 21, 2021 | Team Udayavani |

ಜೀವನದ ಬಹುತೇಕ ಎಲ್ಲ ಸಂದರ್ಭಗಳಲ್ಲಿ ನಮ್ಮ ಆಯ್ಕೆಗಳು ಬಹಳ ಸರಳ ಮತ್ತು ಸುಲಭವಾಗಿರುತ್ತವೆ. ತುಂಬಾ ಸಲೀಸಾಗಿ ತೆಗಳುತ್ತೇವೆ, ನಿಂದಿಸುತ್ತೇವೆ, ಹೊಗಳುತ್ತೇವೆ, “ಇದು ಕೆಟ್ಟದು, ಇದು ಒಳ್ಳೆಯದು’ ಎನ್ನುತ್ತೇವೆ. ನಾವು ಮಾತ್ರ ಅಲ್ಲ, ಈ ಲೋಕದ ಬಹುತೇಕ ಮಂದಿಯ ವ್ಯಸನವಿದು. ಬಹಳ ಯಾಂತ್ರಿಕವಾಗಿ ನಡೆಯುವ ಪ್ರಕ್ರಿಯೆ ಇದು.

Advertisement

ಏನನ್ನು ಕಂಡರೂ ಅರ್ಥ ಮಾಡಿ ಕೊಳ್ಳದೆ, ಅಪ್ರಜ್ಞಾಪೂರ್ವಕವಾಗಿ ನಿರ್ಣಯ ತೆಗೆದುಕೊ ಳ್ಳುತ್ತೇವೆ, ತೀರ್ಮಾನಿ ಸಿಬಿಡುತ್ತೇವೆ. ಒಂದು ಹೂವು ಕಂಡಿತು ಎಂದಿಟ್ಟುಕೊಳ್ಳಿ, “ಬಹಳ ಚೆನ್ನಾಗಿದೆ’ ಎಂದು ಹೇಳುತ್ತೇವೆ ಅಥವಾ ಮನಸ್ಸಿನಲ್ಲಾದರೂ ಹಾಗೆ ಅಂದುಕೊಳ್ಳು ತ್ತೇವೆ. ರಸ್ತೆಯ ಮೇಲೆ ಬೀದಿನಾಯಿ ಎದುರಾಯಿತು, “ಕಾಟು ನಾಯಿ’ ಎಂದು ಬೈದು ಬಿಡುತ್ತೇವೆ. ತೀರ್ಮಾನ, ನಿರ್ಧಾರಗಳು ಮೂಡುವುದು ಹೀಗೆ ಜನ್ಮಜಾತ ಶಾಪದಂತೆ. ತಪ್ಪು-ಒಪ್ಪುಗಳನ್ನು ಅಳೆದು ತೂಗಿ, ಆಲೋಚಿಸಿ, ಪ್ರಜ್ಞಾ ಪೂರ್ವಕವಾಗಿರುವುದು ನಮಗೆ ಗೊತ್ತೇ ಇಲ್ಲ. ನಾಣ್ಯದ ಎರಡೂ ಮುಖಗಳ ಅರಿವನ್ನು ಹೊಂದಿ ಮಧ್ಯಮ ಮಾರ್ಗ ವನ್ನು ತುಳಿಯುವುದು ನಮ್ಮಿಂದ ಸಾಧ್ಯವೇ ಇಲ್ಲ.

ಝೆನ್‌ ಗುರು ಛುವಾಂಗ್‌ ತ್ಸು ಅವರ ಮಠಕ್ಕೆ ಒಂದು ಬಾರಿ ಒಬ್ಬ ಯುವಕ ಬಂದ. ಗುರುಗಳ ಬಳಿ ಉಭಯ ಕುಶಲೋಪರಿ ನಡೆದ ಬಳಿಕ ಅವರ ಪ್ರೀತ್ಯರ್ಥವಾಗಿ ಒಂದು ತಾಸು ಸುಶ್ರಾವ್ಯ ವಾಗಿ ಬಾನ್ಸುರಿ ನುಡಿಸಿದ. ಆಮೇಲೆ ಆಶೀರ್ವಾದ ಪಡೆದು ಹೊರಟುಹೋದ.

ಮರುದಿನ ಛುವಾಂಗ್‌ ತ್ಸು ಅವರ ಬಳಿಗೆ ಊರಿನ ಒಬ್ಟಾತ ಬಂದು ಕಿವಿಯಲ್ಲಿ ಪಿಸು ಮಾತಿನಲ್ಲಿ, “ನಿನ್ನೆ ಮಠಕ್ಕೆ ಒಬ್ಬ ಬಂದಿದ್ದ ಎಂದು ಕೇಳಿದೆ. ಅವನೊಬ್ಬ ದೊಡ್ಡ ವಂಚಕ. ಊರಿನಲ್ಲಿ ಹಲವು ಕೃತ್ಯ ಎಸಗಿದ್ದಾನೆ…’ ಎಂದೆಲ್ಲ ನೂರು ದೂರುಗಳನ್ನು ಹೇಳಿದ.

ಛುವಾಂಗ್‌ ತ್ಸು ಮೆಲುದನಿಯಲ್ಲಿ ಹೇಳಿದ, “ಆದರೆ ಅವನು ಬಹಳ ಚೆನ್ನಾಗಿ ಬಾನ್ಸುರಿ ನುಡಿಸುತ್ತಾನೆ. ನಿನ್ನೆ ನಾನೇ ಕಿವಿಯಾರೆ ಕೇಳಿದ್ದೇನೆ…’

Advertisement

ಅಷ್ಟು ಹೊತ್ತಿಗೆ ಊರಿನ ಇನ್ನೊಬ್ಬ ಬಂದ. ಗುರುಗಳ ಕುಶಲ ವಿಚಾರಿಸಿದ ಬಳಿಕ, “ನಿನ್ನೆ ನಮ್ಮವನೊಬ್ಬ ಇಲ್ಲಿಗೆ ಬಂದಿದ್ದನಂತಲ್ಲ? ಬಹಳ ಒಳ್ಳೆಯ ಹುಡುಗ, ಈ ಆಸುಪಾಸಿನಲ್ಲಿ ಅವನಷ್ಟು ಒಳ್ಳೆಯ ಬಾನ್ಸುರಿ ವಾದಕ ಇನ್ನೊಬ್ಬ ಇಲ್ಲ. ಎಷ್ಟು ಚೆಂದ ನುಡಿಸುತ್ತಾನೆ ಅಂತೀರಿ…’ ಎಂದು ಹೊಗಳಿದ.

ಛುವಾಂಗ್‌ ತ್ಸು, “ಆದರೆ ಅವನು ಬಹು ದೊಡ್ಡ ವಂಚಕನಂತೆ’ ಎಂದರು.

ಯುವಕನ ಬಗ್ಗೆ ದೂರು ಹೇಳಿದವನು, ಹೊಗಳಿದವನು – ಇಬ್ಬರೂ ಅಲ್ಲೇ ಇದ್ದರು. ಇಬ್ಬರೂ ಏಕಸ್ವರದಲ್ಲಿ “ನಿಮ್ಮ ಮಾತಿನ ಅರ್ಥವೇನು’ ಎಂದು ಪ್ರಶ್ನಿಸಿದರು.

ಛುವಾಂಗ್‌ ತ್ಸು ಹೇಳಿದರು, “ನಾನು ನಿಮ್ಮಿಬ್ಬರ ಹೇಳಿಕೆಗಳನ್ನೂ ಸ್ವೀಕರಿಸಿದ್ದೇನೆ. ತೀರ್ಮಾನ ತೆಗೆದುಕೊಳ್ಳುವುದಕ್ಕೆ ನಾನ್ಯಾರು? ಅವನು ಒಬ್ಬ ವಂಚಕ, ಒಬ್ಬ ಒಳ್ಳೆಯ ಬಾನ್ಸುರಿ ವಾದಕ – ಎರಡೂ ಹೌದಾಗಿರಬಹುದು. ಅವನು ಹೇಗಿ ದ್ದಾನೆಯೋ ಹಾಗೆಯೇ ಇದ್ದಾನೆ ಮತ್ತು ಇರುತ್ತಾನೆ. ನನ್ನ ತೀರ್ಮಾನದಿಂದ ಅದಕ್ಕೇನೂ ಭಂಗವಾಗುವುದಿಲ್ಲ. ನನ್ನ ಪಾಲಿಗೆ ಅವನು ಉತ್ತಮನೂ ಅಲ್ಲ, ಅಧಮನೂ ಅಲ್ಲ…’

ತೀರ್ಪುಗಳನ್ನು ತೆಗೆದುಕೊಳ್ಳದೆ ಇರಲು ಪ್ರಯತ್ನಿಸೋಣ; ಇದು ಕಷ್ಟಸಾಧ್ಯ, ಆದರೂ ಪ್ರಯತ್ನಿಸಬೇಕು. ನಮಗೆ ದ್ವೇಷ, ಸಿಟ್ಟು, ಕ್ರೋಧದ ಅನುಭವವಾದಾಗ, ದುಃಖ ಉಕ್ಕಿದಾಗ, ಸಂತೋಷ ತುಂಬಿಬಂದಾಗ… ಏನೇ ಭಾವನೆ ಇರಲಿ, ಒಂದೋ ಆ ತುದಿ ಅಥವಾ ಈ ತುದಿ ಎಂಬ ನಿಲುವು ಬೇಡ. ಸಮತೋಲನ ಇರಲಿ. ಮಧ್ಯಮ ಮಾರ್ಗದಲ್ಲಿ ನಡಿಗೆ ಇರಲಿ.

ಬೌದ್ಧರಲ್ಲಿ ಇದನ್ನು “ಉಪೇಕ್ಷಾ’ ಎನ್ನುತ್ತಾರೆ. “ಕೆಟ್ಟದು’, “ಒಳ್ಳೆಯದು’ – ಎರಡನ್ನೂ ತೀರ್ಮಾನಿಸುವುದಿಲ್ಲ. ಮಧ್ಯಮ ಮಾರ್ಗದಲ್ಲಿರುತ್ತೇವೆ. ಯಾವುದರ ಜತೆಗೂ ಗುರುತಿಸಿ ಕೊಳ್ಳುವುದಿಲ್ಲ. ಆಗ ಒಂದು ಪಾರದರ್ಶಕ ಪರಿವರ್ತನೆ ಉಂಟಾಗುತ್ತದೆ. ಅದು ನಾವು ಸಾಧಿಸಬೇಕಾದ ಪ್ರೌಢಿಮೆ.

(ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next