ಆಡ್ಯ ಕುಟುಂಬದ ಸದ್ಗೃಹಸ್ಥೆಯೊಬ್ಬ ರಿದ್ದರು. ಒಂದು ದಿನ ಸಂಜೆ ಅವರು ತನ್ನ ವಾರ್ಡ್‌ರೋಬ್ ತೆರೆದಿಟ್ಟುಕೊಂಡು ಕಣ್ಣೀರು ಸುರಿಸುತ್ತಿದ್ದರು, ಉಗುರು ಮುರಿದುಕೊಳ್ಳುತ್ತಿದ್ದರು. ಕೆಲಸದವಳು, “ಏನಾಯಿತು ಅಮ್ಮಾ’ ಎಂದು ಕೇಳಿದರೆ, “ನನ್ನ ಬಳಿ ಇಷ್ಟು ರಾಶಿ ಸೀರೆಗಳಿವೆ. ಇವತ್ತು ಸಂಜೆಯ ಸಮಾರಂಭಕ್ಕೆ ಯಾವುದನ್ನು ಉಡುವುದು ಎಂದು ತೋಚುತ್ತಿಲ್ಲವಲ್ಲ’ ಎಂದು ಬಿಕ್ಕಿದರು.
ಬದುಕಿನ ಇಂಥ ಗೊಂದಲದಿಂದ ಪಾರಾಗುವುದಕ್ಕೆ ಬಹಳ ಸರಳವಾದ ಒಂದು ಉಪಾಯವಿದೆ – ಎಷ್ಟು ಬೇಕೋ ಅಷ್ಟನ್ನು ಮಾತ್ರ ಇರಿಸಿಕೊಂಡು ಉಳಿದದ್ದನ್ನು ದಾನ ಮಾಡಿಬಿಡುವುದು! ಸೀರೆಗಳಾದರೆ ಏಳು ಸಾಕು – ಸೋಮ ವಾರದಿಂದ ತೊಡಗಿ ರವಿವಾರದ ವರೆಗೆ ದಿನಕ್ಕೊಂದರಂತೆ.
ಇದರರ್ಥ ಎಲ್ಲರೂ ಏಳು ಸೀರೆಗಳನ್ನು ಮಾತ್ರ ಹೊಂದಿರಬೇಕು, ಉಳಿದದ್ದನ್ನೆಲ್ಲ ತ್ಯಾಗ ಮಾಡಿಬಿಡಬೇಕು ಎಂದಲ್ಲ. ಭೋಗವಸ್ತುಗಳ ಜತೆಗೆ ಇದ್ದು-ಇಲ್ಲದಂತಹ ನಿರ್ಮೋಹಿ ಸಂಬಂಧ ಇರಿಸಿಕೊಳ್ಳುವುದಾದರೆ ಎಷ್ಟು ಬೇಕಾದರೂ ಇರಲಿ ಬಿಡಿ. ಆದರೆ ಅವೆಲ್ಲವನ್ನೂ ತಲೆಯ ಮೇಲೆ ಹೊತ್ತು ಕೊಂಡಂತಹ ವ್ಯಾಮೋಹ ಬೇಡ. ನಾವು ಮುಟ್ಟಿದ್ದೆಲ್ಲವೂ ನಮ್ಮದಾಗಬೇಕು, ಕಂಡ ದ್ದೆಲ್ಲವೂ ಬೇಕು ಎಂಬ ಮೋಹ ಇದ್ದರೆ ನಮ್ಮ ಬದುಕು ಒಳಿತಾಗುವುದಿಲ್ಲ.
ಪರಸ್ಪರ ಸಹಕಾರ ಮನೋಭಾವ, ಪರಸ್ಪರ ಕಲ್ಯಾಣದ ಆಶಯ, ನಮ್ಮ ಹಾಗೆ ಇನ್ನೊಬ್ಬರಿಗೂ ಒಳಿತಾಗಬೇಕು ಎಂದು ಆಶಿಸಿದ ಜೀವಿಗಳು ಮಾತ್ರ ಜೀವವಿಕಾಸ ಪ್ರಕ್ರಿಯೆಯಲ್ಲಿ ಉಳಿದು ಬೆಳೆದು ಬಂದಿವೆ. ಇದಕ್ಕೆ ವೈಜ್ಞಾನಿಕ ಸಾಕ್ಷಿಗಳಿವೆ. “ಉಳಿದವರು ಏನು ಬೇಕಾದರೂ ಆಗಲಿ, ನಾನು ಮಾತ್ರ ಉಳಿಯಬೇಕು’ ಎಂದು ಬಯಸಿದ ಜೀವಿಗಳು ಉಳಿಯದೆ ಅಳಿದು ಹೋಗಿವೆ. ಈ ಅಳಿವು ಕಾಲಾಂತರದಲ್ಲಿ ಸಂಭವಿಸಿದೆ. ನಮ್ಮ ಸುತ್ತಮುತ್ತ ಗಮನಹರಿಸಿದರೆ, “ನನಗೆ ಅದು ಬೇಕು, ಇದನ್ನು ನಾನು ಪಡೆಯಬೇಕು, ಹೇಗಾ ದರೂ ಸರಿ – ಅದು ನನ್ನದಾಗಬೇಕು’ ಎಂದು ಮೋಹಿಸುವವರ ಮುಖಗಳಲ್ಲಿ ಸಂತೋಷ, ಸಂತೃಪ್ತಿ ಇಲ್ಲದೆ ಇರುವು ದನ್ನು ಕಾಣಬಹುದು.
ನಮ್ಮ ಬಳಿ ಸಾವಿರ ವಸ್ತುಗಳಿದ್ದರೂ ಇವತ್ತಿಗೆ ಯಾವುದು ಎಂಬ ಗೊಂದಲದಲ್ಲಿ ತೊಳಲಾಡಬೇಕಾಗ ಬಹುದು. ಒಂದೇ ಅಥವಾ ಏನೂ ಇಲ್ಲದೆ ಅತ್ಯಂತ ಸಂತೋಷ, ಸಂತೃಪ್ತಿಗಳಿಂದ ಇದ್ದು ಬಿಡಬಹುದು. ಬದುಕುವುದಕ್ಕೆ ಯಾವುದು ಉತ್ತಮ ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕು.
ನಾವು ಉಪಯೋಗಿಸುವ ಪ್ರತಿ ಯೊಂದು ಕೂಡ ಈ ಭೂಮಿಯಿಂದಲೇ ಉತ್ಪನ್ನವಾದದ್ದು. ಈ ಭೂಮಿಯಿಂದ ಏನಾದರೂ ಹೊಸತನ್ನು ಅಗೆದು ತೆಗೆದು ಅದನ್ನು ತಲೆಯ ಮೇಲೆ ಹೊತ್ತುಕೊಳ್ಳ ಬೇಕು ಎಂಬ ಮೋಹದಿಂದಲೇ ಅನೇಕರು ಜೀವಿಸುತ್ತಾರೆ. ಅದು ನನ್ನೊ ಬ್ಬನದು ಮಾತ್ರ ಆಗಿರಬೇಕು ಎಂದು ಆಶಿಸುತ್ತಾರೆ. ಒಳ್ಳೆಯ ಜೀವನ ಅಂದರೆ ಹೊಸತನ್ನು ಪಡೆದು ಅದನ್ನು ತಲೆಯ ಮೇಲೆ ಹೊತ್ತು ತಿರುಗಾಡುತ್ತ ಅದರ ಭಾರದಿಂದ ಕುಸಿಯುತ್ತ ಬದುಕು ವುದಲ್ಲ. ನಾವು ಬದುಕಿರುವಾಗ ಖುಷಿ ಖುಷಿಯಾಗಿ ಈ ಭೂಮಿಯ ಮೇಲೆ ನಡೆದಾಡಬೇಕು, ಅದನ್ನು ತಲೆಯ ಮೇಲೆ ಹೊತ್ತು ತಿರುಗಾಡುವುದಲ್ಲ.
ಒಳ್ಳೆಯ ಬದುಕಿನ ನಮ್ಮ ಪರಿಕಲ್ಪನೆ ನಮಗಾಗಿ ಮತ್ತು ನಾವಿರುವ ಈ ಭೂಮಿಯ ಕ್ಷೇಮಕ್ಕಾಗಿ ಅರಳಲಿ. ಚೆನ್ನಾಗಿ ಬದುಕುವುದು ಎಂದರೆ ನಮ್ಮ ಬಳಿ ಏನೇನೆಲ್ಲ ಇದೆ, ಎಷ್ಟೆಲ್ಲ ಇದೆ ಎಂಬುದಕ್ಕೆ ಸಂಬಂಧಿಸಿದ್ದಲ್ಲ; ನಾವು ಹೇಗಿದ್ದೇವೆ ಎಂಬುದಕ್ಕೆ ಸಂಬಂಧಿ ಸಿದ್ದು. ಈ ಬದಲಾವಣೆ ನಮ್ಮಲ್ಲಿ ಮತ್ತು ಪ್ರತಿಯೊಬ್ಬರಲ್ಲಿಯೂ ಉಂಟಾದರೆ ಇನ್ನೆಷ್ಟೋ ಕೋಟಿ ಜನಸಂಖ್ಯೆ ಹೆಚ್ಚಳವಾದರೂ ಏನೂ ಸಮಸ್ಯೆ ಆಗದು.
(ಸಾರ ಸಂಗ್ರಹ)