Advertisement

ನಮ್ಮೊಳಗೆ ಇದೆ ಮುನ್ನಡೆಸುವ ಬೆಳಕು

11:43 PM Apr 08, 2021 | Team Udayavani |

ಅರಸ ಜನಕ ಮತ್ತು ಯಾಜ್ಞವಲ್ಕ್ಯ ಮುನಿಗಳ ನಡುವೆ ಇದ್ದದ್ದು ಅಪೂರ್ವವಾದ ಒಂದು ಅನುಬಂಧ. ಜನಕ ಎಲ್ಲ ದೊರೆಗಳಂತಲ್ಲ. ಜ್ಞಾನಕ್ಕೆ ಅತೀವ ಮಹತ್ವ, ಗೌರವ ನೀಡು ವಂಥವನು. ಸ್ವತಃ ಜ್ಞಾನಾರ್ಥಿ. ಯಾಜ್ಞವಲ್ಕ್ಯರು ಮಹರ್ಷಿಗಳು. ಅವರಿಬ್ಬರ ಭೇಟಿ ನಡೆದಾಗಲೆಲ್ಲ ತಾಸುಗಟ್ಟಲೆ ಬ್ರಹ್ಮಜ್ಞಾನ, ಆತ್ಮರಹಸ್ಯ, ಪಾರಮಾರ್ಥಿಕ ಸತ್ಯ ಇತ್ಯಾದಿ ವಿಚಾರಗಳು ಚರ್ಚೆಗೊಳ್ಳುತ್ತಿದ್ದವು.

Advertisement

ಒಂದು ಬಾರಿ ಯಾಜ್ಞವಲ್ಕ್ಯ ರ ಉಪಸ್ಥಿತಿಯಲ್ಲಿ ಜನಕ ಮತ್ತು ಇತರ ಶಿಷ್ಯರ ನಡುವೆ ವೈಶ್ವಾನರ ವಿದ್ಯೆಯ ಕುರಿತಾಗಿ ಸುದೀರ್ಘ‌ ಚರ್ಚೆ ನಡೆಯಿತು. ಶಿಷ್ಯಂದಿರು ಕೇಳಿದ ಎಲ್ಲ ಪ್ರಶ್ನೆಗಳಿಗೂ ದೊರೆ ಜನಕ ತೃಪ್ತಿಕರ ವಾದ ಉತ್ತರಗಳನ್ನು ನೀಡಿ ಅವರ ಸಂಶಯಗಳನ್ನು ಪರಿಹರಿಸಿದ. ಜನಕ ಹೊಂದಿದ್ದ ಜ್ಞಾನದ ಬಗ್ಗೆ ಸಂಪ್ರೀತರಾದ ಯಾಜ್ಞವಲ್ಕ್ಯರು ವರವೊಂದನ್ನು ಅವನಿಗೆ ಅನುಗ್ರಹಿಸಿದರು.

ಜ್ಞಾನದಾಹಿಯಾದ ಜನಕ ದೊರೆ ಆರೋಗ್ಯ, ಆಯುಷ್ಯ, ಸಂಪತ್ತು ಇತ್ಯಾದಿಗಳನ್ನು ಕೇಳಲಿಲ್ಲ. “ನನಗೆ ಕೇಳಬೇಕು ಅನ್ನಿಸಿದಾಗ ನಿಮಗೆ ಬ್ರಹ್ಮಜ್ಞಾನದ ಬಗೆಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವ ವರವನ್ನು ಕರುಣಿಸಿ’ ಎಂದು ಕೋರಿಕೊಂಡ.

ಕಾಲ ಸರಿಯಿತು. ಒಂದು ದಿನ ಎಂದಿನಂತೆ ಯಾಜ್ಞವಲ್ಕ್ಯರು ಜನಕನ ಆಸ್ಥಾನಕ್ಕೆ ಆಗಮಿಸಿದರು. ಅಂದು ಅವ ರಿಗೆ ಮಾತುಕತೆಗೆ ಮನಸ್ಸಿರಲಿಲ್ಲ. ಆದರೆ ಜನಕ ಬಿಡಬೇಕಲ್ಲ! ಮನಸ್ಸಾದಾಗ ಪ್ರಶ್ನೆ ಕೇಳಬಹುದು ಎಂದು ಮಹರ್ಷಿಗಳೇ ಕರುಣಿಸಿದ್ದ ವರ ಬೇರೆ ಇದೆ!

“ಓ ಮಹರ್ಷಿಗಳೇ, ನಮ್ಮನ್ನು ಎಚ್ಚರದಿಂದ ಇರಿಸುವ, ಕೆಲಸ ಕಾರ್ಯ ಗಳಲ್ಲಿ ತೊಡಗಿಕೊಳ್ಳುವಂತೆ ಮಾಡುವ ಶಕ್ತಿ- ಯಾವುದದು?’ ಎಂದು ಪ್ರಶ್ನಿಸಿದ.

Advertisement

“ಸೂರ್ಯ’ ಎಂದು ಉತ್ತರಿಸಿದರು ಯಾಜ್ಞವಲ್ಕ್ಯರು. “ಬೆಳಕಿನ ಮೂಲ ಒಬ್ಬನೇ ಸೂರ್ಯ. ಅವನಿಂದಾಗಿಯೇ ಮನುಷ್ಯ, ಪ್ರಾಣಿಗಳು, ಸಕಲ ಜೀವಜಗತ್ತು ಮುನ್ನಡೆಯುತ್ತದೆ’ ಎಂದರು.

“ಅದು ಸರಿ ಗುರುಗಳೇ. ಆದರೆ ರಾತ್ರಿ ಸೂರ್ಯನಿಲ್ಲದಿದ್ದಾಗ?’ ಮರುಪ್ರಶ್ನೆ ತೂರಿಬಂತು.

“ಚಂದಿರ, ಸೂರ್ಯನಿಲ್ಲದ್ದಾಗ ಚಂದ್ರನಿಂದ ಪಡೆದ ಬೆಳಕಿನಿಂದ ಜಗತ್ತು ಮುನ್ನಡೆಯುತ್ತದೆ’ ಎಂಬ ಉತ್ತರ ಸಿಕ್ಕಿತು.

ಜನಕನಲ್ಲಿ ಇನ್ನೂ ಪ್ರಶ್ನೆಗಳು ಇದ್ದವು: “ಒಪ್ಪಿದೆ. ಆದರೆ ಸೂರ್ಯ, ಚಂದ್ರ ಇಬ್ಬರೂ ಇಲ್ಲದಿದ್ದಾಗ?’

“ಸೂರ್ಯ ಕಂತಿ, ಚಂದ್ರನೂ ಇಲ್ಲದಿದ್ದಾಗ ಅಗ್ನಿಯೇ ನಮಗೆ ಬೆಳಕು’ ಎಂದರು ಯಾಜ್ಞವಲ್ಕ್ಯರು.

“ನಿಜ. ಇದೂ ಸರಿಯೇ. ಆದರೆ ಸೂರ್ಯ, ಚಂದ್ರ, ಅಗ್ನಿ – ಈ ಮೂರೂ ಇಲ್ಲದಿದ್ದಾಗ?’ ಮತ್ತೂಂದು ಪ್ರಶ್ನೆ ಬಂತು.

“ಇವು ಮೂರು ಕೂಡ ಇಲ್ಲದಿದ್ದಾಗ ನಮಗೆ ಧ್ವನಿಯೇ ಬೆಳಕು. ಕತ್ತಲೆಯಲ್ಲಿ ಏನೂ ಕೇಳದೆ ಇದ್ದಾಗ ಧ್ವನಿ ಬಂದತ್ತ ತಿರುಗಿ ಮುನ್ನಡೆಯುತ್ತೇವೆ’ ಎಂದರು ಗುರುಗಳು.

ಜನಕನಿಗೆ ಸಂತೋಷವಾಯಿತು. ಆದರೆ ಪ್ರಶ್ನೆ ಮುಗಿದಿರಲಿಲ್ಲ. “ಓ ಜ್ಞಾನಿ ಮುನಿಯೇ, ಸೂರ್ಯ ಚಂದ್ರರಿಲ್ಲದೆ, ಅಗ್ನಿಯೂ ಇಲ್ಲದೆ, ಧ್ವನಿಯೂ ಮೌನವಾಗಿದ್ದಾಗ ಏನು ಕಥೆ’ ಎಂದು ಕೇಳಿದ.

“ಆತ್ಮ – ಆತ್ಮ ನಮ್ಮ ಬೆಳಕಾಗುತ್ತದೆ. ಅದು ನಮ್ಮನ್ನು ಮುನ್ನಡೆಸುತ್ತದೆ’ ಎಂದು ಯಾಜ್ಞವಲ್ಕ್ಯರು ಉತ್ತರಿಸಿದರು.

ಅರಸ ಜನಕನಿಗೆ ಈ ಉತ್ತರದಿಂದ ಸಂತೃಪ್ತಿಯಾಯಿತು. ಆತ್ಮ, ಬ್ರಹ್ಮರಹಸ್ಯದ ಬಗೆಗೆ ಅವರಿಬ್ಬರು ಆ ಬಳಿಕ ಬಹುಕಾಲ ಸಂವಾದ ನಡೆಸಿದರು. ಶಿಷ್ಯ ಜನಕನೆದುರು ಗುರು ಯಾಜ್ಞವಲ್ಕ್ಯರು ಒಂದೊಂದಾಗಿ ಆತ್ಮರಹಸ್ಯದ ಪದರಗಳನ್ನು ತೆರೆದಿಡುತ್ತ ಹೋದರು. ಅವರಿಬ್ಬರ ಸಂವಾದದ ಫ‌ಲವಾಗಿ ಹುಟ್ಟಿದ್ದು ಬೃಹದರಣ್ಯಕ ಉಪನಿಷತ್‌.

( ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next