Advertisement

ಕನ್ನಡಿಯೇ ಇಲ್ಲದಿರುವಾಗ ಧೂಳು ಕೂರುವುದೆಲ್ಲಿ!

11:42 PM Feb 26, 2021 | Team Udayavani |

ಹ್ಯು ನೆಂಗ್‌ ಎಂಬೊಬ್ಬ ಝೆನ್‌ ಇದ್ದರು. ಅವರು ಇನ್ನಷ್ಟು ಕಲಿಯಲು ಬಯಸಿ ಇನ್ನೊಬ್ಬ ಮಹಾಗುರುವಿನ ಬಳಿಗೆ ಹೋದರು.

Advertisement

“ಇಲ್ಲಿಗೇಕೆ ಬಂದೆ? ನನ್ನಲ್ಲಿಗೆ ಬರಬೇಕಾದ ಅಗತ್ಯವೇ ಇರಲಿಲ್ಲವಲ್ಲ’ ಎಂದರು ಮಹಾಗುರು. ಪ್ರಾಯಃ ಗುರು ಗಳು ತನ್ನನ್ನು ಸ್ವೀಕರಿಸಲಿಲ್ಲ ಎಂದು ಕೊಂಡರು ಹ್ಯು ನೆಂಗ್‌. ಆದರೆ ಮಹಾ ಗುರುವಿಗೆ ಹ್ಯು ನೆಂಗ್‌ನ ಸಾಮರ್ಥ್ಯದ ಅರಿವಾಗಿತ್ತು. “ಇವತ್ತು ಅಥವಾ ನಾಳೆ ಇಲ್ಲಿ ಅಥವಾ ಇನ್ನೆಲ್ಲೋ ನಿನ್ನ ಪರಿವರ್ತನೆ ಆಗಿಯೇ ಆಗುತ್ತದೆ. ಅದರ ಲಕ್ಷಣಗಳು ಈಗಾ ಗಲೇ ನಿನ್ನಲ್ಲಿವೆ’ ಎಂದರು ಗುರುಗಳು.

“ಆದರೂ ನನ್ನನ್ನು ತಿರಸ್ಕರಿಸಬೇಡಿ’ ಎಂದು ವಿನಂತಿಸಿದರು ಹ್ಯು ನೆಂಗ್‌. ಹಾಗಾಗಿ ಮಹಾ ಗುರು ಅವರನ್ನು ತನ್ನ ಶಿಷ್ಯವರ್ಗದಲ್ಲಿ ಸೇರಿಸಿಕೊಂಡರು ಮತ್ತು ಆಶ್ರಮದ ಅಡುಗೆ ಮನೆಗೆ ಹೋಗಲು ಹೇಳಿದರು. “ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರು. ಮತ್ತೆ ನನ್ನಲ್ಲಿಗೆ ಬರಬೇಕಾ ಗಿಲ್ಲ. ಸಂದರ್ಭ ಒದಗಿದಾಗ ನಾನೇ ನಿನ್ನಲ್ಲಿಗೆ ಬರುತ್ತೇನೆ’ ಎಂದರು ಗುರು.

ಹ್ಯು ನೆಂಗ್‌ಗೆ ಧ್ಯಾನ ಮಾಡುವುದಕ್ಕಿ ರಲಿಲ್ಲ, ಯಾವುದೇ ಸಾಧನೆ ಇರಲಿಲ್ಲ, ಗ್ರಂಥ ಓದುವುದಕ್ಕೆ ಹೇಳಲಿಲ್ಲ. ಯಾವು ದನ್ನೂ ಕಲಿಸಿಕೊಡಲಿಲ್ಲ. ಎಲ್ಲರೂ ಬೇರೆ ಬೇರೆ ಸಾಧನೆ ಮಾಡುತ್ತಿದ್ದರೆ ಹ್ಯು ನೆಂಗ್‌ ಅನ್ನ – ಸಾರು, ಚಪಾತಿ-ಪಲ್ಯಗಳಲ್ಲಿ ನಿರತರಾಗಿದ್ದರು. ಭಿಕ್ಷುಗಳು, ಸಾಧಕರು, ಪಂಡಿತರು ಬರುತ್ತಿದ್ದರು- ಹೋಗುತ್ತಿ ದ್ದರು. ಹ್ಯು ನೆಂಗ್‌ ಕೆಲಸ ಬದಲಾಗಲಿಲ್ಲ. ಹನ್ನೆರಡು ವರ್ಷಗಳು ಸಂದವು.

ಮಹಾಗುರುವಿನ ಕೊನೆಗಾಲ ಸನ್ನಿಹಿ ತವಾಯಿತು. ತನ್ನ ಉತ್ತರಾಧಿಕಾರಿ ಯನ್ನು ಆರಿಸುವುದಕ್ಕಾಗಿ ಅವರು ಒಂದು ಸ್ಪರ್ಧೆ ಏರ್ಪಡಿಸಿದರು. ಯಾರು ಇದುವರೆಗೆ ತಾವು ಕಲಿತ ಸಮಸ್ತ ಜ್ಞಾನದ ಸಾರವನ್ನು ನಾಲ್ಕು ಸಾಲುಗಳ ಪದ್ಯವಾಗಿ ಹೊಸೆಯುವರೋ ಅವರಿಗೆ ಉತ್ತರಾಧಿ ಕಾರ ಎಂದು ಪ್ರಕಟಿಸಿದರು.

Advertisement

ಆಶ್ರಮದಲ್ಲಿ ಒಬ್ಬ ಶ್ರೇಷ್ಠ ವಿದ್ವಾಂಸ ರಿದ್ದರು. ಅವರೇ ಈ ಸ್ಪರ್ಧೆಯಲ್ಲಿ ಗೆಲ್ಲುತ್ತಾರೆ ಎಂಬುದು ಎಲ್ಲರಿಗೂ ಖಚಿತ ವಾಗಿ ತಿಳಿದಿತ್ತು. ಹಾಗಾಗಿ ಯಾರೂ ಪದ್ಯ ಹೊಸೆಯಲು ಹೋಗಲಿಲ್ಲ. ಆ ವಿದ್ವಾಂಸರು ಕೂಡ ಪದ್ಯ ಬರೆದು ನೇರ ವಾಗಿ ಗುರುವಿನ ಮುಂದೆ ಇರಿಸದೆ ರಾತ್ರಿ ಗುರುವಿನ ಕೋಣೆಯ ಗೋಡೆಯಲ್ಲಿ ಹೀಗೆ ಲೇಖೀಸಿದರು: “ಮನಸ್ಸು ಕನ್ನಡಿಯಂತೆ, ಅದರ ಮೇಲೆ ಧೂಳು ಕೂರುತ್ತದೆ; ಧೂಳು ಒರೆಸು, ಅದುವೇ ಸಾಕ್ಷಾತ್ಕಾರ.’

ಮರುದಿನ ಬೆಳಗ್ಗೆ ಮಹಾಗುರು ಎದ್ದಾಗ ಗೋಡೆಯ ಮೇಲೆ ಪದ್ಯ ಕಂಡಿತು. ಅವರು ಎಲ್ಲರನ್ನೂ ಕರೆದು “ಶಾಭಾಸ್‌! ಈ ಪದ್ಯ ಬರೆದವರು ಮೇಧಾವಿ, ಪರಮ ಸಾಕ್ಷಾತ್ಕಾರವನ್ನು ಹೊಂದಿದಾತ’ ಎಂದು ಶ್ಲಾ ಸಿದರು. ಆಶ್ರಮದ ಎಲ್ಲೆಡೆ ಇದರ ಬಗ್ಗೆಯೇ ಮಾತು. ಅಡುಗೆ ಮನೆಗೆ ಚಹಾ ಕುಡಿಯುವುದಕ್ಕಾಗಿ ಹೋದ ಕೆಲವರು ಪದ್ಯವನ್ನು ಮೆಲುಕು ಹಾಕುತ್ತ ಇದೇ ವಿಚಾರವಾಗಿ ಚರ್ಚೆ ನಡೆಸಿದರು.

ಅದನ್ನು ಕೇಳಿ ಹ್ಯು ನೆಂಗ್‌ ಗೊಳ್ಳೆಂದು ನಕ್ಕು ಬಿಟ್ಟರು. ಅಲ್ಲಿದ್ದವರಿಗೆ ಆಶ್ಚರ್ಯ. ಈ ಹ್ಯು ನೆಂಗ್‌ ಮಾತಾಡಿದ್ದು, ನಕ್ಕದ್ದನ್ನು ಯಾರೂ ಕಂಡಿರಲಿಲ್ಲ. “ಯಾಕೆ ನಗು? ನಗುವಂಥದ್ದೇನಿದೆ?’ ಎಂದರವರು.

“ನನಗೆ ಬರೆಯಲು ಗೊತ್ತಿಲ್ಲ. ಹಾಗಾಗಿ ಯಾರಾದರೂ ಬರೆದುಕೊಳ್ಳಿ- ಆ ಪದ್ಯ ತಪ್ಪು’ ಎಂದರು ಹ್ಯು ನೆಂಗ್‌. ಒಬ್ಬರು ಲೇಖನಿ ತೆಗೆದುಕೊಂಡರು- ಹ್ಯು ನೆಂಗ್‌ ಹೇಳಿದರು, “ಮನಸ್ಸೆಂಬುದು ಇಲ್ಲ, ಹಾಗಾಗಿ ಕನ್ನಡಿಯೂ ಇಲ್ಲ; ಧೂಳು ಕೂರುವುದೆಲ್ಲಿ? – ಇದನ್ನು ತಿಳಿದವನಿಗೆ ಪರಮ ಸಾಕ್ಷಾತ್ಕಾರ.’

ಆದರೆ ಗುರು ಇದನ್ನು ಒಪ್ಪಲಿಲ್ಲ. ಹ್ಯು ನೆಂಗ್‌ ಗುರುವಿನ ಕಾಲಿಗೆ ನಮಸ್ಕರಿಸಿ ಅಡುಗೆ ಮನೆಗೆ ಹಿಂದಿರುಗಿದರು.

ಆ ರಾತ್ರಿ ಮಹಾಗುರು ಅಡುಗೆ ಮನೆಗೆ ಬಂದು ಹ್ಯು ನೆಂಗ್‌ ಕಿವಿಯಲ್ಲಿ ಹೇಳಿದರು, “ನೀನು ಬರೆದದ್ದೇ ಸರಿ! ಆದರೆ ಆಗ ನಾನು ಹಾಗೆ ಹೇಳಿ ದ್ದರೆ ಇಲ್ಲಿರುವ ಮೇಧಾವಿಗಳೆಂದುಕೊಂಡ ಮೂರ್ಖರು ನಿನ್ನನ್ನು ಕೊಂದೇ ಬಿಡುತ್ತಿದ್ದರು. ಕಳೆದ ಹನ್ನೆರಡು ವರ್ಷಗಳ ಮೌನದಲ್ಲಿ ಪರಮ ಸಾಕ್ಷಾತ್ಕಾರ ನಿನ್ನಲ್ಲಿ ಆಗಿ ಹೋಗಿದೆ. ಆದರೆ ನಿನ್ನೊಳಗನ್ನು ಗುರುತಿಸುವವರು ಇಲ್ಲಿ ಯಾರೂ ಇಲ್ಲ. ಹಾಗಾಗಿ ಈಗಲೇ ಇಲ್ಲಿಂದ ಪಾರಾಗು…’

( ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next