ಪಟ್ನಾ : ಬೇನಾಮಿ ಆಸ್ತಪಾಸ್ತಿ ಸಂಗ್ರಹಿಸಿದ ಆರೋಪದಿಂದ ಕಳಂಕಿತರಾಗಿರುವ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಕ್ಕೆ ಜೆಡಿಯು ಮತ್ತು ಅದರ ನಾಯಕರಾಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನಾಲ್ಕು ದಿನಗಳ ಗಡುವು ನೀಡಿದ್ದಾರೆ.
ನಿತೀಶ್ ಕುಮಾರ್ ಅವರು ಇಂದು ಮಂಗಳವಾರ ತಮ್ಮ ಜೆಡಿಯು ಪಕ್ಷದ ಸಂಸದರು, ಶಾಸಕರು ಮತ್ತು ಪಕ್ಷದ ಇತರ ಪದಾಧಿಕಾರಿಗಳ ಸಭೆಯನ್ನು ಕರೆದಿದ್ದರು. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಮತ್ತು ಅವರ ಕುಟುಂಬ ಸದಸ್ಯರ ಬೇನಾಮಿ ಆಸ್ತಿಪಾಸ್ತಿಗಳ ಮೇಲೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇಡಿ) ದಾಳಿ ಮಾಡಿರುವ ಕುರಿತು ಸಭೆ ವಿಶೇಷವಾಗಿ ಚರ್ಚಿಸಿತು.
ಸಿಬಿಐ ಮತ್ತು ಇಡಿ ದಾಳಿಗಳ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ಕಳಂಕಿತರಾಗಿರುವ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಕುರಿತು ಆರ್‌ಜೆಡಿ ಒಂದು ನಿರ್ಧಾರಕ್ಕೆ ಬರಬೇಕಾಗಿದೆ ಎಂದು ಸಭೆಯಲ್ಲಿ ನಿತೀಶ್ ಹೇಳಿರುವುದಾಗಿ ವರದಿಯಾಗಿದೆ.
ತನ್ನ ವಿರುದ್ಧ ಮಾಡಲಾಗಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ತೇಜಸ್ವಿ ಯಾದವ್ ಅವರು ತಮ್ಮ ನಿಲುವೇನೆಂಬುದನ್ನು ವಿವರಿಸಬೇಕು ಅಥವಾ ಆ ಕುರಿತು ಸ್ಪಷ್ಟೀಕರಣ ನೀಡಬೇಕು ಎಂಬುದು ನಿತೀಶ್ ಅವರ ನಿಲುವಾಗಿದೆ.
ಪಟ್ನಾ ಮತ್ತು ದಿಲ್ಲಿಯಲ್ಲಿ ಬೇನಾಮಿ ಆಸ್ತಿಪಾಸ್ತಿಗಳನ್ನು ಸಂಗ್ರಹಿಸಿರುವುದಕ್ಕಾಗಿ ತೇಜಸ್ವಿ ಯಾದವ್ ವಿರುದ್ಧ ಎಫ್ಐಆರ್ ದಾಖಲಾಗಿದೆ.