ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಪಾಲುದಾರ ಪಕ್ಷವಾಗಿರುವ ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಬಿಹಾರಕ್ಕೆ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸುವ ನಿರ್ಣಯವನ್ನು ಅಂಗೀಕರಿಸಿದೆ. ಕಳೆದ ವರ್ಷವೂ ಬಿಹಾರ ಸಚಿವ ಸಂಪುಟವು ಈ ನಿರ್ಣಯವನ್ನು ಅಂಗೀಕರಿಸಿತ್ತು. ಒಂದು ವೇಳೆ ವಿಶೇಷ ಸ್ಥಾನಮಾನ ಸಾಧ್ಯವಾಗದಿದ್ದರೆ ಕನಿಷ್ಠ ವಿಶೇಷ ಹಣಕಾಸು ಪ್ಯಾಕೇಜ್ ಅನ್ನಾದರೂ ಕೇಂದ್ರ ಸರಕಾರ ನೀಡಬೇಕೆಂದು ಕಾರ್ಯಕಾರಿಣಿ ಆಗ್ರಹಿಸಿದೆ. ಪಟ್ನಾ ಹೈಕೋರ್ಟ್ ಶೇ.65 ಮೀಸಲಾತಿ ರದ್ದುಪಡಿಸಿದರೂ ಒಬಿಸಿ, ಇಬಿಸಿ, ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಿಸಬೇಕು ಎಂದು ಆಗ್ರಹಿಸಿದೆ.
ಸಂಸದ ಸಂಜಯ್ ಝಾಗೆ ಜೆಡಿಯು ಕಾರ್ಯಾಧ್ಯಕ್ಷ ಸ್ಥಾನ
ಜೆಡಿಯು ಕಾರ್ಯಾಧ್ಯಕ್ಷರಾಗಿ ರಾಜ್ಯಸಭೆ ಸಂಸದ ಸಂಜಯ್ ಝಾ ನೇಮಕಗೊಂಡಿದ್ದಾರೆ. ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬಿಜೆಪಿ ನಾಯಕತ್ವದೊಂದಿಗೆ ಝಾ ಉತ್ತಮ ಬಾಂಧವ್ಯ ಹೊಂದಿರುವ ಕಾರಣ, ಬಿಜೆಪಿ ಜತೆ ಸಮನ್ವಯತೆ ಸಾಧಿಸಲು ಅವರನ್ನು ನೇಮಕ ಮಾಡಲಾಗಿದೆ ಎನ್ನಲಾಗಿದೆ.