ಕನಕಪುರ: ರಾಜ್ಯ ಸರ್ಕಾರದ ವಿರುದ್ಧ ಪೋಸ್ಟರ್ ಅಂಟಿಸಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರು ತಮ್ಮ ಸ್ವ ಕ್ಷೇತ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಯದಿರುವುದು ವಿಪರ್ಯಾಸದ ಸಂಗತಿ ಎಂದು ಜೆಡಿಎಸ್ ಮುಖಂಡರು ವಾಗ್ಧಾಳಿ ನಡೆಸಿದರು.
ಅನಧಿಕೃತ ಪಹಣಿ ಮತ್ತು ಆರ್‌ಟಿಸಿ ಸೃಷ್ಟಿಸಿರುವ ಪ್ರಕರಣದ ಆರೋಪಿ ಕಾಂಗ್ರೆಸ್ ಮುಖಂಡ ರಾಮದುರ್ಗಯ್ಯನನ್ನು ನಗರಸಭೆ ಸದಸ್ಯತ್ವದಿಂದ ರದ್ದುಗೊಳಿಸಿ, ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲು ಆಗ್ರಹಿಸಿ ಜೆಡಿಎಸ್ ಮುಖಂಡರು ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಶಾಸಕ, ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಸಿಎಂ ಕುಮಾರಸ್ವಾಮಿ ಆಡಳಿತದಲ್ಲಿ ಯಾವ ಪರ್ಸೆಂಟೇಜ್ ಇರಲಿಲ್ಲ. ಆದರೆ, ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಬಿಜೆಪಿ ಸರ್ಕಾರ 40 ಪರ್ಸೆಂಟೇಜ್ ಸರ್ಕಾರ ಎಂದು ಬೊಬ್ಬೆ ಹೊಡೆಯುತ್ತಿರುವ ಕ್ಷೇತ್ರದ ಶಾಸಕರು, ಸಂಸದರು ತಮ್ಮ ಕ್ಷೇತ್ರದಲ್ಲಿ ಎಷ್ಟು ಪರ್ಸೆಂಟೇಜ್ ಕಮಿಷನ್ ನಡೆಯುತ್ತಿದೆ, ತಿಳಿದಿಲ್ಲವೇ ಎಂದು ನಲ್ಲಹಳ್ಳಿ ಶಿವಕುಮಾರ್, ಲೋಕೇಶ್ ಸರ್ದಾರ್ ಸೇರಿದಂತೆ ಜೆಡಿಎಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ನಗರ ಸಭೆ ವ್ಯಾಪ್ತಿಯಲ್ಲಿ ಅಕ್ರಮ: ನಗರ ಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಆಕ್ರಮ ನಡೆದಿದೆ. ನಗರ ಸಭೆ ಅಧಿಕಾರಿಗಳ ಸಹಿಯನ್ನೇ ನಕಲು ಮಾಡಿ, ಕಾಮಗಾರಿ ದೃಢೀಕರಣ ಪತ್ರ ಪಡೆದಿರುವುದು ನಮಗೆ ಗೊತ್ತಿದೆ. ಕ್ಷೇತ್ರದಲ್ಲಿ ಜೆಡಿಎಸ್ ನಾಯಕರಿಗೆ ಟೆಂಡರ್ ನೀಡದೆ ರಾಜಕೀಯ ಪೌರೋಹಿತ್ಯ ವಹಿಸಿ, ಟೆಂಡರ್‌ಗಳನ್ನು ಕಾಂಗ್ರೆಸ್ ನಾಯಕರಿಗೆ ಸೀಮಿತ ಮಾಡಿ, ಟೆಂಡರ್‌ಗಳಲ್ಲೂ ಅವ್ಯವಹಾರ ನಡೆಸಿದ್ದಾರೆ. ಸರ್ಕಾರದ ಗುತ್ತಿಗೆಗೆ ಸ್ಪಷ್ಟ ಆದೇಶವಿದ್ದರೂ, ಅದನ್ನು ಉಲ್ಲಂಘಿಸಿ 7 ಕೋಟಿಗೆ ಟೆಂಡರ್ ನೀಡಿದ್ದಾರೆ. ಜಲಜೀವನ್ ಮೀಷನ್, ಪಿಆರ್‌ಡಿ ಇಲಾಖೆಯಲ್ಲಿ ಅಕ್ರಮ ನಡೆದಿವೆ. ನರೇಗಾ ಯೋಜನೆಯಲ್ಲಿ ಉಯ್ಯಂಬಳ್ಳಿ ಹೋಬಳಿಯಲ್ಲಿ ನಡೆದಿರುವ ಅಕ್ರಮ, ರಾಜ್ಯದ ಯಾವುದೇ ಮೂಲೆಯಲ್ಲೂ ನಡೆದಿಲ್ಲ. ತಾಲೂಕಿನಲ್ಲಿ ನಡೆದಿರುವ ಅಕ್ರಮದ ದಾಖಲೆಗಳು ನಮ್ಮ ಬಳಿಯಿದೆ. ಮುಂದಿನ ದಿನಗಳಲ್ಲಿ ಎಲ್ಲ ಆಕ್ರಮಗಳನ್ನು ಬಯಲಿಗೆಳೆಯುತ್ತೇವೆ ಎಂದು ನಲ್ಲಹಳ್ಳಿ ಶಿವಕುಮಾರ್ ಹೇಳಿದರು.
ಸರ್ಕಾರಕ್ಕೆ ವಂಚನೆ: ರಾಮದುರ್ಗಯ್ಯ ಸಾರ್ವಜನಿಕ ಆಸ್ತಿಗೆ ನಕಲಿ ದಾಖಲೆ ಸೃಷ್ಟಿಸಿ, ಸರ್ಕಾರಕ್ಕೆ ವಂಚನೆ ಮಾಡಿ, ತಾಲೂಕಿಗೆ ಮಸಿ ಬಳಿಯುವ ಕೆಲಸ ಮಾಡಿದ್ದರೂ ಕಾಂಗ್ರೆಸ್ ನಾಯಕರು ಇವರ ಸದಸ್ಯತ್ವ ರದ್ದುಗೊಳಿಸಿ, ಪಕ್ಷದಿಂದ ಉಚ್ಚಾಟನೆ ಮಾಡದೇ ಇರುವುದನ್ನು ನೋಡಿದರೆ, ಕಾಂಗ್ರೆಸ್ ನಾಯಕರು ರಾಮದುರ್ಗಯ್ಯ ಮುಂದಿಟ್ಟುಕೊಂಡು ತಾಲೂಕಿನಲ್ಲಿ ಅಕ್ರಮ ಅವ್ಯವಹಾರ ನಡೆಸುತ್ತಿದ್ದಾರಿಯೇ ಎಂಬ ಅನುಮಾನ ಮೂಡುತ್ತಿದೆ. ತಾಲೂಕಿನ ಶಾಸಕರು, ಸಂಸದರಿಗೆ ನೈತಿಕತೆ, ಬದ್ಧತೆ ಇದ್ದರೆ ನಿಮ್ಮ ತಾಲೂಕಿನಲ್ಲಿ ಭ್ರಷ್ಟಾಚಾರ ಮಾಡುತ್ತಿರುವ ಮುಖಂಡನನ್ನು ಪಕ್ಷದಿಂದ ಉಚ್ಚಾಟನೆ ಮಾಡಿ, ಸದಸ್ಯತ್ವ ರದ್ದುಗೊಳಿಸಿ ಬದ್ಧತೆ ಪ್ರದರ್ಶನ ತೋರಿಸಬೇಕಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ, ಬೂಟಾಟಿಕೆ ಹೋರಾಟವನ್ನು ಜನರು ನಂಬಲ್ಲ ಎಂದರು.
ಆರೋಪಿ ರಕ್ಷಣೆ: ರಾಮದುರ್ಗಯ್ಯನ ವಿರುದ್ಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ಮಾಡಿದ್ದರೂ ಅವರ ಸದಸ್ಯತ್ವ ರದ್ದು ಮಾಡದೆ, ಬಂದಿಕಾನೆಯಲ್ಲಿರುವ ಆರೋಪಿ ರಕ್ಷಣೆಗೆ ನಿಂತಿದ್ದಾರೆ. ಕೊಡಲೇ ಸದಸ್ಯತ್ವವನ್ನು ರದ್ದು ಮಾಡಿ, ಆಸ್ತಿ ಮುಟ್ಟುಗೋಲು ಹಾಕಿಕೊಂಡು ಪ್ರಕರಣದ ಹಿಂದಿರುವ ಎಲ್ಲಾ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು ಎಂದು ತಾಲೂಕು ಆಡಳಿತ ಮತ್ತು ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮುಖಂಡ ಸರ್ದಾರ್, ನಗರ ಸಭೆ ಸದಸ್ಯ ಸ್ಟೂಡಿಯೋ ಚಂದ್ರು ಮಾತನಾಡಿದರು.ತಾಲೂಕು ಜೆಡಿಎಸ್ ಅಧ್ಯಕ್ಷ ನಾಗರಾಜು, ಚಿನ್ನಸ್ವಾಮಿ, ಮುಖಂಡ ಹೊನ್ನಿಗನಹಳ್ಳಿ ಶಿವರಾಜು, ಚಿಕ್ಕನಳ್ಳಿ ಲೋಕೇಶ್, ಜಯರಾಮು, ನೀಲಮ್ಮ, ನಾರಾಯಣಪುರ ಮಂಜುನಾಥ್, ಕಬ್ಟಾಳು ಕಾಳರಾಜು, ಯಕ್ಬಾಲ್, ದೌಲತ್, ಅಲ್ಪ ಸಂಖ್ಯಾತರ ಅಧ್ಯಕ್ಷ ಅನ್ವರ್, ಚಿಕ್ಕಮರಿ, ಗುಡದಳ್ಳಿ ಕೃಷ್ಣಪ್ಪ, ನಾರಾಯಣಗೌಡ, ಕೆಂಪರಾಜು, ವೀರಪ್ಪ, ಎಸ್‌ಸಿ, ಎಸ್‌ಟಿ ಅಧ್ಯಕ್ಷ ದುರ್ಗಯ್ಯ, ಅಂಬೇಡ್ಕರ್ ನಗರ ಗುಂಡ, ಯುವ ಮುಖಂಡ ಸುರೇಶ್ ಸೇರಿದಂತೆ ತಾಲೂಕಿನ ಜೆಡಿಎಸ್ ಮುಖಂಡರು, ಮಹಿಳಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.