Advertisement

ರಾಜ್ಯದಲ್ಲಿ ಜೆಡಿಎಸ್‌ ಪರ ಅಲೆ, ಬಹುಮತದೊಂದಿಗೆ ಅಧಿಕಾರಕ್ಕೆ:ಎಚ್‌.ಡಿ. ಕುಮಾರಸ್ವಾಮಿ

11:28 AM Dec 02, 2022 | Team Udayavani |

ತುಮಕೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ರಾಜ್ಯದಲ್ಲಿ ರಾಜಕೀಯದ ಸುನಾಮಿ ಅಲೆ ಎದ್ದಿದ್ದು, ಜನತಾ ದಳದ ಪರವಾಗಿದೆ. ಜೆಡಿಎಸ್‌ನ ಈ ಸುನಾಮಿ ಅಲೆಯಲ್ಲಿ ಎಲ್ಲ ಪಕ್ಷಗಳೂ ಕೊಚ್ಚಿ ಹೋಗಲಿವೆ ಎಂದರು.

Advertisement

ನಗರದ ಸಿದ್ಧಗಂಗಾ ಮಠಕ್ಕೆ ಪಂಚರತ್ನ ರಥಯಾತ್ರೆ ಆಗಮಿಸಿದ ಸಂದರ್ಭದಲ್ಲಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಪೂಜೆ ಸಲ್ಲಿಸಿ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತ ನಾಡಿ, ಈಗಾಗಲೇ ರಾಜ್ಯದ ಜನತೆ ಜೆಡಿಎಸ್‌ಗೆ ಬಹುಮತ ನೀಡುವ ತೀರ್ಮಾನ ಮಾಡಿದ್ದಾರೆ. ರಾಜಕೀಯ ಗಾಳಿ ಗಂಧ ಗೊತ್ತಿಲ್ಲದವರೂ ಸಹ ಕುಮಾರಣ್ಣ ಸಿಎಂ ಆಗಬೇಕು ಎಂಬ ಮಾತುಗಳನ್ನಾಡುತ್ತಿದ್ದಾರೆ ಎಂದರು.

ರಾಜ್ಯದ 36 ವಿಧಾನಸಭಾ ಕ್ಷೇತ್ರದಲ್ಲಿ ಮೊದಲನೇ ಹಂತದ ಕಾರ್ಯಕ್ರಮ ನಿಗದಿ ಮಾಡಲಾಗಿದೆ. ಜನವರಿ 3 ರಿಂದ 2ನೇ ಹಂತದ ರಥಯಾತ್ರೆ ಕಲಬುರಗಿ, ಬೀದರ್‌, ರಾಯಚೂರು, ವಿಜಯಪುರ ಸೇರಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಯಾತ್ರೆ ನಡೆಯಲಿದೆ ಎಂದರು.

ಅಭ್ಯರ್ಥಿಗಳ ಪಟ್ಟಿ ಸದ್ಯದಲ್ಲೇ ಘೋಷಣೆ: ಮುಂಬರುವ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಸದ್ಯದಲ್ಲೇ ಘೋಷಣೆ ಮಾಡಲಾಗುವುದು. ಇದಕ್ಕೆ ಪೂರಕವಾಗಿ ರಥಯಾತ್ರೆ ಸಂಚರಿಸಿದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ಯಲ್ಲಿ ಈಗಾಗಲೇ 10 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ. ಡಿ. 7ರಂದು ಕೆಜಿಎಫ್ನಲ್ಲಿ ರಥಯಾತ್ರೆ ನಡೆಯಲಿದ್ದು, ಆ ಸಂದರ್ಭದಲ್ಲಿ ಆ ಜಿಲ್ಲೆಯ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುತ್ತದೆ ಎಂದರು.

ಮುಂದಿನ ತಿಂಗಳಿಂದ ಪ್ರಚಾರಕ್ಕೆ ಹೋಗುತ್ತೇನೆ; ಎಚ್‌.ಡಿ.ದೇವೇಗೌಡ 
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂದಿನ ತಿಂಗಳಿಂದ ನಾನು ಕೂಡ ಪ್ರಚಾರಕ್ಕೆ ಹೋಗುತ್ತೇನೆಂದು ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತಿಳಿಸಿದರು. ತಮ್ಮ ಪತ್ನಿ ಜತೆ ಗುರುವಾರ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನಕ್ಕೆ ತೆರಳಲು ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ಜೆಡಿಎಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಶಾಶ್ವತ ಅಲ್ಲ. ಪ್ರತಿ ದಿನ ಪಟ್ಟಿ ಬದಲಾವಣೆ ಆಗುತ್ತದೆ. ಪ್ರತಿ ದಿನ ಸಮೀಕ್ಷೆಯೂ ನಡೆಯುತ್ತಿದೆ. ಅದನ್ನು ಆಧರಿಸಿ ನಿರ್ಧಾರ ಆಗುತ್ತದೆ. ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಶಾಸಕ ಶಿವಲಿಂಗೇಗೌಡರು ಕುಮಾರಸ್ವಾಮಿ ಜತೆ ಮಾತನಾಡಿದ್ದಾರೆ. ದ್ವಂದ್ವ ಇದೆ ಇನ್ನೂ ಸಮಸ್ಯೆ ಬಗೆಹರಿದಿಲ್ಲ ಎಂದು ಪ್ರತಿಕ್ರಿಯಿಸಿದರು.

ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ನಮ್ಮ ಸಂವಿಧಾನದಲ್ಲಿ ಅವಕಾಶವಿಲ್ಲ. ಇದರಿಂದ ಬಿಜೆಪಿಗೆ ಲಾಭ ನಷ್ಟದ ಪ್ರಶ್ನೆಯಲ್ಲ. ಇದನ್ನು ಜಾರಿ ಮಾಡಲು ಹೊರಟರೆ  ವ್ಯಾಪಕ ವಿರೋಧ ವ್ಯಕ್ತವಾಗುತ್ತದೆ. ನಮ್ಮ ಸಂವಿಧಾನದಲ್ಲಿ ಏನಿದೆಯೋ ಅದಕ್ಕೆ ನಾವು ಬದ್ಧರಾಗಿರಬೇಕು. ಹಾಗಾಗಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ನನ್ನ ವಿರೋಧವಿದೆ.
●ಎಚ್‌.ಡಿ. ದೇವೇಗೌಡ, ಮಾಜಿ ಪ್ರಧಾನಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next