Advertisement

ಜನತಾ ಮಿತ್ರ ಜನಸಂಪರ್ಕ ಕಾರ್ಯಕ್ರಮಕ್ಕೆ ಚಾಲನೆ

09:06 PM Jul 01, 2022 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆ ಡಿಸೆಂಬರ್‌ನಲ್ಲೇ ಎದುರಾಗುವ ಸಾಧ್ಯತೆಗಳಿವೆ ಎಂದು ಭವಿಷ್ಯ ನುಡಿದಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಇದಕ್ಕಾಗಿ ಈಗಿನಿಂದಲೇ ಸಜ್ಜಾಗುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

Advertisement

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಶುಕ್ರವಾರ ಜನತಾಮಿತ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕನಿಷ್ಠ ಹದಿನೈದು ಕ್ಷೇತ್ರಗಳನ್ನುಗೆಲ್ಲುವ ವಾತಾವರಣ ಜೆಡಿಎಸ್‌ಗೆ ಇದೆ. ವಿಧಾನಸಭೆ ಮತ್ತು ಬಿಬಿಎಂಪಿ ಚುನಾವಣೆಗೆ ಕಾರ್ಯಕರ್ತರು ಸಂಘಟಿತರಾಗಬೇಕು. ಬೆಂಗಳೂರಿನಲ್ಲಿ ನಮ್ಮ ಪಕ್ಷ ಶಕ್ತಿಯುತವಾಗಿಲ್ಲ ಎಂಬ ಭಾವನೆಯನ್ನ ತೆಗೆದುಹಾಕಬೇಕು ಎಂದು ಹೇಳಿದರು.

ರಾಜರಾಜೇಶ್ವರಿ ನಗರದಲ್ಲಿ ಪಕ್ಷದ ಮತಗಳಿವೆ. ಕಾರ್ಯಕರ್ತರು ಇದನ್ನು ಮರೆಯಬಾರದು. ನಾವೇನು ಅಧಿಕಾರ ಇದ್ದಾಗ ಅಕ್ರಮವಾಗಿ ಹಣ ಲೂಟಿ ಮಾಡಿಲ್ಲ. ನಮ್ಮಲ್ಲಿ ಮೂರು ಜನ ಶಾಸಕರು ಪಕ್ಷದಲ್ಲಿ ಇದ್ದರು. ಅವರೂ ಬೇರೆ ಕಡೆ ಹೋಗಿದ್ದಾರೆ. ಚಾಮರಾಜಪೇಟೆಯಲ್ಲಿ ನಮ್ಮ ನಾಯಕರು ಹೋರಾಟ ಮಾಡಿದರು. ಅದರಿಂದಾಗಿ ಚಾಮರಾಜಪೇಟೆ, ಪುಲಕೇಶಿನಗರ, ಮಹಾಲಕ್ಷ್ಮೀಲೇಔಟ್‌ನಲ್ಲೂ ಗೆದ್ದೆವು. ಪಕ್ಷ ಉಳಿದರೆ ನಾವೆಲ್ಲಾ ಉಳಿಯುತ್ತೇವೆ ಎಂದರು ಅವರು.

ಭಗವಂತನ ಆಶೀರ್ವಾದದಿಂದ ಎರಡು ಬಾರಿ ಮುಖ್ಯಮಂತ್ರಿಯಾಗಿ ಇತಿಹಾಸದ ಪುಟ ಸೇರಿದ್ದೇನೆ. ಈಗಿನ ಸರ್ಕಾರ ಲೂಟಿ ಹೊಡೆಯುತ್ತಿದೆ. ಇದನ್ನು ಸಂಪೂರ್ಣವಾಗಿ ಬಂದ್‌ ಮಾಡಬೇಕು. ನನಗೆ ಒಂದು ಅವಕಾಶ ಕೊಡಲಿ. ನಮಗೆ ಇಪ್ಪತ್ತು ವರ್ಷ ಬೇಡ ಐದು ವರ್ಷದ ಅವಕಾಶ ಕೊಟ್ಟರೆ ಸಾಕು ಎಂದು ಮನವಿ ಮಾಡಿದರು.

ನಮ್ಮ ಕಾರ್ಯಕರ್ತರು ಪ್ರತಿ ಮನೆ ಮನೆಗೂ ಹೋಗಿ, ಅವರ ಆದ್ಯತೆ ಏನು ಎಂಬುದನ್ನು ಅರಿಯುವ ಕೆಲಸ ಮಾಡಿ. ಜನರಿಂದ ಎಲ್ಲಾ ಮಹಿತಿಯನ್ನು ಸಂಗ್ರಹಿಸೋಣ. ಮುಂದೆ ನಮ್ಮ ಸರ್ಕಾರ ಬಂದ ನಂತರ ಜನರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಅನುಕೂಲವಾಗಲಿದೆ ಎಂದು ಹೇಳಿದರು.

Advertisement

ಜನತಾ ಮಿತ್ರ ಕಾರ್ಯಕ್ರಮ ಹದಿನೈದು ದಿನಗಳ ಕಾಲ ನಡೆಯುತ್ತದೆ. ಬೆಂಗಳೂರು ನಗರದ ಕಾರ್ಯಕರ್ತರ ಸಮಾವೇಶವನ್ನು ಜುಲೈ 17 ರಂದು ನಡೆಸುತ್ತೇವೆ. ಸುಮಾರು ಒಂದೂವರೆ ಲಕ್ಷ ಜನ ಇದರಲ್ಲಿ ಭಾಗಿಯಾಗಬೇಕು ಎಂದರು.

ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿ, ಬಿಬಿಎಂಪಿ ಚುನಾವಣೆ ಬರುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ವಿಧಾನಸಭಾ ಚುನಾವಣೆ ಡಿಸೆಂಬರ್‌ ವೇಳೆಗೆ ಬರಲಿದೆ. ಅದಕ್ಕಾಗಿಯೇ ಸಚಿವ ಸಂಪುಟ ವಿಸ್ತರಣೆ ಮಾಡುತ್ತಿಲ್ಲ. ಸಿದ್ದರಾಮಯ್ಯನವರಿಗೆ ರಾಹುಲ್‌ ಗಾಂಧಿ ಚಿಂತೆ, ಬಸವರಾಜ ಬೊಮ್ಮಾಯಿಗೆ ಪ್ರಧಾನಿ ನರೇಂದ್ರ ಮೋದಿ ಚಿಂತೆ. ಆದರೆ, ಕುಮಾರಸ್ವಾಮಿಯವರಿಗೆ ರಾಜ್ಯದ ಜನರ ಚಿಂತೆ. ಬಿಜೆಪಿಯವರು ಡೂಪ್ಲಿಕೇಟ್‌ ನೀರಿಗೆ ಪೂಜೆ ಮಾಡುತ್ತಾರೆ, ನಾವು ಶುದ್ಧ ನೀರಿಗೆ ಪೂಜೆ ಸಲ್ಲಿಸಿದ್ದೇವೆ ಎಂದರು.

ಅಗಸ್ಟ್‌ನಲ್ಲಿ ಪಂಚರತ್ನ ರಥಯಾತ್ರೆ:
ಆಗಸ್ಟ್‌ನಲ್ಲಿ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಆರಂಭಿಸುತ್ತೇವೆ. ಹಳ್ಳಿ ಹಳ್ಳಿಗೆ ಹೋಗುತ್ತೇನೆ. ಮೂರು ತಿಂಗಳು ಬೆಂಗಳೂರಿಗೆ ಬರುವುದಿಲ್ಲ. ಎಲ್ಲೆಡೆ ಸುತ್ತುತ್ತೇನೆ. ಹದಿನೈದು ದಿನ ಬೆಂಗಳೂರಿಗೆ ಮೀಸಲು ಇಟ್ಟಿದ್ದೇನೆ. ಎಲ್ಲೆಲ್ಲಿ ಜನತಾ ಮಿತ್ರ ಕಾರ್ಯಕ್ರಮ ಮಾಡುತ್ತಾರೋ ಅಲ್ಲಿಗೆ ಹೋಗಿ ಮಾತನಾಡುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

“ಇಲ್ಲಿ ಸಂಬಳ ಪಡೆಯುವ ಐಎಎಸ್‌ ಅಧಿಕಾರಿಗಳು ಬಂಡವಾಳ ಹೂಡಿಕೆದಾರರಿಗೆ ಏನೇನೋ ಹೇಳ್ತಿದ್ದಾರೆ. ಕರ್ನಾಟಕದಲ್ಲಿ ಯಾಕೆ ಬಂಡವಾಳ ಹೂಡುತ್ತೀರಾ. ಗುಜರಾತ್‌ಗೆ ಹೋಗಿ ಅಂತಿದ್ದಾರೆ. ಚುನಾವಣೆ ಬರಲಿ ಆಗ ಎಲ್ಲವನ್ನೂ ಮಾತನ್ನಾಡುತ್ತೇನೆ.’
– ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಿಎಂ.

ಶತಾಯ-ಗತಾಯ ಹೋರಾಟಕ್ಕೆ ಎಚ್‌ಡಿಡಿ ಶಪಥ
ಬೆಂಗಳೂರು: “ಸಾಧ್ಯವಿಲ್ಲ ಅನ್ನುವುದನ್ನು ಸಾಬೀತು ಮಾಡಿ ತೋರಿಸುವುದೇ ನನ್ನ ಶಕ್ತಿ’ ಎಂದು ಗುಡುಗಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು, ನಮ್ಮ ಪಕ್ಷವನ್ನು ಯಾರು ತುಳಿಯಬೇಕೆಂದು ಪ್ರಯತ್ನ ಮಾಡಿದ್ದಾರೋ ಅವರ ವಿರುದ್ಧ ಶತಾಯ ಗತಾಯ ಹೋರಾಟ ಮಾಡುತ್ತೇನೆ ಎಂದು ಶಪಥ ಮಾಡಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಜನತಾಮಿತ್ರ ಜನ ಸಂಪರ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಸುಮ್ಮನೆ ಕೂರುವುದಿಲ್ಲ. ಕೂರಲು ಏಳಲು ಆಗುವುದಿಲ್ಲ ಎಂದು ಹಾಸ್ಯ ಮಾಡಿದವರಿಗೆ ನಾನು ಉತ್ತರ ಕೊಡುತ್ತೇನೆ ಎಂದರು.

ಮೊದಲು ಜಲಧಾರೆ ಕಾರ್ಯಕ್ರಮ ಆಯಿತು. ಈಗ ಜನತಾ ಮಿತ್ರ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರಿಗೆ ಏನು ಮಾಡಿದ್ದೇವೆ ಅನ್ನೋದನ್ನು ತುಂಬಾ ಮಾತನಾಡಬಲ್ಲೆ . ಬೆಂಗಳೂರಿಗೆ ಏನೇನು ಮಾಡಿದ್ದೇನೆ ಅನ್ನೋದನ್ನು ಹೇಳುವ ಕಾಲ ಬರುತ್ತದೆ. ಈ ದೇವೇಗೌಡ ಹಳ್ಳಿ ರೈತನ ಮಗ. ಕೆಲವರು ಏನು ಮಾಡಲು ಆಗುತ್ತೆ ಅಂತಾ ಕುಹಕವಾಡಿದ್ದಾರೆ. ಅವರಿಗೆಲ್ಲಾ ಉತ್ತರ ಕೊಡಬೇಕು ಎಂದು ಹೇಳಿದರು.

ನಮ್ಮ ಪಕ್ಷಕ್ಕೆ ಶಕ್ತಿ ಇಲ್ಲ ಅಂತಾ ಅಪಹಾಸ್ಯ ಮಾಡುತ್ತಾರೆ. ನಮ್ಮ ಶಕ್ತಿ ಏನು ಅನ್ನೋದನ್ನುಸಾಬೀತುಪಡಿಸುತ್ತೇನೆ. ಈ ಭಾರಿ ನಮಗೆ ದೈವಿ ಶಕ್ತಿ ಇದೆ. ಪಕ್ಷದ ಪ್ರತಿಯೊಬ್ಬರೂ ಹೋರಾಟದ ಕೆಚ್ಚಿನಿಂದ ಕೆಲಸ ಮಾಡುತ್ತಿದ್ದಾರೆ. ನಮ್ಮ ಹೋರಾಟದ ಮೇಲೆ ಶಕ್ತಿ ಇದೆ. ಇದನ್ನು ನಾನು ಮಾಡುತ್ತೇನೆ. ಹೋರಾಟಕ್ಕೆ ಸಿದ್ದರಾಗಿ ನಿಲ್ಲಿ ಎಂದು ದೇವೇಗೌಡರು ಕಾರ್ಯಕರ್ತರಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಶಾಸಕ ಆರ್‌. ಮಂಜುನಾಥ್‌, ಕೇರಳ ರಾಜ್ಯದ ಜೆಡಿಎಸ್‌ ಪಕ್ಷದ ಸಚಿವ ಕೃಷ್ಣನ್‌ ಕುಟ್ಟಿ, ಕೇರಳ ಜೆಡಿಎಸ್‌ ಶಾಸಕ ಥಾಮಸ್‌ ಟಿ.ಮ್ಯಾಥ್ಯೂ, ಜೆಡಿಎಸ್‌ ನಗರ ಅಧ್ಯಕ್ಷ ಆರ್‌ ಪ್ರಕಾಶ ಮತ್ತಿತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next