Advertisement

ಬಿಜೆಪಿಯವರದ್ದು ಬೆನ್ನು ಮೂಳೆ ಇಲ್ಲದ ರಾಜಕೀಯ: ಹಿಂದಿ ದಿವಸ್ ವಿರುದ್ಧ ಜೆಡಿಎಸ್ ಆಕ್ರೋಶ

10:11 AM Jan 10, 2023 | Team Udayavani |

ಬೆಂಗಳೂರು: ರಾಜ್ಯ ಸರ್ಕಾರದ ಹಿಂದಿ ದಿವಸ ಆಚರಣೆಯ ವಿರುದ್ಧ ಜೆಡಿಎಸ್ ಕಿಡಿಕಾರಿದ್ದು, ಒಕ್ಕೂಟ ಸರ್ಕಾರದ ಅಣತಿಯಂತೆ, ವಿಶ್ವ ಹಿಂದಿ ದಿವಸದ ಬಗ್ಗೆ ಉತ್ಸುಕರಾಗಿರುವ ರಾಜ್ಯ ಬಿಜೆಪಿಯವರೆ, ನಿಮ್ಮ ಗುಲಾಮಗಿರಿಗೆ ಕನ್ನಡಿಗರ ಒಕ್ಕೊರಲ ಧಿಕ್ಕಾರ. ಹಿಂದಿ ಹೇರಿಕೆಯ ಹುನ್ನಾರಕ್ಕೆ ನಮ್ಮ ಭಾಷೆಯನ್ನು ಬಲಿ ಕೊಡುವ ನಿಮ್ಮ ‘ಬೆನ್ನು ಮೂಳೆ’ ಇಲ್ಲದ ರಾಜಕೀಯವನ್ನು ಬಲವಾಗಿ ಖಂಡಿಸುತ್ತೇವೆ ಎಂದು ಟ್ವೀಟ್ ಮಾಡಿದೆ.

Advertisement

ಬಹು ಭಾಷೆಯ, ಬಹುಸಂಸ್ಕ್ರತಿಯ ದೇಶ ನಮ್ಮ ಭಾರತ. ಕೇವಲ‌ ಒಂದು ಭಾಷೆಯನ್ನು ಮೆರೆಸುವ ಈ ಕೀಳು ಮಟ್ಟದ ರಾಜಕೀಯ ಏಕೆ? ಒಂದು ಭಾಷೆಯ ವೈಭವೀಕರಣದಿಂದಾಗಿ ಭಾರತದ ಅನ್ಯ ಭಾಷೆಗಳ ಶ್ರೀಮಂತಿಕೆಯನ್ನು ಗೌಣವಾಗಿಸುವ ಈ ಹುನ್ನಾರಕ್ಕೆ ಕನ್ನಡಿಗರ ಪ್ರಬಲ ವಿರೋಧವಿದೆ ಎಂದಿದೆ.

ನಮ್ಮ ದೇಶದ ಸಂವಿಧಾನದಲ್ಲಿ ರಾಷ್ಟ್ರಭಾಷೆಯೆಂಬ‌ ಪರಿಕಲ್ಪನೆಯೇ ಇಲ್ಲ. ಹಾಗಿದ್ದಾಗ, ಯಾವಾಗಿಂದ ಹಿಂದಿ ರಾಷ್ಟ್ರಭಾಷೆಯಾಯ್ತು? ಅಂತರರಾಷ್ಟ್ರೀಯ ಮಟ್ಟದಲ್ಲಿ ಹಿಂದಿಯನ್ನು ಈ ಪರಿ ವಿಜೃಂಭಿಸುವ ನಿಮ್ಮ ರಾಜಕೀಯವನ್ನು ಸ್ವಾಭಿಮಾನಿ‌ ಕನ್ನಡಿಗರು ಒಪ್ಪುವುದಿಲ್ಲ. ಇದಕ್ಕೆ ತಕ್ಕ‌ ಪ್ರತಿಫಲ ಉಣ್ಣುತ್ತೀರಿ. ಹಿಂದಿ‌ ಭಾಷಿಕ‌ ಪ್ರದೇಶಗಳು ಕನ್ನಡವೂ ಸೇರಿದಂತೆ ಭಾರತದ ಭಿನ್ನ ಭಾಷೆಗಳ ದಿವಸವನ್ನು ಆಚರಿಸುತ್ತವೆಯೇ? ಕೇವಲ ಒಂದು ಭಾಷೆಗೆ ಈ ಮಟ್ಟದ ಆದ್ಯತೆ ಏಕೆ? ಕೇಂದ್ರ ಬಿಜೆಪಿಯ ತಾಳಕ್ಕೆ ಕುಣಿಯುವುದು ಬಿಟ್ಟು ಬೇರೇನೂ ಬಾರದ ರಾಜ್ಯ ಬಿಜೆಪಿಯವರೆ, ನಿಮ್ಮ ಅಭಿಮಾನ ಶೂನ್ಯ ನಡೆಯು ತಲೆತಗ್ಗಿಸುವಂತದ್ದು ಎಂದು ಜೆಡಿಎಸ್ ಕಿಡಿಕಾರಿದೆ.

‘ನನ್ನ ಕನ್ನಡಕ್ಕಿಂತ ಯಾರೂ ದೊಡ್ಡವರಲ್ಲ” ಎಂದ ಕುವೆಂಪು ಅವರ ಕನ್ನಡಾಭಿಮಾನ ನಮ್ಮದೂ ಕೂಡ. ಭಾರತದ ಅಸಂಖ್ಯ ಶ್ರೀಮಂತ ಭಾಷೆಗಳಲ್ಲಿ ಹಿಂದಿಯೂ ಒಂದು. ಅದರ ಹೊರತಾಗಿ, ಹಿಂದಿ ಹೇರಿಕೆ, ವೈಭವೀಕರಣದ ಯಾವುದೇ ಕುತಂತ್ರದ ರಾಜಕೀಯಕ್ಕೆ ಧಿಕ್ಕಾರವೇ ಸೈ ಎಂದು ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next